ಸಾರಾಂಶ
ಶಿರಸಿ: ಜೀವನದಲ್ಲಿ ನಿರ್ಲಿಪ್ತತೆಯ ಅಭ್ಯಾಸದಿಂದ ಬದುಕಿನಲ್ಲಿ ಶಾಂತಿ, ನೆಮ್ಮದಿ, ಉತ್ಸಾಹ ಲಭಿಸುವಂತೆ ಆಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಸ್ವರ್ಣವಲ್ಲೀಯಲ್ಲಿಯಲ್ಲಿ ಸಂಕಲ್ಪಿತ ತಮ್ಮ ೩೪ನೇ ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯ ಪ್ರಥಮ ಚಾತುರ್ಮಾಸ್ಯದ ಸಂದರ್ಭದಲ್ಲಿ ಕುಳಿನಾಡು ಸೀಮೆಯ ಬಾರೆ ಹಾಗೂ ಮಲವಳ್ಳಿ ಭಾಗಿಯ ಶಿಷ್ಯ ಭಕ್ತರ ಸೇವೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.ಜೀವನದಲ್ಲಿ ನಿರ್ಲಿಪ್ತತೆಯನ್ನು ಅಭ್ಯಾಸ ಮಾಡಿಕೊಂಡವರು ಗೆಲ್ಲುತ್ತಾರೆ. ಆದರೆ ಜೀವನದ ಸುಖ-ದುಃಖಗಳಿಗೆ ಒಳಗಾಗುತ್ತಿರುವವರು ಕ್ರಮೇಣ ಸೋಲುತ್ತಾರೆ. ಜೀವನದಲ್ಲಿ ಸುಖ, ದುಃಖಗಳು ಅನಿವಾರ್ಯ. ಅವುಗಳಲ್ಲಿ ಮುಳುಗಿ ಬಿಟ್ಟರೆ ಬಹಳ ಕಷ್ಟ ಪಡಬೇಕಾಗುತ್ತದೆ, ಒಮ್ಮೊಮ್ಮೆ ಸೋಲುವ ಪ್ರಸಂಗವೂ ಬರುತ್ತದೆ. ಅವುಗಳಲ್ಲಿ ನಿರ್ಲಿಪ್ತತೆ ಅಭ್ಯಾಸ ಮಾಡಿಕೊಂಡರೆ ಅವರು ಗೆಲ್ಲುತ್ತಾರೆ. ನಿರ್ಲಿಪ್ತತೆಗೆ ಒಂದು ಶಾಸ್ತ್ರಕಾರರ ಉದಾಹರಣೆ ಕಮಲದ ಎಲೆ. ಕಮಲದ ಎಲೆಯು ನೀರಿನಲ್ಲಿಯೇ ಇದ್ದರೂ ಒದ್ದೆಯಾಗುವುದಿಲ್ಲ. ಹಾಗೆಯೇ ನಿರ್ಲಿಪ್ತರಾದ ವ್ಯಕ್ತಿಗಳು ಸಂಸಾರದಲ್ಲೇ ಇದ್ದರೂ ಸಂಸಾರದ ಸುಖ-ದುಃಖಗಗಳಿಂದ ಅವರು ಬಾಧಿತರಾಗುವುದಿಲ್ಲ ಎಂದು ಹೇಳಿದರು.ಈಗ ನಾವು ಇರುವ ಸ್ಥಿತಿ ಹೇಗಿದೆ ಎಂದರೆ ಯಾವಾಗಲೂ ಮನೆಯಲ್ಲಿಯೇ ಇದ್ದು ನೆನಪಾದಾಗ ದೇವಸ್ಥಾನಕ್ಕೆ ಹೋಗಿ ಬರುತ್ತೇವೆ. ಆದರೆ ನಮ್ಮ ಈ ಮನಸ್ಥಿತಿ ಬದಲಾಗಬೇಕು ಎಂದು ಡಿವಿಜಿ ಹೇಳುತ್ತಾರೆ. ಯಾವಾಗಲೂ ದೇವಸ್ಥಾನದಲ್ಲಿಯೇ ಇದ್ದು ನೆನಪಾದಾಗ ಮನೆಗೆ ಬರುವ ಹಾಗೆ ಆಗಬೇಕು. ದೇವಸ್ಥಾನದಲ್ಲಿ ಇದ್ದಾಗ ನಾವು ಇದು ನಮ್ಮ ಮನೆ ಅಲ್ಲ, ನಾವು ಬಂದಿರುವುದು ದೇವಸ್ಥಾನಕ್ಕೆ ಎಂದು ಅಂದುಕೊಳ್ಳುತ್ತೇವೆ. ಅದೇ ರೀತಿ ಮನೆಯಲ್ಲಿ ಇರುವಾಗಲೂ ಇದೇ ನನ್ನ ನಿಜ ಸ್ವರೂಪವಲ್ಲ, ನನ್ನ ಮೂಲ ಸ್ವರೂಪವೆಂಬ ಮನೆ ಬೇರೆ ಇದೆ ಎಂದು ನಮ್ಮ ಚಿಂತನೆ ಇರಬೇಕು. ದೀರ್ಘಕಾಲ ದೇವರ ಸನ್ನಿಧಿಯಲ್ಲಿಯೇ ಇದ್ದವರೂ ಇದ್ದಾರೆ. ಹಾಗೆ ನಿನ್ನ ದೈನಂದಿನ ಜೀವನ ಇರಬೇಕು ಎಂದು ಡಿವಿಜಿ ಹೇಳುತ್ತಾರೆ. ಇದೇ ನಿರ್ಲಿಪ್ತತೆ ಎಂದು ಹೇಳಿದರು.
ಮನೆಯಲ್ಲಿ ಹೊರ ಕೋಣೆ ಮತ್ತು ಒಳ ಕೋಣೆ ಎಂದು ಎರಡು ಕೋಣೆಗಳು. ಹೊರ ಕೋಣೆಯಲ್ಲಿ ಲೌಕಿಕ ವ್ಯವಹಾರಗಳು, ಹಾಗೆಯೇ ಒಳ ಕೋಣೆ (ದೇವರ ಕೋಣೆ)ಯಲ್ಲಿ ಯಾವಾಗಲೂ ಭಗವಂತನ ಚಿಂತನೆಯೊಂದಿಗೆ ಶಾಂತ ವಾತಾವರಣ ಇರಬೇಕು. ಅದೇ ರೀತಿ ನಮ್ಮ ಮನಸ್ಸಿನಲ್ಲಿಯೂ ಹೊರ ಮನಸ್ಸು ಲೌಕಿಕ ವ್ಯವಹಾರಗಳನ್ನು ನೆರವೇರಿಸುವುದು. ಅಲ್ಲಿ ಅನೇಕ ಲೌಕಿಕ ವ್ಯವಹಾರಗಳು ನಡೆಯುತ್ತಾ ಇರುತ್ತದೆ. ಆದರೆ ಸೂಕ್ಷ್ಮವಾದ ಒಳಮನಸ್ಸಿನಲ್ಲಿ ಪೂರ್ತಿಯಾಗಿ ಅಧ್ಯಾತ್ಮದ ಚಿಂತನೆ ಮತ್ತು ದೇವರ ಚಿಂತನೆ ಮಾತ್ರ. ನಮ್ಮ ಜೀವನದಲ್ಲೂ ಇದೇ ರೀತಿಯಲ್ಲಿ ವಿಭಾಗಿಸಿಕೊಂಡರೆ ನಿರ್ಲಿಪ್ತವಾದ ಬದುಕನ್ನು ಬದುಕಲು, ಶಾಂತಿಯನ್ನು ಮತ್ತು ಬಹಳ ಮುಖ್ಯವಾಗಿ ಗೆಲ್ಲುವುದಕ್ಕೆ ಸಾಧ್ಯವಿದೆ ಎಂದು ಹೇಳಿದರು.ಬೆಳಗ್ಗೆಯಿಂದ ಮಾತೆಯರು ಶಂಕರ ಸ್ತೋತ್ರ ಪಠಣ, ಭಗವದ್ಗೀತಾ ಪಠಣ ಹಾಗೂ ಲಲಿತಾ ಸಹಸ್ರನಾಮದಿಂದ ಅರ್ಚನೆ ಮಾಡಿದರು. ಗಾಯತ್ರೀ ಅನುಷ್ಠಾನ ನಡೆಯಿತು.
ಸೀಮೆಯ ಪ್ರಮುಖರಾದ ಪ್ರಸನ್ನ ಗಾಂವ್ಕರ್ ವಾಗಳ್ಳಿ, ವೆಂಕಟರಮಣ ಹೆಗಡೆ ಸುಂಕಸಾಳ, ಸುದರ್ಶನ ಭಟ್ ಕಂಚೀಮನೆ ಇದ್ದರು. ಆರ್.ಎಸ್. ಹೆಗಡೆ ಭೈರುಂಬೆ ನಿರ್ವಹಿಸಿದರು.