ಸಾರಾಂಶ
ಸೊರಬ: ಭಾರತ ಸ್ವಾತಂತ್ರ್ಯ ನಂತರ ಅತ್ಯಂತ ಶಕ್ತಿಶಾಲಿಯಾಗಿ ಸಮೃದ್ಧ ಪಥದಲ್ಲಿ ಮುನ್ನೆಡೆಯುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾರಣವಾಗಿದೆ. ಜನಸಾಮಾನ್ಯರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವರು ರೂಪಿಸಿರುವ ಜನಪರ ಯೋಜನೆಗಳು ಜನಮಾನಸದಲ್ಲಿ ಎಂದಿಗೂ ಅಚ್ಚಳಿಯದೇ ಉಳಿಯುತ್ತವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಪಟ್ಟಣದ ಕಾನುಕೇರಿ ಮಠದಲ್ಲಿ ತಾಲೂಕು ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ೧೧ ವರ್ಷಗಳು ತುಂಬಿದ ಪ್ರಯುಕ್ತ ಹಮ್ಮಿಕೊಂಡಿದ್ದ ಸಂಕಲ್ಪ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಇಡೀ ವಿಶ್ವದಲ್ಲೇ ಭಾರತ ಸುಭದ್ರ ದೇಶವಾಗಿದೆ. ಆಂತರಿಕವಾಗಿ ಮತ್ತು ಬಾಹ್ಯವಾಗಿ, ಡಿಜಿಟಲೀಕರಣದಿಂದಾಗಿ ವಿಶ್ವಗುರು ಎನಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಇದಕ್ಕೆ ಕಾರಣ ಮೋದಿಜೀಯವರು ಎಂದರು.
ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪ್ರತಿಪಕ್ಷಗಳ ಕೊರತೆ ಇತ್ತು. ಮಾಧ್ಯಮಗಳ ಮೇಲೆ ಹಿಡಿತ ಸಾಧಿಸಿದ್ದರು. ಲೋಪಗಳನ್ನು ಸಾರಲು ಸಾಮಾಜಿಕ ಜಾಲತಾಣಗಳು ಇರಲಿಲ್ಲ. ಈ ಕಾರಣದಿಂದಲೇ ಕಾಂಗ್ರೆಸ್ ಅಷ್ಟು ವರ್ಷ ದೇಶ ಆಳಲು ಸಾಧ್ಯವಾಗಿತ್ತು. ನಂತರದ ದಿನಗಳಲ್ಲಿ ಎನ್‌ಡಿಎ ನೇತೃತ್ವದಲ್ಲಿ ಪ್ರಧಾನಿಯಾದ ಎ.ಬಿ.ವಾಜಪೇಯಿ ಮತ್ತು ಉಪ ಪ್ರಧಾನಿಯಾಗಿದ್ದ ಅಡ್ವಾನಿ ಅವರು ಉತ್ತಮ ಆಡಳಿತ ನಡೆಸಲು ಬಿಡಲಿಲ್ಲ ಎಂದರು.ಕಳೆದ ೧೧ ವರ್ಷಗಳಲ್ಲಿ ಮೋದಿ ಸರ್ಕಾರ ಅಂತ್ಯೋದ್ಯಯ ಪರಿಕಲ್ಪನೆಯಡಿ ಎಲ್ಲಾ ವರ್ಗದ ಜನ ಸಾಮಾನ್ಯರ ಹಿತ ಕಾಪಾಡಲು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಹಾಗೂ ಸ್ವಾವಲಂಬಿ ಜೀವನ ನಡೆಸಲು ರೂಪಿಸಿ ಜಾರಿಗೆ ತಂದು ಅರ್ಹ ಫಲಾನುಭವಿಗಳಿಗೆ ತಲುಪಿಸಿರುವ ನೂರಾರು ಐತಿಹಾಸಿಕ ಯೋಜನೆಗಳು ಮೋದಿ ಅವರಿಂದ ಸಾಧ್ಯವಾಗಿದೆ ಎಂದರು. ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಸೊರಬ ಮಂಡಲ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಮಾಜಿ ಅಧ್ಯಕ್ಷ ಪ್ರಕಾಶ್ ತಲಕಾಲುಕೊಪ್ಪ, ಜಿ.ಪಂ.ಮಾಜಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಜಿ.ಪ. ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಜಿಪಂ ಮಾಜಿ ಸದಸ್ಯ ರಾಜಶೇಖರ ಗಾಳಿಪುರ, ಮಡಿವಾಳ ಸಮಾಜ ಅಭಿವೃದ್ಧಿ ನಿಗಮದ ಮಾಜಿ ರಾಜ್ಯಾಧ್ಯಕ್ಷ ರಾಜು.ಎಂ.ತಲ್ಲೂರು, ಮುಖಂಡರಾದ ಡಾ. ಎಚ್.ಇ.ಜ್ಞಾನೇಶ್, ಶಿವಕುಮಾರ ಕಡಸೂರು, ವಿನಯ್ ಶೇರ್ವಿ, ಅಶೋಕ್ ಶೇಟ್, ರವಿ ಕೈತೋಟ, ಗಾಯತ್ರಿ ಮಲ್ಲಪ್ಪ, ಮಲ್ಲಿಕಾರ್ಜುನ ದ್ವಾರಳ್ಳಿ, ಜಾನಕಪ್ಪ ಒಡೆಯರ್ ಯಲಸಿ ಮತ್ತಿತರರಿದ್ದರು.ಅಭಿವೃದ್ಧಿ ಕಾಮಗಾರಿಗಳು ಜಿಲ್ಲಾ
ಸಚಿವರ ಕಣ್ಣು ಕುಕ್ಕುತ್ತಿದೆ: ಬಿವೈಆರ್ಜಿಲ್ಲೆಯಲ್ಲಿ ಸಂಸದರ ನಿಧಿಯಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಕಣ್ಣು ಕುಕ್ಕುತ್ತಿದೆ. ಈ ಕಾರಣದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಅವರಪ್ಪನ ದುಡ್ಡು ಬಳಸಿದ್ದಾರಾ? ಎಂದು ಕಾರ್ಯಕ್ರಮವೊಂದರಲ್ಲಿ ಮೂದಲಿಸಿ ಮಾತನಾಡಿದ್ದಾರೆ. ಅವರ ಮೂದಲಿಕೆಗೆ ಸ್ವಾಗತಿಸಿ ಧನ್ಯವಾದಗಳನ್ನು ತಿಳಿಸುತ್ತೇನೆ. ನಮ್ಮ ಅಭಿವೃದ್ಧಿಗಳೇ ಅವರಿಗೆ ಉತ್ತರ ನೀಡುತ್ತವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಚಂದ್ರಗುತ್ತಿ ಅಭಿವೃದ್ಧಿಗೆ ೨ ಕೋಟಿ ರು. ಮಂಜೂರಾತಿ ದೊರೆತರೂ ಬಳಸಿಕೊಳ್ಳಲಾಗದೇ ವಾಪಾಸ್ಸು ಹೋಗಿದೆ. ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಸಾಗುತ್ತಿಲ್ಲ. ಶಾಸಕರಿಗೆ ಅನುದಾನದ ಹಣ ಬಿಡುಗಡೆಯಾಗದೇ ಪರದಾಡುತ್ತಿದ್ದಾರೆ. ಅಜೀಂ ಪ್ರೇಮ್‌ಜೀಯಿಂದ ಶಿಕ್ಷಣ ಇಲಾಖೆ ಸ್ವಲ್ಪ ಮಟ್ಟಿಗೆ ಉಸಿರಾಡುತ್ತದೆ. ಹಾಗಾಗಿ ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುವಂತ ಕೆಲಸ ಮಾಡಿ ಎಂದು ಸಚಿವ ಮಧು ಬಂಗಾರಪ್ಪ ಅವರಿಗೆ ಸಲಹೆ ನೀಡಿದರು.