ಬಳ್ಳಾರಿ: ಭಾರತವು ಬುದ್ಧನ ನಾಡು. ಇದು ಯಾವುದೇ ಒಂದು ಧರ್ಮಕ್ಕೆ ಸೀಮಿತವಾದ ರಾಷ್ಟ್ರವಲ್ಲ. ಬದಲಾಗಿ ಶಾಂತಿ ಮತ್ತು ಅಹಿಂಸೆಯನ್ನು ಸಾರಿದ ನಾಡಾಗಿದೆ ಎಂದು ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‌ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣ ಸಭಾಂಗಣದಲ್ಲಿ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಭಾರತವು ಗೌತಮ ಬುದ್ಧ ಅವರ ತತ್ವಗಳ ಮೂಲಕ ಜಗತ್ತಿಗೆ ಶಾಂತಿ, ಅಹಿಂಸೆ ಮತ್ತು ಸಮಾನತೆಯ ಸಂದೇಶವನ್ನು ನೀಡಿದ ಪವಿತ್ರ ನಾಡಾಗಿದೆ. ಬುದ್ಧನು ತನ್ನ ಉಪದೇಶಗಳ ಮೂಲಕ ಮಾನವ ಜೀವನದ ದುಃಖಗಳಿಗೆ ಪರಿಹಾರ ಮಾರ್ಗವನ್ನು ತೋರಿಸಿ, ಮಧ್ಯಮ ಮಾರ್ಗದ ಮಹತ್ವವನ್ನು ಸಾರಿದರು.
ಅಹಿಂಸೆ, ದಯೆ, ಕರುಣೆ ಮತ್ತು ಸತ್ಯದ ಮೌಲ್ಯಗಳನ್ನು ಬೋಧಿಸಿದ ಬುದ್ಧನ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಭಾರತವು ಈ ಮಹಾನ್ ಪರಂಪರೆಯನ್ನು ಹೊತ್ತ ನಾಡಾಗಿದ್ದು, ಜಗತ್ತಿಗೆ ಮಾನವೀಯ ಮೌಲ್ಯಗಳ ಹಣತೆಯಾಗಿದೆ ಎಂದರು.ಮೇಯರ್ ಪಿ.ಗಾದೆಪ್ಪ ಮಾತನಾಡಿ, ಗೌತಮ ಬುದ್ಧನು ಕೇವಲ ಒಬ್ಬ ವ್ಯಕ್ತಿಯಲ್ಲ. ಆತ ಅಹಿಂಸೆ ಮತ್ತು ಶಾಂತಿಯ ಜಾಗತಿಕ ಸಂಕೇತ. ತನ್ನ 29ನೇ ವಯಸ್ಸಿನಲ್ಲೇ ರಾಜ್ಯಭೋಗ, ಪತ್ನಿ, ಮಗು ಮತ್ತು ವೈಭವದ ಜೀವನವನ್ನು ತ್ಯಜಿಸಿ ಸಮಾಜದ ಶಾಂತಿಗಾಗಿ ಹಗಲಿರುಳು ಶ್ರಮಿಸಿದ ಮಹಾನ್ ಚೇತನ ಎಂದು ತಿಳಿಸಿದರು.
ಬುದ್ಧನು ಅರಮನೆಯ ಸುಖ-ಭೋಗಗಳನ್ನು ತೊರೆದು ಅಹಿಂಸೆಯ ಮಾರ್ಗವನ್ನು ಆಯ್ದುಕೊಂಡಿದ್ದು ಇಂದಿನ ತಲೆಮಾರಿಗೆ ದೊಡ್ಡ ಪ್ರೇರಣೆ. ನಮ್ಮ ದೇಶಕ್ಕೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಮತ್ತು ಗಾಂಧೀಜಿಯಂತಹ ಮಹಾನ್ ವ್ಯಕ್ತಿಗಳು ದಾರಿದೀಪವಾಗಿದ್ದಾರೆ. ಇವರಲ್ಲಿ ಬುದ್ಧನು ಪ್ರಾಚೀನ ಕಾಲದಲ್ಲೇ ಅಹಿಂಸೆಯ ಬುನಾದಿ ಹಾಕಿದವರು. ಇಂದಿನ ಅಶಾಂತಿಯ ವಾತಾವರಣದಲ್ಲಿ ಬುದ್ಧನ ಶಾಂತಿ ಮತ್ತು ಅಹಿಂಸೆಯ ತತ್ವಗಳನ್ನು ಪಾಲಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಮತ್ತು ಗಾಂಧೀಜಿಯವರು ಸಮಾಜದ ವಿವಿಧ ಕಾಲಘಟ್ಟಗಳಲ್ಲಿ ಶೋಷಣೆ ಮುಕ್ತ ಹಾಗೂ ಸಮಾನತೆಯ ಸಮಾಜಕ್ಕಾಗಿ ಶ್ರಮಿಸಿದ ಮಹಾನ್ ಚೇತನಗಳು. ಅವರ ವಿಚಾರಧಾರೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಅಭಿಪ್ರಾಯಪಟ್ಟರು.
ಕೇವಲ ಮದುವೆಯಾಗದಿರುವುದು ಬ್ರಹ್ಮಚರ್ಯವಲ್ಲ, ಬದಲಾಗಿ ಎಲ್ಲಾ ವಿಷಯಗಳಲ್ಲಿ ಶಿಸ್ತು ಮತ್ತು ಕಟ್ಟುನಿಟ್ಟಾದ ಜೀವನ ನಡೆಸುವುದು ನಿಜವಾದ ಬ್ರಹ್ಮಚರ್ಯ ಎಂದು ಬುದ್ಧನ ಬೋಧನೆಗಳನ್ನು ವಿಶ್ಲೇಷಿಸಿದರು.
ಬಳ್ಳಾರಿಯ ಎಸ್‌ಎಸ್‌ಎ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸೋಮನಾಥ್ ಸಿ.ಹೆಚ್ ಅವರು ಜಯಂತಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ದಲಿತ ಸಾಹಿತಿ ಎನ್.ಡಿ.ವೆಂಕಮ್ಮ, ಕೊಡ್ಲೆ ಮಲ್ಲಿಕಾರ್ಜುನ, ಬಳ್ಳಾರಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರಾಜೇಂದ್ರ ಪ್ರಸಾದ್, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಕಮಲರತ್ನ ಬಂತೇಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಸಮಾಜದ ಹಿರಿಯ ಮುಖಂಡರು, ಬುದ್ಧ ಅನುಯಾಯಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿರುಗುಪ್ಪ ದಳವಾಯಿ ಅಂಬಣ್ಣ ತಂಡ ಬುದ್ಧ ಗೀತೆಗಳನ್ನು ಪ್ರಸ್ತುತ ಪಡಿಸಿದರು.ಜಯಂತಿ ಅಂಗವಾಗಿ ಬುದ್ಧನ ಭಾವಚಿತ್ರವನ್ನು ನಗರದಲ್ಲಿ ಮೆರವಣಿಗೆ ನಡೆಸಲಾಯಿತು. ನಗರದ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಆರಂಭಗೊಂಡ ಮೆರವಣಿಗೆ ಗಡಗಿ ಚನ್ನಪ್ಪ ವೃತ್ತ, ಡಾ.ರಾಜ್ ಕುಮಾರ್ ರಸ್ತೆ, ಇಂದಿರಾ ವೃತ್ತ ಮಾರ್ಗವಾಗಿ ಸಾಂಸ್ಕೃತಿಕ ಸಮುಚ್ಚಯದ ಸಭಾಂಗಣದವರೆಗೆ ಸಾಗಿತು. ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಮೆರಗು ತಂದವು.