ಭಾರತ ಸಾಂಸ್ಕೃತಿಕ ಶ್ರೀಮಂತಿಕೆಯ ತವರೂರು

| Published : Aug 15 2024, 01:58 AM IST

ಸಾರಾಂಶ

ಶ್ರಾವಣ ಮಾಸದ ಹಬ್ಬಹರಿದಿನಗಳು ಉತ್ತಮ ಸಂಸ್ಕೃತಿ ಸಂಸ್ಕಾರದ ಪ್ರತೀಕ

ಶಿರಹಟ್ಟಿ: ಭಾರತ ಕೇವಲ ಭೌಗೋಳಿಕ ಚಿತ್ರಣ ಹೊಂದಿದ ಸಂಪತ್ತಿನಿಂದ ಕೂಡಿದ ಭೂ ಪ್ರದೇಶವಲ್ಲ. ಇದು ಸಂಸ್ಕೃತಿಕ ಶ್ರೀಮಂತಿಕೆಯ ತವರೂರು. ಭಾವ ಸಮೃದ್ಧಿ ಮತ್ತು ಶಾಸ್ತ್ರ ಸಂಪತ್ತುಗಳಿಂದ ಕೂಡಿದ ದೇಶ ಎಂದು ಶಿಕ್ಷಕ ಸಿದ್ದಲಿಂಗೇಶ ಹಲಸೂರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹೆಬ್ಬಾಳ ಗ್ರಾಮದ ಹಾಲಸ್ವಾಮಿಗಳ ಮಠದಲ್ಲಿ ಹಮ್ಮಿಕೊಂಡ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಶ್ರಾವಣ ಮಾಸದ ಹಬ್ಬಹರಿದಿನಗಳು ಉತ್ತಮ ಸಂಸ್ಕೃತಿ ಸಂಸ್ಕಾರದ ಪ್ರತೀಕವಾಗಿದ್ದು, ಮನುಷ್ಯನಲ್ಲಿ ಉತ್ಸಾಹ ಹಾಗೂ ಮನಶುದ್ಧೀಕರಣ ಮಾಡುತ್ತವೆ. ಕುಟುಂಬಸ್ಥರು ಎಲ್ಲರೂ ಸೇರಿ ಆಚರಣೆ ಮಾಡುವ ಈ ಹಬ್ಬದಿಂದ ಉತ್ತಮ ಆಚಾರ ವಿಚಾರಗಳೊಂದಿಗೆ ಮನುಷ್ಯನ ಆರೋಗ್ಯ ಉತ್ತಮಪಡಿಸುವಲ್ಲಿ ಸಹಕಾರಿಯಾಗುತ್ತವೆ. ನಮ್ಮ ದೇಶ ಹಬ್ಬಗಳ ತವರೂರು. ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದ ದೇಶವಾಗಿದ್ದು, ಈ ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗುವದು ನಮ್ಮೆಲ್ಲರ ಕರ್ತವ್ಯ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನವೀನಕುಮಾರ ಅಳವಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ದೇಶದ ಕಲೆ ಸಾಹಿತ್ಯ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಈ ಸಾಂಸ್ಕೃತಿಕ ಪರಂಪರೆ ಉಳಿಸಿ ಬೆಳೆಸುವ ಕಾಯಕ ಮಾಡುತ್ತಿರುವ ನಮ್ಮ ಸಾಹಿತ್ಯ ಪರಿಷತ್ ಜತೆ ಎಲ್ಲರೂ ಕೈ ಜೋಡಿಸಬೇಕೆಂದರು.

ಶ್ರಾವಣ ಮಾಸ ಎಲ್ಲ ಮಾಸಗಳಿಗಿಂತ ಅತ್ಯಂತ ಶ್ರೇಷ್ಠ ಮಾಸ. ಈ ಅವಧಿಯಲ್ಲಿ ಹಿರಿಯರಿಂದ ಬಳುವಳಿಯಾಗಿ ಬಂದ ಹಬ್ಬ,ಪೂಜೆ ಪುನಸ್ಕಾರ ಮಾಡುವುದರಿಂದ ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯಲು ಸಾಧ್ಯ. ನಮ್ಮ ಭಾರತೀಯ ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗುವುದು ಗುರು ಹಿರಿಯರನ್ನು ಪೂಜ್ಯನೀಯವಾಗಿ ಕಾಣುವುದು ಭಾರತೀಯರ ಶ್ರೇಷ್ಠತೆ ಎಂದು ಹೇಳಿದರು.

ನಿವೃತ್ತ ಮುಖ್ಯೋಪಾಧ್ಯಾಯ ಎಂ.ಎ. ಪಾಟೀಲ, ಸಿ.ಟಿ. ಹುರಕಣ್ಣವರ, ಎಂ.ಸಿ.ಮರಡೂರಮಠ ಮಾತನಾಡಿದರು.

ಶ್ರೀ ಹಾಲಸ್ವಾಮಿಗಳು ಗುರುಪಾದ್ದೇವರಮಠ ಸಾನ್ನಿಧ್ಯ ವಹಿಸಿದ್ದರು. ಷಣ್ಮುಖಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಗೌರವಾಧ್ಯಕ್ಷ ಗಿರೀಶ ಕೋಡಬಾಳ, ಯಚ್ಚರಪ್ಪ ಪತ್ತಾರ, ಶಿವನಗೌಡ ಕಂಠಿಗೌಡ್ರ, ಶಿವಣ್ಣ ಹಾವೇರಿ, ಚನವೀರಗೌಡ ಅಂಗಡಿ, ಪುಟನಗೌಡ ಪುಟಮಲ್ಲಪ್ಪನವರ, ಬಸಯ್ಯ ಮಠದ, ಅಂದಪ್ಪ ಮೆಣಸಿನಕಾಯಿ, ಈರಣ್ಣ ಸಣ್ಣಮನಿ, ಜಿ.ಎನ್. ಪಾಟೀಲ, ಆರ್.ಟಿ. ಶಿವಪ್ಪಯ್ಯನಮಠ, ಎಚ್.ಟಿ. ಬಿಜ್ಜೂರು, ಎ.ಡಿ. ಹಿರೇಹೋಳಿ ಇದ್ದರು.

ಎಂ.ಬಿ. ಹಾವೇರಿ ಸ್ವಾಗತಿಸಿದರು.ಎಫ್.ವೈ.ಪಾಟೀಲ ನಿರೂಪಿಸಿದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಪಾಟೀಲ ವಂದಿಸಿದರು.