ಮಣ್ಣಿನ ಫಲವತ್ತತೆಯೆ ಮೇಲೆ ಸಾವಯವ ಕೃಷಿ ಅವಲಂಬನೆಯಾಗಿದ್ದು, ಕೃಷಿಯಲ್ಲಿ ಪ್ರಾಣಿಗಳನ್ನು ಬಳಕೆ ಮಾಡಿದರೆ ಕೊಟ್ಟಿಗೆ ಗೊಬ್ಬರ ಸಾಕಷ್ಟು ದೊರೆಯುತ್ತದೆ.

ಧಾರವಾಡ:

ಸಾವಯವ ಕೃಷಿ ಹಿಂದಿಗಿಂತಲೂ ಇಂದು ಅತೀ ಮುಖ್ಯವಾಗಿದ್ದು, ಜಗತ್ತಿನಲ್ಲಿಯೇ ಭಾರತವು ಸಾವಯವ ಕೃಷಿಯಲ್ಲಿ ಸಾಕಷ್ಟು ಮುಂದಿದೆ ಎಂದು ಕೃಷಿ ವಿವಿ ಡೀನ್‌ ಪ್ರೊ. ಶ್ರೀಪಾದ ಕುಲಕರ್ಣಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಶಿವರಾಜ ಅಮೃತಪ್ಪ ಹೊಸಮನಿ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸದಲ್ಲಿ ಸಾವಯವ ಕೃಷಿ’ ವಿಷಯ ಕುರಿತು ಉಪನ್ಯಾಸ ನೀಡಿದರು. ಮಣ್ಣಿನ ಫಲವತ್ತತೆಯೆ ಮೇಲೆ ಸಾವಯವ ಕೃಷಿ ಅವಲಂಬನೆಯಾಗಿದ್ದು, ಕೃಷಿಯಲ್ಲಿ ಪ್ರಾಣಿಗಳನ್ನು ಬಳಕೆ ಮಾಡಿದರೆ ಕೊಟ್ಟಿಗೆ ಗೊಬ್ಬರ ಸಾಕಷ್ಟು ದೊರೆಯುತ್ತದೆ. ಆದರೆ, ಇಂದು ಯಂತ್ರಗಳ ಬಳಕೆ ಹೆಚ್ಚಾಗುತ್ತಿದೆ, ಇದು ನಿಯಂತ್ರಣಗೊಳ್ಳಬೇಕು ಎಂದರು.

ಮಳೆಗಾಲ ಕಡಿಮೆ ಆದರೂ ಹೆಚ್ಚು ನೀರು ಬೇಡದ, ಸಾವಯವ ಕೃಷಿ ಮಾಡಿ ಯಶಸ್ವಿಯಾಗಲು ಸಾಧ್ಯವಿದೆ. ಹಸಿರು ಕ್ರಾಂತಿಯಿಂದ ಭಾರತ ಎಲ್ಲರಿಗೂ ಆಹಾರ ದೊರೆಕಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಭಾರತದಿಂದ ಹಲವಾರು ಆಹಾರ ಧಾನ್ಯ ರಫ್ತಾಗುತ್ತಿವೆ. ರೈತರು ತಾವು ಬೆಳೆಯುವ ಬೆಳೆಗಳಿಗೆ ಹಲವಾರು ವಿಧದ ರಸಾಯನಿಕ ಗೊಬ್ಬರ, ಕ್ರಿಮಿನಾಶಕ ಉಪಯೋಗಿಸುತ್ತಿದ್ದರೂ ಭಾರತದ ಮಣ್ಣಿನ ಗುಣಮಟ್ಟ ಕುಸಿಯುತ್ತಿಲ್ಲ. ಅಂಥ ಶಕ್ತಿ, ಸತ್ವ ನಮ್ಮ ಭೂಮಿಗಿದೆ ಎಂದು ಹೇಳಿದರು.

ದೇಶದಲ್ಲಿ ಈ ವರೆಗೆ ಸರಾಸರಿ ಜನಸಂಖ್ಯೆಯಲ್ಲಿ 30 ಕೋಟಿ ಜನ ರಕ್ತದೊತ್ತಡದಿಂದ ಮತ್ತು ಹತ್ತು ಕೋಟಿ ಜನ ಮಧುಮೇಹದಿಂದ ಬಳಲುತ್ತಿದ್ದಾರೆ. ಇದರ ಮಧ್ಯೆ 1.39 ಲಕ್ಷ ಕೋಟಿ ಜೀವವಿಮೆ ವ್ಯಾಪಾರ, ವಹಿವಾಟು ನಡೆಯುತ್ತಿದೆ ಎಂದು ಅಂಕಿ-ಅಂಶಗಳ ಸಮೇತ ವರ್ತಮಾನದ ಸ್ಥಿತಿಗತಿ ತೆರೆದಿಟ್ಟರು.

ಭಾರತದ ನಾಗರಿಕರು ಸಂಪೂರ್ಣ ಆರೋಗ್ಯದಿಂದಿಲ್ಲ. ನಮ್ಮ ಸಂಸ್ಕೃತಿ ಬದಲಾವಣೆ ಮಾಡಿಕೊಳ್ಳುತ್ತಿದ್ದೇವೆ. ಭೂಮಿ, ನೀರು, ಗಾಳಿ, ಆಹಾರಗಳಲ್ಲಿ ಗುಣಮಟ್ಟದ ಕೊರತೆ ಹೆಚ್ಚಾಗಿದೆ. ಭೂಮಿಯ ತೇವಾಂಶ ಕಡಿಮೆ ಆಗಿದೆ. ಇದರಿಂದ ಪ್ರಕೃತಿಯಲ್ಲಿ ವೈಫರಿತ್ಯ ಉಂಟಾಗುತ್ತಿದೆ. ದೇಶದಲ್ಲಿ ಫಾರ್ಮಸಿ ಕಂಪನಿಗಳ ಸಂಖ್ಯೆ ಹೆಚ್ಚಾಗಿವೆ. ಜನರು ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂದರೆ ಜನರ ಆರೋಗ್ಯ ಸ್ವಸ್ಥವಾಗಿಲ್ಲ ಎಂದರ್ಥ. ಮೂಲ ಕೃಷಿಯೊಂದಿಗೆ ಸಾವಯವ ಕೃಷಿ ಹಂತ-ಹಂತವಾಗಿ ಅಳವಡಿಸಿಕೊಳ್ಳಬೇಕು. ಈ ಹಿಂದಿನಿಂದಲೂ ಪ್ರತಿಯೊಂದು ಹಬ್ಬ ಹರಿದಿನಗಳಲ್ಲಿ ಋತುಮಾನಕ್ಕೆ ತಕ್ಕಂತೆ ಕೃಷಿಯ ಮಿಶ್ರ ಬೆಳೆ ಉಪಯೋಗಿಸಿಕೊಂಡು ಬರುತ್ತಿದ್ದೇವೆ. ಇದರಲ್ಲಿ ಆರೋಗ್ಯದ ಗುಟ್ಟು ಅಡಗಿದೆ ಎಂದು ಪ್ರೊ. ಶ್ರೀಪಾದ ಕುಲಕರ್ಣಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಎಸ್.ಎಂ. ಮಂಟೂರ ಮಾತನಾಡಿ, ದೇಶದ ಜನಸಂಖ್ಯೆಯಲ್ಲಿ 40 ಲಕ್ಷ ರೈತರು ಸಾವಯವ ಕೃಷಿಯಲ್ಲಿ ತೊಡಗಿದ್ದಾರೆ. ರೈತರು ಇನ್ನೂ ಹೆಚ್ಚಿನ ಆಸಕ್ತಿ ವಹಿಸಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಈ ಕುರಿತು ಸರ್ಕಾರದಿಂದ ದೊರೆಯುವ ವಿವಿಧ ಯೋಜನೆಗಳನ್ನು ಬಳಸಿಕೊಳ್ಳುವಲ್ಲಿ ಮುಂದಾಗಬೇಕೆಂದರು.

ದತ್ತಿ ದಾನಿ ರೈತ ಮುಖಂಡ ಈಶ್ವರಚಂದ್ರ ಹೊಸಮನಿ ಮಾತನಾಡಿದರು. ಮಾರಿಕಾ ಮೇಟಿಗೌಡರ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.