ಕಾಡುಕುರಿ ಮಾಂಸ ಪತ್ತೆ: ಇಬ್ಬರ ಬಂಧನ

| Published : Feb 21 2024, 02:03 AM IST

ಸಾರಾಂಶ

ತಾಲೂಕಿನ ಜಯಪುರ ಸಮೀಪದ ಎಲೆಮಡಲು ಗ್ರಾಮದಲ್ಲಿ ಕಾಡುಕುರಿ ಮಾಂಸ ಶೇಖರಣೆ ಮಾಡಲಾಗಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಕೊಪ್ಪ ವಲಯ ಅರಣ್ಯಾಧಿಕಾರಿ ರಂಗನಾಥ್ ಮತ್ತು ತಂಡ ಎಲೆಮಡಲು ಗ್ರಾಮದ ವಿಜಯೇಂದ್ರ ಎನ್ನುವವರ ಮನೆಯಲ್ಲಿ ತನಿಖೆ ನಡೆಸಿದಾಗ ಫ್ರಿಡ್ಜ್‌ ನಲ್ಲಿ ಶೇಖರಿಸಿದ್ದ ಕೆಜಿ ಯಷ್ಟು ಕಾಡುಕುರಿ ಮಾಂಸ ಪತ್ತೆಯಾಗಿದೆ.

ಕನ್ನಡಪ್ರಭ ವಾರ್ತೆ, ಕೊಪ್ಪ

ವಿಜಯೇಂದ್ರರನ್ನು ತನಿಖೆಗೆ ಒಳಪಡಿಸಿದಾಗ ಸ್ಥಳೀಯ ವಿಶ್ವನಾಥ್ ಎನ್ನುವವರು ಕಾಡು ಕುರಿ ಮಾಂಸ ತಂದು ಕೊಟ್ಟಿರುವುದಾಗಿ ತಿಳಿಸಿದ್ದರು. ವಿಶ್ವನಾಥ್‌ರನ್ನು ತನಿಖೆಗೆ ಒಳಪಡಿಸಿದಾಗ ವಿದ್ಯುತ್ ಅವಘಡದಿಂದ ಸತ್ತ ಕಾಡುಕುರಿಯನ್ನು ಮಾಂಸ ಮಾಡಿರುವುದಾಗಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ಸೋಮವಾರ ಕೊಪ್ಪ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಕೊಪ್ಪ ನ್ಯಾಯಾಲಯ ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿದ್ದು ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ್ದಾರೆ. ವಲಯಾರಣ್ಯಾಧಿಕಾರಿ ರಂಗನಾಥ್, ಉಪಅರಣ್ಯಾಧಿಕಾರಿ ರಘು, ಶಿವರುದ್ರಪ್ಪ, ಫಾರೆಸ್ಟರ್ ದಿವಾಕರ್, ಬೀಟ್ ಫಾರೆಸ್ಟರ್ ಕಿರಣ್ ದಿನೇಶ್, ವಾಹನ ಚಾಲಕ ರಮೇಶ್ ಮುಂತಾದವರು ಕಾರ್ಯಾಚರಣೆಯಲ್ಲಿದ್ದರು.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಆರ್.ಎಫ್.ಒ ರಂಗನಾಥ್ ಕಾಡುಪ್ರಾಣಿಗಳನ್ನು ಭೇಟೆಯಾಡುವುದು ಅಥವಾ ಕಾಡಿನಲ್ಲಿ ಸತ್ತ ಪ್ರಾಣಿಗಳ ಮಾಂಸ ಮತ್ತು ಅಂಗಾಂಗಗಳನ್ನು ಸಂರಕ್ಷಿಸಿಟ್ಟುಕೊಳ್ಳುವುದು ಅರಣ್ಯ ಕಾಯಿದೆ ಪ್ರಕಾರ ಅಕ್ಷಮ್ಯ ಅಪರಾಧ. ಇಂತಹ ಕೃತ್ಯಕ್ಕೆ ಯಾರೂ ಮುಂದಾಗಬಾರದು. ಕಾಡುಪ್ರಾಣಿಗಳು ಸತ್ತಿರುವುದು ತಿಳಿದುಬಂದಲ್ಲಿ ಕೂಡಲೇ ಅರಣ್ಯ ಇಲಾಖೆಗೆ ತಿಳಿಸಬೇಕು ಎಂದಿದ್ದಾರೆ.