ಸಾರಾಂಶ
ಮುದಗಲ್ ಸಮೀಪದ ನವಲಿ ಜಡೆಯ ಶಂಕಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ ನಿಮಿತ್ಯ ಸುಮಂಗಲೆಯರಿಂದ ಕುಂಬೋತ್ಸವ ಮೆರವಣಿಗೆ ನಡೆಸಿರುವದು.
ಕನ್ನಡಪ್ರಭ ವಾರ್ತೆ ಮುದಗಲ್
ಭಾರತ ದೇಶವು ಕೇವಲ ಒಂದು ದೇಶವಲ್ಲ ಬದಲಾಗಿ ಸನಾತನ ಪರಂಪರೆಯುಳ್ಳ ದೈವತ್ವದ ಪುಣ್ಯ ಭೂಮಿಯ ಕೇಂದ್ರವಾಗಿದೆ. ಇದರಿಂದಲೇ ದೇಶದ ಉದ್ದಗಲಕ್ಕೂ ಭವ್ಯ ಪರಂಪರೆಯುಳ್ಳ ದೇವಸ್ಥಾನಗಳು ಲೋಕಾರ್ಪಣೆಗೊಳ್ಳುತ್ತಿವೆ ಎಂದು ಅಮರೇಶ್ವರ ಗುರು ಗಜದಂಡ ಶಿವಾಚಾರ್ಯರು ಹೇಳಿದರು.ಸಮೀಪದ ನವಲಿ ಗ್ರಾಮದ ಐತಿಹಾಸಿಕ ಜಡೆಯ ಶಂಕರಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಭಾರತ ದೇಶವು ಭವ್ಯ ಪರಂಪರೆ ಸಂಸ್ಕೃತಿ, ಸಂಸ್ಕಾರ, ಭಕ್ತಿ, ಆಚರಣೆ ನಂಬಿಕೆಗಳ ಶಕ್ತಿಯಾಗಿದೆ. ಗುರುಗುಂಟಾ ಅಮರೇಶ್ವರ ಸುಕ್ಷೇತ್ರ ಮತ್ತು ನವಲಿಯ ಜಡೆಯ ಶಂಕರಲಿಗೇಶ್ವರ ಸುಕ್ಷೇತ್ರ ಐತಿಹಾಸಿಕ ಹಿನ್ನೆಲೆ ಅತ್ಯಂತ ಜಾಗೃತ ಸ್ಥಳಗಳಾಗಿವೆ. ದೇಶದಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಯಾದರೆ, ತಾಲೂಕಿನಲ್ಲಿ ಜಡೆಯ ಶಂಕರಲಿಂಗೇಶ್ವರ ದೇವಸ್ಥಾನ ಇಂದು ಲೋಕಾರ್ಪಣೆಗೊಂಡಿದೆ ಎಂದು ಹೇಳಲು ಹೆಮ್ಮೆ ಎನ್ನಿಸುತ್ತಿದೆ ಎಂದರು.
ಇದೇ ಸಮಯದಲ್ಲಿ ಕಲಬುರಗಿ ಕಸಾಪ ಮಾಜಿ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಸಮಾಜ ಸಂಘಟನೆ ಕುರಿತು ಮಾತನಾಡಿದರು. ವೇದಿಕೆ ಮೇಲೆ ಹುನಕುಂಟಿ ಶರಣಯ್ಯ ತಾತನವರು, ಮೈಸೂರು ಪ್ರಾಧ್ಯಾಪಕ ಡಾ.ರಾಜಶೇಖರ ಜಮದಂಡಿ, ಕಲಬುರಗಿ ನಿಕಟಪೂರ್ವ ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಬಾಗಲಕೋಟೆ ಸಹಪ್ರಾಧ್ಯಾಪಕಿ ಸುಮಂಗಲಾ ಮೇಟಿ, ಪ್ರಮುಖರಾದ ಮಹಾಂತಪ್ಪ ಚೆನ್ನಿ, ಅನಿಲ್ ಕವಿಶೆಟ್ಟಿ, ಸುರೇಶ ಚೆನ್ನಿ, ಉಮೇಶ ಚೆನ್ನಿ , ಸುಭಾಸ ಬಣಗಾರ, ಸೇರಿ ಸುತ್ತ ಮುತ್ತಲಿನ ಸಮಾಜ ಬಾಂದವರು ಇತರರು ಭಾಗವಹಿಸಿದ್ದರು.