ಸಾರಾಂಶ
ತನ್ನದೆ ಸಂವಿಧಾನ ಅಳವಡಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಸಾಗಿ ಬಂದ ಭಾರತ ಇಂದು ಜಗತ್ತಿನ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಒಂದಾಗಿದೆ.
ಮುಂಡಗೋಡ:
ತನ್ನದೆ ಸಂವಿಧಾನ ಅಳವಡಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಸಾಗಿ ಬಂದ ಭಾರತ ಇಂದು ಜಗತ್ತಿನ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಒಂದಾಗಿದೆ ಎಂದು ತಹಸೀಲ್ದಾರ್ ಶಂಕರ ಗೌಡಿ ಹೇಳಿದರು.ಶುಕ್ರವಾರ ಇಲ್ಲಿಯ ತಾಲೂಕು ಕ್ರೀಡಾಂಗಣದಲ್ಲಿ ೭೫ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಗತ್ತಿನ ಅತಿ ದೊಡ್ಡ ಹಾಗೂ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದಾಗಿದೆ. ಚುನಾವಣೆ ವ್ಯವಸ್ಥೆಯಲ್ಲಿ ಕೂಡ ನಮ್ಮ ರಾಷ್ಟ್ರ ಅತ್ಯುನ್ನತ ಸ್ಥಾನ ಪಡೆದುಕೊಂಡಿದೆ. ನಮ್ಮ ಸಂವಿಧಾನವು ನಮಗೆ ಮೂಲಭೂತ ಹಕ್ಕಿನೊಂದಿಗೆ ಅವುಗಳನ್ನು ರಕ್ಷಿಸುವ ಮಾರ್ಗ ನೀಡಿದೆ. ಸಂವಿಧಾನದ ಹಕ್ಕುಗಳ ಉಪಯೋಗಿಸಿಕೊಳ್ಳುವ ಜತೆಗೆ ಕರ್ತವ್ಯಗಳ ಅರಿವು ಕೂಡ ತೀವ್ರ ಮುಖ್ಯವಾಗಿದೆ. ಭಾರತ ಜಗತ್ತು ತಿರುಗಿ ನೋಡುವಂತೆ ಬೆಳವಣಿಗೆ ಕಂಡಿದ್ದರೂ ಸಹ ಇಂದಿಗೂ, ಸಾಕಷ್ಟು ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ಸಂವಿಧಾನದಂತೆ ಪ್ರತಿಯೊಬ್ಬರು ತಮ್ಮ ಕರ್ತವ್ಯ ಅರಿತು ಭ್ರಷ್ಟಾಚಾರ ಮುಕ್ತವಾಗಿ ನಡೆದುಕೊಳ್ಳುವ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣ ಮಾಡಲು ಕೊಡುಗೆ ನೀಡಬೇಕಿದೆ ಎಂದರು.ಮಾಜಿ ಜಿಪಂ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ಜಗತ್ತಿನ ಭೂಪುಟದಲ್ಲಿ ಮುಂಚೂಣಿ ರಾಷ್ಟ್ರವಾಗಿ ಭಾರತ ಕಾಣುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಜಗತ್ತಿನ ಆರ್ಥಿಕ ಸದೃಢ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದರಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರ ಕೊಡುಗೆ ಇದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಒಗ್ಗೂಡಿ ಮತ್ತಷ್ಟು ಒಳ್ಳೆಯ ಕೆಲಸ ಮಾಡಿ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕಿದೆ ಎಂದು ಹೇಳಿದರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಮುಂಡಗೋಡ ಸಿಪಿಐ ಬರಮಪ್ಪ ಲೋಕಾಪುರ, ಸಾಮಾಜಿಕ ಧುರೀಣ ಎಂ.ಎನ್. ದುಂಡಸಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ, ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ ಹುಲಕೋಟಿ, ಚಿದಾನಂದ ಹರಿಜನ, ಸುಬಾಸ ಡೋರಿ, ಬಿಇಒ ಜಕ್ಕಣ್ಣ ಆಚಾರ್ಯ ಇದ್ದರು.