ಭಾರತ ಸಾಂಬಾರು ಬೆಳೆಗಳ ತವರೂರು: ಡಾ. ಎಸ್.ಎಸ್. ಅಂಗಡಿ

| Published : Mar 07 2024, 01:47 AM IST

ಭಾರತ ಸಾಂಬಾರು ಬೆಳೆಗಳ ತವರೂರು: ಡಾ. ಎಸ್.ಎಸ್. ಅಂಗಡಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ರೈತರು ಶುಂಠಿ, ಕರಿಬೇವು, ವಿಳ್ಯೆದೆಲೆ, ಹುಣಸೆ ಸಾಂಬಾರು ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಈ ಬೆಳೆಗಳಿಂದ ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ.

ಸಾಂಬಾರು ಬೆಳೆಗಳ ಉತ್ಪಾದನೆ ತಾಂತ್ರಿಕತೆ ಕುರಿತು ತರಬೇತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಜಿಲ್ಲೆಯಲ್ಲಿ ರೈತರು ಶುಂಠಿ, ಕರಿಬೇವು, ವಿಳ್ಯೆದೆಲೆ, ಹುಣಸೆ ಸಾಂಬಾರು ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಈ ಬೆಳೆಗಳಿಂದ ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕ ಡಾ. ಎಸ್.ಎಸ್. ಅಂಗಡಿ ಹೇಳಿದರು.

ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೇಂದ್ರೀಯ ತೋಟಗಾರಿಕೆ ಸಮಗ್ರ ಅಭಿವೃದ್ಧಿ ಮಿಷನ್ ಪ್ರಾಯೋಜಿತ ಯೋಜನೆ ಅಡಿಯಲ್ಲಿ ಶಿಗ್ಗಾಂವಿ ಕೃಷಿ ಇಲಾಖೆ, ರಾಣಿಬೆನ್ನೂರಿನ ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಸಾಂಬಾರು ಬೆಳೆಗಳ ಉತ್ಪಾದನೆ ತಾಂತ್ರಿಕತೆ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತವು ಸಾಂಬಾರು ಬೆಳೆಗಳ ತವರೂರಾಗಿದ್ದು ದೇಶದಲ್ಲಿ ವಿವಿಧ ಬಗೆಯ ಸಾಂಬಾರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ಬೆಳೆಗಳ ರಫ್ತಿನಿಂದ ದೇಶಕ್ಕೆ ಹೆಚ್ಚಿನ ಆದಾಯವು ಕೂಡಾ ದೊರಕುತ್ತಿದೆ. ಜಿಲ್ಲೆಯ ರೈತರು ಹೊಸ ತಾಂತ್ರಿಕತೆ ಅಳವಡಿಸಿಕೊಂಡು ಸಾಂಬಾರು ಬೆಳೆಗಳ ಉತ್ಪಾದನೆ ಹೆಚ್ಚಿಸಬೇಕೆಂದರು.

ಧಾರವಾಡ ಕೃಷಿ ಮಹಾವಿದ್ಯಾಲಯ ತೋಟಗಾರಿಕಾ ವಿಭಾಗದ ತೋಟಗಾರಿಕೆ ಸಮಗ್ರ ಅಭಿವೃದ್ಧಿ ಮಿಷನ್ ಯೋಜನೆ ಪ್ರಾಧ್ಯಾಪಕ ಹಾಗೂ ಪ್ರಧಾನ ಸಂಶೋಧಕ ಡಾ. ಡಾ. ಆರ್.ವಿ. ಹೆಗ್ಡೆ ಮಾತನಾಡಿ, ಸಾಂಬಾರು ಬೆಳೆಗಳಲ್ಲಿ ವೈವಿಧ್ಯತೆ ಅಧಿಕವಾಗಿದ್ದು, ಉತ್ತಮ ಗುಣಮಟ್ಟದ ಬೆಲೆ ದೊರಕುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರದ ವತಿಯಿಂದ ಸಾಂಬಾರು ಬೆಳೆಗಳ ಕುರಿತಂತಹ ತರಬೇತಿ ಆಯೋಜಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಡಕೆ ಬೆಳೆಯ ವಿಸ್ತೀರ್ಣವು ಅಧಿಕವಾಗಿರುವುದರಿಂದ ಮುಂದಿನ ದಿನಗಳಲ್ಲಿ ಬೆಲೆ ಕುಂಠಿತದಂತಹ ಸಮಯ ಎದುರಾದಾಗ ಆ ಪರಿಸ್ಥಿತಿ ನಿಭಾಯಿಸಲು ಅಡಕೆ ಬೆಳೆಯಲ್ಲಿ ಅಂತರ ಬೆಳೆಯಾಗಿ ಸಾಂಬಾರು ಬೆಳೆಗಳನ್ನು ಬೆಳೆಯಬೇಕು ಎಂದರು.

ದಾಲ್ಚಿನ್ನಿ ಬೆಳೆಯ ಪ್ರಾಮುಖ್ಯತೆ, ಬೇಸಾಯ ಕ್ರಮಗಳು, ಸಂಸ್ಕರಣೆ, ಮಾರುಕಟ್ಟೆಯ ವಿಷಯದ ಬಗ್ಗೆ ಹಾನಗಲ್ ತಾಲೂಕು ಗೆಜ್ಜೆಹಳ್ಳಿ ಪ್ರಗತಿಪರ ರೈತ ಗೋಪಾಲ ಆಚಾರ್ ತಮ್ಮ ಅನುಭವ ಹಂಚಿಕೊಂಡರು.

ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎಸ್.ಡಿ. ಬಳಿಗಾರ, ಹನುಮನಮಟ್ಟಿ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಜಿ.ಎಸ್., ದೇವಿಹೊಸೂರು ತೋಟಗಾರಿಕೆ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ. ಪ್ರಭುದೇವ ಅಜ್ಜಪ್ಪನವರ ಮಾತನಾಡಿದರು.

ಶುಂಠಿ ಬೆಳೆ ಮತ್ತು ಅರಿಷಿಣ ಬೆಳೆಯ ಉತ್ಪಾದನಾ ತಾಂತ್ರಿಕತೆಯ ಬಗ್ಗೆ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ತೋಟಗಾರಿಕೆ ವಿಭಾಗದ ಪ್ರಾಧ್ಯಾಪಕ ಡಾ. ಬಾಬು ಪಿ. ಹಾಗೂ ದಾಲ್ಚಿನ್ನಿ ಮತ್ತು ಕರಿಬೇವು ಬೆಳೆಯ ಬೇಸಾಯ ಮತ್ತು ಮಾರುಕಟ್ಟೆಯ ಬಗ್ಗೆ ಡಾ. ಸಂತೋಷ ಎಚ್.ಎಂ., ಸಾಂಬಾರು ಮಂಡಳಿಯ ಕಾರ್ಯ ಚಟುವಟಿಕೆ ಮತ್ತು ಯೋಜನೆಗಳ ಬಗ್ಗೆ ಸಾಂಬಾರು ಮಂಡಳಿ ಕ್ಷೇತ್ರ ಅಧಿಕಾರಿ ಬಾಪುಗೌಡ ಕ್ಯಾತನಗೌಡ್ರ ತಿಳಿಸಿದರು.

ತರಬೇತಿಯ ನಂತರ ಎಲ್ಲಾ ರೈತ ಹಾಗೂ ರೈತ ಮಹಿಳೆಯರಿಗೆ ಸಾಂಬಾರು ಬೆಳೆಗಳ ಸಸಿಗಳನ್ನು ಕೇಂದ್ರೀಯ ತೋಟಗಾರಿಕೆ ಸಮಗ್ರ ಅಭಿವೃದ್ಧಿ ಮಿಷನ್ ಪ್ರಾಯೋಜಿತ ಯೋಜನೆ ಅಡಿಯಲ್ಲಿ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗ ಮತ್ತು 100ಕ್ಕೂ ಹೆಚ್ಚು ಜನ ರೈತರು, ರೈತ ಮಹಿಳೆಯರು ಪಾಲ್ಗೊಂಡಿದ್ದರು.