ಇಚ್ಛಾಶಕ್ತಿ ಇದ್ದರೆ ಮಾತ್ರ ವಿದ್ಯೆ ಒಲಿಯುತ್ತದೆ: ಬಿಇಒ ರಮೇಶ್‌

| Published : Aug 15 2024, 01:57 AM IST / Updated: Aug 15 2024, 01:58 AM IST

ಸಾರಾಂಶ

ಶಿವಮೊಗ್ಗದ ವಾಜಪೇಯಿ ಬಡಾವಣೆಯಲ್ಲಿರುವ ಕೆನರಾ ಬ್ಯಾಂಕ್‌ ಪ್ರದೇಶಿಕ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಪ್ರತಿಭಾವಂತ ಎಸ್ಸಿ, ಎಸ್ಟಿ ವಿದ್ಯಾರ್ಥಿನಿಯರಿಗೆ ಡಾ.ಬಿ.ಆರ್‌.ಅಂಬೇಡ್ಕರ್‌ ವಿದ್ಯಾರ್ಥಿ ವೇತನ ವಿದ್ಯಾಜ್ಯೋತಿ ವಿತರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆಸ್ತಿ, ಸಂಪತ್ತು ಇದ್ದ ಮಾತ್ರಕ್ಕೆ ವಿದ್ಯೆ ದಕ್ಕುವುದಿಲ್ಲ. ಕಲಿಕಾ ಇಚ್ಛಾಶಕ್ತಿ ಇದ್ದರೆ ಮಾತ್ರ ವಿದ್ಯೆ ಒಲೆಯುತ್ತದೆ ಎಂದು ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್‌ ಹೇಳಿದರು.

ನಗರದ ವಾಜಪೇಯಿ ಬಡಾವಣೆಯಲ್ಲಿರುವ ಕೆನರಾ ಬ್ಯಾಂಕ್‌ ಪ್ರದೇಶಿಕ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಪ್ರತಿಭಾವಂತ ಎಸ್ಸಿ, ಎಸ್ಟಿ ವಿದ್ಯಾರ್ಥಿಗ ಡಾ.ಬಿ.ಆರ್‌.ಅಂಬೇಡ್ಕರ್‌ ವಿದ್ಯಾರ್ಥಿ ವೇತನ ವಿದ್ಯಾ ಜ್ಯೋತಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅಂಬೇಡ್ಕರ್‌ ಓದುವ ಕಾಲದಲ್ಲಿ ಅವರ ಬಳಿ ಹಣ, ಆಸ್ತಿ ಯಾವುದು ಇರಲಿಲ್ಲ. ಬದಲಿಗೆ ಅವರಲ್ಲಿ ಇಚ್ಛಾಶಕ್ತಿ ಇತ್ತು. ಹೀಗಾಗಿ ಅವರು ವಿದ್ಯಾರ್ಥಿ ವೇತನದಿಂದಲೇ ದೇಶ, ವಿದೇಶದಲ್ಲೂ ವಿದ್ಯಾಭ್ಯಾಸ ಮಾಡಲು ಸಾಧ್ಯವಾಯಿತು ಎಂದರು.

ಸರ್ಕಾರದಿಂದ ಶಿಕ್ಷಣಕ್ಕೆ ಹೆಚ್ಚಿನ ಸೌಲಭ್ಯ ನೀಗುತ್ತಿದ್ದು, ಸರ್ಕಾರ ಜೊತೆಗೆ ಬ್ಯಾಂಕ್‌ಗಳು ಕೂಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿವಿಧ ಯೋಜನೆಯಡಿ ವಿದ್ಯಾರ್ಥಿ ವೇತನ ನೀಡುತ್ತಿವೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಅಚಲ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲೇಶಪ್ಪ ಮಾತನಾಡಿ, ಕೆನರಾ ಬ್ಯಾಂಕ್‌ ವತಿಯಿಂದ ನೀಡುತ್ತಿರುವ ವಿದ್ಯಾರ್ಥಿ ವೇತನಕ್ಕೆ ಅಂಬೇಡ್ಕರ್ ಹೆಸರಿಟ್ಟಿರುವುದು ಹೆಮ್ಮೆಯ ವಿಚಾರ. ಇವತ್ತು ಮಹಿಳೆ ಈ ದೇಶದ ಪ್ರಧಾನಿಯಾಗಿದ್ದಾರೆ ಎಂದರೆ ಅದು ಅಂಬೇಡ್ಕರ್‌ ಅವರ ಚಿಂತನೆಯ ಫಲ ಎಂದರು.

ಅಂಬೇಡ್ಕರ್‌ ಅವರು ದಲಿತರಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಜಾತಿ, ವರ್ಗದ ಜನರಿಗೆ ಅಂಬೇಡ್ಕರ್‌ ಬೇಕಾದವರಾಗಿದ್ದಾರೆ. ಅವರ ಚಿಂತನೆಯಿಂದಾಗಿ ಎಲ್ಲ ಕ್ಷೇತ್ರದಲ್ಲೂ ಹೆಣ್ಣು ಮಕ್ಕಳೂ ಸಾಧನೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ಶಿಕ್ಷಣ ಪಡೆಯಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಹಲವು ಯೋಜನೆಗಳ ಬಗ್ಗೆ ಹಲವರಿಗೆ ಮಾಹಿತಿ ಕೊರತೆ ಇದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ಪ್ರೇರಣೆ ಪಡೆದು ಸಾಧನೆಯ ಗುರಿಯತ್ತ ಸಾಗಬೇಕು ಎಂದು ಹೇಳಿದರು.ಬ್ಯಾಂಕ್‌ನ ಉಪ ಮಹಾ ಪ್ರಬಂಧಕ ದೇವರಾಜ್‌ ಮಾತನಾಡಿ, ವಿದ್ಯಾರ್ಥಿಗಳು ಈ ದೇಶದ ಭವಿಷ್ಯ. ಅವರ ಓದಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಎಂಬ ಉದ್ದೇಶದಿಂದ ಕೆನರಾ ಬ್ಯಾಂಕ್‌ನಿಂದ ಕಳೆದ 20 ವರ್ಷದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಧನ ನೀಡುತ್ತಾ ಬರಲಾಗುತ್ತಿದೆ. ಆರಂಭದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಇಂದು 60 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಇಂದಿನಿಂದಲೇ ಉಳಿತಾಯದ ಬಗ್ಗೆ ಅರಿವು ಹೊಂದಬೇಕು. ದಿನಕ್ಕೆ 10 ರು. ಉಳಿಸಿದರೂ ಒಂದು ವರ್ಷಕ್ಕೆ 3650 ರು. ಉಳಿತಾಯ ಮಾಡಬಹುದು ಎಂದು ಸಲಹೆ ನೀಡಿದರು.

ಇನ್ನು, ಕೆನರಾ ಬ್ಯಾಂಕ್‌ ಕೇವಲ ವ್ಯವಹಾರಕ್ಕೆ ಸೀಮಿತವಾಗದೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಬ್ಯಾಂಕ್‌ನ ಸಮಾಜಿಕ ಬದ್ಧತೆ ತೋರಿಸುತ್ತದೆ ಎಂದು ಕಾಡಾ ಉಪ ನಿರ್ದೇಶಕ ರಮೇಶ್‌ ಹೇಳಿದರು.

ಕಾರ್ಯಕ್ರಮದಲ್ಲಿ ಪ್ರತಿಭಾವಂತ ಎಸ್ಸಿ, ಎಸ್ಟಿ ವಿದ್ಯಾರ್ಥಿನಿಯರಿಗೆ ಡಾ.ಬಿ.ಆರ್‌.ಅಂಬೇಡ್ಕರ್‌ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಎಂ.ಕೆ.ರಾಥೋಡ್‌ ಇದ್ದರು.

.