ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಅಂದಿನ ನೇತಾರರು ತೆಗೆದುಕೊಂಡ ನಿರ್ಣಯಗಳ ಫಲವಾಗಿ ಅಖಂಡ ಹಿಂದೂ ಸಮಾಜಕ್ಕೆ ಅನ್ಯಾಯವಾಗಿದೆ. ಇದೀಗ ಮತ್ತೊಮ್ಮೆ ಭಾರತದಲ್ಲಿ ಹಿಂದೂಗಳ ಜಾಗೃತಿ ಶುರುವಾಗಿದ್ದು, ದೇಶವನ್ನು ರಾಮರಾಜ್ಯವಾಗಬೇಕಿದೆ.

ಧಾರವಾಡ:

ವಿಶ್ವದ ನಾಗರಿಕತೆಗಳೇ ಕಣ್ಣು ತೆರೆಯುವ ಮುನ್ನ ಜಾಗೃತವಾಗಿದ್ದ ಹಿಂದೂ ಸಮಾಜ ಎಷ್ಟೋ ದಾಳಿಗಳಿಗೆ ಎದೆಗೊಟ್ಟು ನಿಂತಿದೆ. ಇದೀಗ ಮತ್ತೊಮ್ಮೆ ಭಾರತ ವಿಶ್ವಗುರುವಿನ ಸ್ಥಾನಕ್ಕೇರುತ್ತಿದೆ ಎಂದು ಆರ್‌ಎಸ್‌ಎಸ್‌ ಪ್ರಮುಖ ಮಂಗೇಶ ಭೇಂಡೆ ಹೇಳಿದರು.

ತಾಲೂಕಿನ ನಿಗದಿ ಗ್ರಾಮದಲ್ಲಿ ಹಿಂದೂ ಸಂಚಲನ ಸಮಿತಿಯಿಂದ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಈ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಅಂದಿನ ನೇತಾರರು ತೆಗೆದುಕೊಂಡ ನಿರ್ಣಯಗಳ ಫಲವಾಗಿ ಅಖಂಡ ಹಿಂದೂ ಸಮಾಜಕ್ಕೆ ಅನ್ಯಾಯವಾಗಿದೆ. ಇದೀಗ ಮತ್ತೊಮ್ಮೆ ಭಾರತದಲ್ಲಿ ಹಿಂದೂಗಳ ಜಾಗೃತಿ ಶುರುವಾಗಿದ್ದು, ದೇಶವನ್ನು ರಾಮರಾಜ್ಯವಾಗಬೇಕಿದೆ ಎಂದು ಹೇಳಿದರು.

ಹತ್ತಾರು ದಾಳಿಗಳು ಭಾರತದ ಮೇಲೆ ನಡೆದು ಹೋಗಿವೆ. ಆದರೆ, ಇದಕ್ಕೆಲ್ಲ ಕಾರಣ ನಮ್ಮೊಳಗಿನ ವೈಮನಸ್ಸು ಮತ್ತು ಕುತಂತ್ರಿಗಳ ರಾಜಕಾರಣ. ಹೀಗಾಗಿ ಮುಂದೆ ಇಂತಹದಕ್ಕೆ ಅವಕಾಶ ಕೊಡದೇ ದೇಶದ ವಿಚಾರ ಬಂದಾಗ ಅಖಂಡ ಹಿಂದೂ ಸಮಾಜ ಒಂದಾಗಿ ನಿಲ್ಲಬೇಕಾದ ಅಗತ್ಯತೆ ಇದೆ ಎಂದ ಅವರು, ಕುಡಿಯಲು ನೀರು ಕೇಳಿದ ವಿದೇಶಿ ಯಾತ್ರಿಕರಿಗೆ ಹಾಲು ಕೊಟ್ಟ ಸಂಸ್ಕೃತಿ ನಮ್ಮದು. ವಿದ್ಯೆ, ವಿನಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ವಿದೇಶಿಗರು ತಮ್ಮ ಗ್ರಂಥಗಳಲ್ಲಿ ಬರೆದಿಟ್ಟಿದ್ದಾರೆ. ಆದರೆ, ಈ ದೇಶವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಬೇಕಿದ್ದವರೇ ದಾರಿ ತಪ್ಪಿದ್ದರಿಂದ ದೇಶಕ್ಕೆ ನಷ್ಟವಾಗಿದೆ. ಇದೀಗ ಭಾರತ ಮತ್ತೆ ಮೈ ಕೊಡವಿ ನಿಲ್ಲುತ್ತಿದ್ದು, ದೇಶ ವಿದೇಶಗಳಲ್ಲಿ ಭಾರತದ ಶಕ್ತಿಯ ಅರಿವು ಹೆಚ್ಚುತ್ತಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ದೇವರಹುಬ್ಬಳ್ಳಿ ಸಿದ್ಧಾಶ್ರಮದ ಸಿದ್ದಶಿವಯೋಗಿ ಸ್ವಾಮೀಜಿ, ಹಿಂದೂ ಧರ್ಮದ ರಕ್ಷಣೆ ಮತ್ತು ದೇಶದ ರಕ್ಷಣೆ ಯುವಕರ ಆದ್ಯತೆ ಆಗಬೇಕು ಎಂದು ಹೇಳಿದರು.

ಹಿಂದೂ ಸಂಚಲನಾ ಸಮಿತಿ ಅಧ್ಯಕ್ಷ ಮಹಾದೇವಪ್ಪ ನೀರಲಗಿ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಜೋಡಳ್ಳಿ ನಿರೂಪಿಸಿದರು. ಡಾ. ಬಸವರಾಜ್ ಹೊಂಗಲ್ ಸ್ವಾಗತಿಸಿದರು. ಈರಯ್ಯ ಬೆಳ್ಳಕ್ಕಿಮಠ ವಂದಿಸಿದರು. ವಿರಾಟ ಹಿಂದೂ ಸಮಾವೇಶ ನಿಮಿತ್ತ ನಡೆದ ಶೋಭಾಯಾತ್ರೆಯಲ್ಲಿ 50ಕ್ಕೂ ಹೆಚ್ಚು ಕಲಾ ತಂಡಗಳು ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಡೊಳ್ಳು ಕುಣಿತ, ವೀರಗಾಸೆ, ಜಗ್ಗಲಗಿ, ಕರಡಿಮಜಲು,ಹೆಜ್ಜೆಮೇಳ, ಲಂಬಾಣಿ ನೃತ್ಯ ಸೇರಿದಂತೆ ಅನೇಕ ಕಲಾ ಪ್ರಕಾರಗಳು ಪ್ರದರ್ಶನಗೊಂಡವು. ಕೌಟುಂಬಿಕ ಸಾಮರಸ್ಯ ದೇಶದ ದೊಡ್ಡ ಶಕ್ತಿ. ಇಂದು ಅದು ನಶಿಸುತ್ತಿರುವುದು ದುರದೃಷ್ಟಕರ. ಇದನ್ನು ಮತ್ತೆ ಕಾಪಾಡಿಕೊಳ್ಳಬೇಕಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಆಧ್ಯತೆಯಾಗಬೇಕು. ನೂರು ವರ್ಷಗಳನ್ನು ಪೂರೈಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೆಮ್ಮರವಾಗಿ ಬೆಳೆದಿದ್ದು ದೇಶ ಕಟ್ಟುವ ಕಾರ್ಯಕ್ಕೆ ಸದಾ ಅಗ್ರಪಂಕ್ತಿಯಲ್ಲಿ ನಿಲ್ಲಲಿದೆ.

ಮಂಗೇಶ ಭೇಂಡೆ, ಆರ್‌ಎಸ್‌ಎಸ್‌ ಪ್ರಮುಖರು