ಸಾರಾಂಶ
ಲಕ್ಷ್ಮೇಶ್ವರ: ಪಟ್ಟಣದ ಕಮಲಾ ವೆಂಕಪ್ಪ ಎಂ.ಅಗಡಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ 21ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಸಸಿಗೆ ನೀರು ಹಾಕುವ ಮೂಲಕ ಭಾನುವಾರ ಉದ್ಘಾಟಿಸಲಾಯಿತು.
ಮನರಂಜನಾ ಕಂಪನಿಯ ಸಿಇಓ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಮುಕುಂದ ಗಲಗಲಿ ಮಾತನಾಡಿ, ಭಾರತವು ಮಾಹಿತಿ ತಂತ್ರಜ್ಞಾನದ ಕೇಂದ್ರವಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ. ಭಾರತೀಯ ಯುವ ವಿಜ್ಞಾನಿಗಳು ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುತ್ತಿದ್ದಾರೆ.ಇಂದು ಶಿಕ್ಷಣ ಪ್ರಬಲ ಅಸ್ತ್ರವಾಗಿದ್ದು, ಜೀವನದ ಗುರಿ ಮುಟ್ಟಲು ಸಿದ್ಧಿ,ಸಂಕಲ್ಪ ಮತ್ತು ನಿರ್ಧಾರ ಅವಶ್ಯಕ ಎಂದರು.ಇಂದಿನ ಜಾಗತಿಕ ವ್ಯವಸ್ಥೆಯಲ್ಲಿ ಸಾಕಷ್ಟು ಅವಕಾಶ ಇದ್ದು, ಜೀವನದ ಗುರಿ ಮತ್ತು ಕನಸು ನನಸಾಗಿಸಲು ಶಿಸ್ತು ಮತ್ತು ಬದ್ಧತೆ ಅವಶ್ಯ. ಸಂಸ್ಥೆಯ ಸಂಸ್ಥಾಪಕರು ಇಂತಹ ಗ್ರಾಮೀಣ ಪ್ರದೇಶದಲ್ಲಿ ಸಂಸ್ಥೆ ಹುಟ್ಟು ಹಾಕಿ 21 ವರ್ಷಗಳ ಸಾಧನೆ ಹೆಮ್ಮೆಪಡುವಂತಹದ್ದು, ಜತೆಗೆ ವೈದ್ಯಕೀಯ ಕ್ಷೇತ್ರದೊಂದಿಗೆ ವಿಜ್ಞಾನ ಪದವಿ ಪೂರ್ವ ಕಾಲೇಜು ಸ್ಥಾಪಿಸಿರುವುದು ದೂರದೃಷ್ಠಿ ಸಂಕೇತ ಎಂದು ಹೇಳಿದ ಅವರು, ತಾವು ಕೂಡ ಸಾಮಾನ್ಯ ಕುಟುಂಬದಿಂದ ಬಂದು ಇಂದು ಈ ಮಟ್ಟಕ್ಕೆ ಬೆಳೆಯಲು ಹೋರಾಟ, ಕಠಿಣ ಪರಿಶ್ರಮ ಮತ್ತು ಸ್ಪರ್ಧೆಗಳನ್ನು ಗೆದ್ದು ಈ ಮಟ್ಟಕ್ಕೆ ಬೆಳೆದಿರುವುದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಹರ್ಷವರ್ಧನ ಅಗಡಿ, ಸಂಸ್ಥೆಯು ಈ ಮಟ್ಟಕ್ಕೆ ಬೆಳೆಯಲು ಎಲ್ಲರ ಪರಿಶ್ರಮ, ಸಹಕಾರ ಕಾರಣವಾಗಿದ್ದು. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಹಾಗೂ ಸತತ ಪ್ರಯತ್ನದಿಂದ ಅಭ್ಯಾಸ ಮಾಡುವ ಮೂಲಕ ಹೆಚ್ಚಿನ ಸಾಧನೆ ಮಾಡಬೇಕು. ವಿದ್ಯಾರ್ಥಿಗಳ ಸಾಧನೆಯ ಮೂಲಕ ಕಾಲೇಜಿಗೆ ಉತ್ತಮ ಹೆಸರು ತರುವ ಕಾರ್ಯ ಮಾಡಬೇಕು ಎಂದು ಹೇಳಿದ ಅವರು, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಸೌಲಭ್ಯ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಕೈಗೊಳ್ಳುವ ಎಲ್ಲ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುವದಾಗಿ ಹೇಳಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ಗೀತಾ ಅಗಡಿ, ಸಮೀರ ಆನಂದ ಅಗಡಿ, ಟ್ರಸ್ಟಿ ಶಿಶಿರ ದೇಸಾಯಿ ಮಾತನಾಡಿದರು.
ಈ ವೇಳೆ ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ ವಾರ್ಷಿಕ ವರದಿ ವಾಚನ ಮಾಡಿದರು. ಡಾ. ರಾಜಶೇಖರ ಮೂಲಿಮನಿ ಅಗಡಿ ಸನ್ ರೈಸ್ ಆಸ್ಪತ್ರೆಯ ಪ್ರಗತಿ ಪರಿಶೀಲನೆಯ ಮಾಹಿತಿ ನೀಡಿದರು. ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಹಯವದನ ಎನ್ ಪಿಯು ಕಾಲೇಜಿನ ಪ್ರಗತಿಯ ವರದಿ ಓದಿದರು.ಸಮಾರಂಭದಲ್ಲಿ ಆರ್.ಎಂ. ಪಾಟೀಲ, ಡಾ. ಸುಭಾಷ ಮೇಟಿ, ವಿಕ್ರಮ ಶಿರೋಳ, ಪ್ರೊ. ಸೋಮಶೇಖರ ಕೆರಿಮನಿ, ದಿವ್ಯಾಶ್ರೀ ಹಡಗಲಿ, ಪ್ರೊ, ಗಿರೀಶ ಯತ್ತಿನಹಳ್ಳಿ, ಪ್ರೊ. ಬಸವರಾಜ ಸೊರಟೂರ. ಪ್ರೊ. ಎಸ್.ಎಫ್. ಕೊಡ್ಲಿ ಸೇರಿದಂತೆ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಹಾಗೂ ಉಪನ್ಯಾಸಕರು ಇದ್ದರು. ಕಾರ್ಯಕ್ರಮವನ್ನು ದಿವ್ಯಾಶ್ರೀ ಹಡಗಲಿ ಹಾಗೂ ಲಕ್ಷ್ಮೀ ನಿಶಾ ನಿರ್ವಹಿಸಿದರು.