ಭಾರತ ಪ್ರಪಂಚದಲ್ಲಿ ಅತಿ ದೊಡ್ಡ ಗಣತಂತ್ರ ರಾಷ್ಟ್ರವಾಗಿದೆ: ಟಿ.ಬಿ. ಜಯಚಂದ್ರ

| Published : Jan 27 2024, 01:17 AM IST

ಸಾರಾಂಶ

ದೇಶದ ಜನತೆ ಈ ಸಂವಿಧಾನವನ್ನು ಓದಿಕೊಂಡು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಆಶೋತ್ತರ ಈಡೀರಿಸುವ ಕೆಲಸ ಮಾಡಬೇಕಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಹೇಳಿದರು

ಕನ್ನಡಪ್ರಭ ವಾರ್ತೆ ಶಿರಾ

ಭಾರತ ಇಡೀ ಪ್ರಪಂಚದಲ್ಲಿ ಅತಿ ದೊಡ್ಡ ಗಣತಂತ್ರ ರಾಷ್ಟ್ರವಾಗಿದೆ. ಇದಕ್ಕೆ ಡಾ.ಬಿ.ಆರ್‌.ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಕಾರಣವಾಗಿದೆ. ದೇಶದ ಜನತೆ ಈ ಸಂವಿಧಾನವನ್ನು ಓದಿಕೊಂಡು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಆಶೋತ್ತರ ಈಡೀರಿಸುವ ಕೆಲಸ ಮಾಡಬೇಕಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಹೇಳಿದರು.

ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ 75ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ದೇಶ ಹರಿದು ಹಂಚಿ ಹೋಗಿತ್ತು. ಕೇವಲ ವ್ಯಾಪಾರಕ್ಕಾಗಿ ಬಂದ ಬ್ರಿಟೀಷರು ದೇಶವನ್ನು ೨೦೦ಕ್ಕೂ ಹೆಚ್ಚು ವರ್ಷಗಳ ಕಾಲ ಆಳಿದ್ದರು. ಅವರನ್ನು ದೇಶ ಬಿಟ್ಟು ಹೋಡಿಸಬೇಕಾದಾಗ ಕಾಂಗ್ರೆಸ್ ಪಕ್ಷ ಸತತವಾಗಿ ನಿರಂತವಾಗಿ ಹೋರಾಟ ಮಾಡಿದ ಫಲವಾಗಿ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ಸ್ವಾತಂತ್ರ್ಯ ಬಂದು ೭೫ ವರ್ಷ ಕಳೆದಿದ್ದು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ ಈ ನಾಲ್ಕು ಅಂಗಗಳು ಎಷ್ಟರ ಮಟ್ಟಿಗೆ ಸಾಧನೆ ಮಾಡಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಸಂವಿಧಾನವೇ ಧರ್ಮಗ್ರಂಥ: ದೇಶದಲ್ಲಿ ಹಿಂದುಗಳಿಗೆ ರಾಮಾಯಣ ಮಹಾಭಾರತ, ಮುಸ್ಲಿಂರಿಗೆ ಖುರಾನ್, ಕ್ರಿಶ್ಚಿಯನ್ನರಿಗೆ ಬೈಬಲ್ ಧರ್ಮಗ್ರಂಥಗಳು. ಆದರೆ ಭಾರತದ ೧೪೧ ಕೋಟಿ ಜನಸಂಖ್ಯೆಗೆ ಇರುವ ಏಕೈಕ ಧರ್ಮಗ್ರಂಥವೆಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಭಾರತ ಸಂವಿಧಾನ. ಎಲ್ಲರೂ ಸಂವಿದಾನದ ಆಶೋತ್ತರ ಈಡೇರಿಸುವಲ್ಲಿ ಪ್ರಯತ್ನ ಮಾಡಬೇಕಿದೆ. ದೇಶಕ್ಕೆ ಸಂವಿಧಾನ ರಚಿಸಲು ಸುಮಾರು 7 ಜನರ ಸಮಿತಿಯನ್ನು ಮಾಡಲಾಯಿತು. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ಕರಡು ಸಮಿತಿಯ ಅಧ್ಯಕ್ಷರಾಗಿ ಕರಡನ್ನು ಅಂತಿಮ ಮಾಡಬೇಕಾದಾಗ ಬಹುಷ್ಯ ಉಳಿದ ಆರು ಜನ ಒಂದಲ್ಲಾ ಒಂದು ಕಾರಣದಿಂದ ಅನಾರೋಗ್ಯದ ನಿಮಿತ್ತ ಯಾವುದೇ ಸಭೆಗಳಿಗೆ ಬರಲು ಸಾಧ್ಯವಾಗಲಿಲ್ಲ. ಅಂತಹ ಸಂದರ್ಭದಲ್ಲಿ ಅಂಬೇಡ್ಕರ್‌ ಅವರು ಒಬ್ಬರೇ ಈ ದೇಶಕ್ಕೆ ಬೃಹತ್ ಸಂವಿಧಾನ ರಚಿಸುವ ಕೆಲಸ ಮಾಡಿದರು ಎಂದರು.

ಶಿರಾದಲ್ಲಿ ಸ್ಮಾರಕ ಭವನ ನಿರ್ಮಾಣ: ಈ ದೇಶಕ್ಕೆ ಸ್ವಾತಂತ್ರ್ಯ ಬರಲು ಕಾಂಗ್ರೆಸ್ ಪಕ್ಷ ಹೋರಾಟ ಮಾಡಿದೆ. ಅದರಲ್ಲಿ ಶಿರಾದ 100 ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರು ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಹೆಚ್ಚು ಜನ ಯಲಿಯೂರು, ಕಳ್ಳಂಬೆಳ್ಳ, ಬರಗೂರು ಗ್ರಾಮಗಳ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅವರನ್ನು ಮುಂದಿನ ಪೀಳಿಗೆಗೆ ನೆನಪಿಸಲು ಅವರ ಹೆಸರಿನಲ್ಲಿ ಶಿರಾದಲ್ಲಿ ಇನ್ನೊಂದು ವರ್ಷದಲ್ಲಿ ಒಂದು ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಭವನ ನಿರ್ಮಿಸಿ ಅಷ್ಟು ಜನರ ಭಾವಚಿತ್ರವನ್ನು ಪ್ರದರ್ಶನ ಮಾಡುವ ಕಾರ್ಯ ಮಾಡುತ್ತೇನೆ ಎಂದರು.

ನಾವು ಕೇವಲ ರಾಮ ಮಂದಿರ ಕಟ್ಟಿದರೆ ಎಲ್ಲವೂ ಸಾಧನೆಯಾಗುವುದಿಲ್ಲ. ರಾಮನ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕಾದಾಗ ದೇಶದಲ್ಲಿರುವ ಅಸಮಾನತೆ, ಬಡತನ, ನಿರುದ್ಯೋಗ, ಅಪೌಷ್ಟಿಕ ಸಮಸ್ಯೆ ಎಲ್ಲವೂ ನಿವಾರಣೆಯಾಗಬೇಕಾದರೆ ಎಲ್ಲರೂ ಕಂಕಣಬದ್ದರಾಗಿ ದುಡಿಯಬೇಕು. ಆಗ ಮಾತ್ರ ಈ ದೇಶದಲ್ಲಿ ರಾಮರಾಜ್ಯ ಆಗಲು ಸಾಧ್ಯವಾಗುತ್ತದೆ ಎಂದರು.

ತಹಸೀಲ್ದಾರ್ ದತ್ತಾತ್ರೆಯ ಮಾತನಾಡಿ, ನಮ್ಮನ್ನು ಹೆತ್ತ ತಾಯಿ, ಈ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದುದು ಎಂಬ ಮಾತಿನಂತೆ ನಮ್ಮನ್ನು ಹೊತ್ತಿರುವ ಈ ಭರತ ಭೂಮಿ ಸ್ವರ್ಗಕ್ಕಿಂತ ಮಿಗಿಲಾದ ದೇಶ ನಮ್ಮ ಭಾರತ ದೇಶ. ವೈವಿದ್ಯಮಯವಾದ ರಾಷ್ಟ್ರೀಯ ಹಬ್ಬವೇ ಗಣರಾಜ್ಯ. ಈ ಸಂದರ್ಭದಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರನ್ನು ನೆನಪಿಸಿಕೊಳ್ಳಬೇಕು. ಹರಿದು ಹಂಚಿ ಹೋಗಿದ್ದ ದೇಶವನ್ನು ಒಗ್ಗೂಡಿಸಿದವರು ಸರ್ದಾರ್ ವಲ್ಲಬಾಯಿ ಪಟೇಲ್ ಎಂದರು.

ಗಮನ ಸೆಳದ ಸಾಂಸ್ಕೃತಿಕ ಕಾರ್ಯಕ್ರಮ: ಗಣರಾಜ್ಯೋತ್ಸವ ಸಮಾರಂಭದಲ್ಲಿ ನಗರದ ಹಲವು ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು. ದೇಶ ಭಕ್ತಿಗೀತೆಗೆ ಸಂಬಂಧಪಟ್ಟ ನೃತ್ಯರೂಪಕಗಳು ನೆರದಿದ್ದವರ ಮನ ಸೆಳೆದವು.

ಕಾರ್ಯಕ್ರಮದಲ್ಲಿ ತುಮಕೂರು ಅಡಿಷನಲ್ ಎಸ್ಪಿ ಮರಿಯಪ್ಪ, ಡಿವೈಎಸ್ಪಿ ಶೇಖರ್, ನಗರಸಭಾ ಅಧ್ಯಕ್ಷೆ ಪೂಜಾ ಪೆದ್ದರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ಬಿಇಒ ಸಿ.ಎನ್.ಕೃಷ್ಣಪ್ಪ, ತಾ.ಪಂ. ಇಒ ಅನಂತರಾಜು, ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕ ಸುದಾಕರ್, ಸಹಾಯಕ ಕೃಷಿ ನಿರ್ದೇಶಕ ಎಚ್. ನಾಗರಾಜು, ಪೌರಾಯುಕ್ತ ರುದ್ರೇಶ್, ವಲಯ ಅರಣ್ಯಾಧಿಕಾರಿ ನವನೀತ್, ಶಿರಾ ಆಶ್ರಯ ಸಮಿತಿ ಸದಸ್ಯ ನೂರುದ್ದೀನ್ ಸೇರಿದಂತೆ ಹಲವರು ಹಾಜರಿದ್ದರು.