ಭಾರತ ವಿಶ್ವಮಾನ್ಯವಾಗಲು ರಾಮಾನುಜನ್ ರಂತಹ ಅನೇಕ ಮಹನೀಯರ ಪರಿಶ್ರಮವಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪ್ರಪಂಚದಲ್ಲಿ ಕಾಲಕಾಲಕ್ಕೆ ಬದಲಾಗುವ ಆಧುನಿಕತೆಯ ಗಣಿತ ಕಲಿಯಲು ಬದಲಾಗಬೇಕು, ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು, ಕಲಿಕೆಯಲ್ಲಿ ಕಷ್ಟವಾದಾಗ ಗಣಿತವನ್ನು ಸರಳಗೊಳಿಸಿ ವಿಶ್ವಖ್ಯಾತಿಯಾದ ರಾಮಾನುಜನ್‌ರನ್ನು ಸ್ಫೂರ್ತಿಯಾಗಿಸಿಕೊಳ್ಳಿ.

ಕನ್ನಡಪ್ರಭ ವಾರ್ತೆ ಕೋಲಾರಜಗತ್ತಿನ ಗಣಿತ ಕ್ಷೇತ್ರಕ್ಕೆ ಸೊನ್ನೆಯನ್ನು ಕೊಡುಗೆಯಾಗಿ ನೀಡಿದ ಭಾರತ ಆರ್ಯಭಟ, ಶ್ರೀನಿವಾಸ ರಾಮಾನುಜನ್‌ ರಂತಹ ಅನೇಕ ಶ್ರೇಷ್ಠ ಗಣಿತಜ್ಞರನ್ನು ನೀಡಿದೆ ಎಂದು ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯದ ಗಣಿತ ವಿಭಾಗದ ಪ್ರಾಧ್ಯಾಪಕ ಪ್ರೊ. ಎಸ್.ಚಂದನ್ ಕುಮಾರ್ ತಿಳಿಸಿದರು.ಬೆಂಗಳೂರು ಉತ್ತರ ವಿವಿಯ ಗಣಿತಶಾಸ್ತ್ರ ವಿಭಾಗ ಆಯೋಜಿಸಿದ್ದ ರಾಷ್ಟ್ರೀಯ ಗಣಿತದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಮಾನುಜನ್‌ರ ಹುಟ್ಟುಹಬ್ಬವನ್ನು ಇಂದು ನಮ್ಮ ದೇಶದಲ್ಲಿ ಮಾತ್ರವಲ್ಲ ಇಡೀ ವಿಶ್ವವೇ ಆಚರಿಸುತ್ತಿದೆ, ಕೇಂಬ್ರಿಡ್ಜ್ ವಿವಿಯಲ್ಲಿ ಈ ದಿನಕ್ಕೆ ಅತ್ಯಂತ ಮಹತ್ವ ನೀಡಿದೆ ಎಂದರು.

ಕೌಶಲ ಬೆಳೆಸಿಕೊಳ್ಳಬೇಕು

ಜಾತಿ, ಧರ್ಮ, ಭಾಷೆಗಳಿದ್ದರೂ, ವಿವಿಧತೆಯಲ್ಲಿ ಏಕತೆ ಸಾಧಿಸಿರುವ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ವಿಶ್ವಮಾನ್ಯವಾಗಲು ರಾಮಾನುಜನ್ ರಂತಹ ಅನೇಕ ಮಹನೀಯರ ಪರಿಶ್ರಮವಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪ್ರಪಂಚದಲ್ಲಿ ಕಾಲಕಾಲಕ್ಕೆ ಬದಲಾಗುವ ಆಧುನಿಕತೆಯ ಗಣಿತ ಕಲಿಯಲು ಬದಲಾಗಬೇಕು, ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು, ಕಲಿಕೆಯಲ್ಲಿ ಕಷ್ಟವಾದಾಗ ಗಣಿತವನ್ನು ಸರಳಗೊಳಿಸಿ ವಿಶ್ವಖ್ಯಾತಿಯಾದ ರಾಮಾನುಜನ್‌ರನ್ನು ನೀವು ಸ್ಫೂರ್ತಿಯಾಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಡೀ ವಿಶ್ವದಲ್ಲೇ ಭಾರತೀಯರೇ ಹೆಚ್ಚು ಬುದ್ದಿವಂತರು, ಗಣಿತದ ಕೂಡೋ, ಕಳೆಯೋ, ಗುಣಿಸೋ ಲೆಕ್ಕವನ್ನು ನಮ್ಮಲ್ಲಿ ೬ ವರ್ಷದ ಬಾಲಕ ಹೇಳಬಲ್ಲ, ಇತರೆ ದೇಶಗಳಲ್ಲಿ ಗಣಿತವೆಂದರೆ ಭಯವಿದೆ. ಗಣಿತ ವಿಶ್ವದ ಶೈಕ್ಷಣಿಕ ವ್ಯವಸ್ಥೆಯಲ್ಲಿ ನರವ್ಯೂಹವಿದ್ದಂತೆ, ಗಣಿತವನ್ನು ಪ್ರೀತಿಸಿ, ಗೌರವಿಸಿ, ನಾನು ಒಬ್ಬ ರಾಮಾನುಜನ್ ಆಗಬೇಕು ಎಂಬ ಸ್ಪೂರ್ತಿಯಿಂದ ಮುನ್ನಡೆಯಿರಿ ಎಂದರು.ರಾಮಾನುಜನ್‌ ಕೊಡುಗೆ ಅಪಾರ

ಬೆಂಗಳೂರು ಉತ್ತರ ವಿವಿ ಪ್ರಭಾರ ಕುಲಪತಿ ಪ್ರೊ.ಕುಮುದಾ ಮಾತನಾಡಿ, ಭಾರತದ ಗಣಿತ ಕ್ಷೇತ್ರದ ಮಹಾನ್ ಚೇತನ ರಾಮಾನುಜನ್, ಗಣಿತಕ್ಕೆ ನೀಡಿದ ಕೊಡುಗೆ ಅಪಾರ, ಅವರು ಕೇವಲ ೩೩ ವರ್ಷ ಬದುಕಿದ್ದರೂ ಸಾರ್ಥಕ ಜೀವನ ನಡೆಸಿ ಇಡೀ ವಿಶ್ವಕ್ಕೆ ಸ್ಪೂರ್ತಿಯಾಗಿದ್ದಾರೆ. ನಿಖರತೆ ಒಳಗೊಂಡಿರುವ ಗಣಿತ ಹುಟ್ಟಿದಂದಿನಿಂದ ಸಾಯುವವರೆಗೂ ಇಡೀ ಜೀವನದಲ್ಲಿ ಹಾಸುಹೊಕ್ಕಾಗಿದೆ, ನಮ್ಮ ಕುಟುಂಬ ನಿರ್ವಹಣೆಯಲ್ಲೂ ಗಣಿತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ವಿವಿಯ ಗಣಿತ ವಿಭಾಗದ ಸಂಯೋಜಕಿ ಸಿ.ಎಸ್.ಶ್ರೀಲತಾ, ಗಣಿತ ದಿನಾಚರಣೆ ಪ್ರಯುಕ್ತ ಅಂತರ ವಿಭಾಗೀಯ ಚರ್ಚಾಸ್ಪರ್ಧೆ, ಗಣಿತ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು, ಗಣಿತ ಚಟುವಟಿಕೆಗಳು ಮತ್ತಷ್ಟು ನಡೆಸಲು ಕ್ರಮವಹಿಸುವುದಾಗಿ ತಿಳಿಸಿ, ಗಣಿತ ವಿಭಾಗದ ಮಹತ್ವವನ್ನು ಇತರ ವಿಭಾಗಗಳ ವಿದ್ಯಾರ್ಥಿಗಳಿಗೂ ತಿಳಿಸುವ ಉದ್ದೇಶವಿತ್ತು ಎಂದರು. ಬಹುಮಾನ ವಿತರಣೆ:

ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಹಪ್ರಾಧ್ಯಾಪಕ ಜೆ.ಎಂ.ಶಿವರಾಜ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಮುಬಾರಕ್ ತಾಜ್, ಸುಷ್ಮ, ವಿದ್ಯಾರ್ಥಿಗಳಾದ ಶಶಿಕುಮಾರ್, ನೂರ್ ಫಿಝಾ ನಿರೂಪಿಸಿ, ತೇಜಸ್ವಿನಿ ಪ್ರಾರ್ಥಿಸಿ, ಉಪನ್ಯಾಸಕ ನಾಗಾರ್ಜುನ್ ವಂದಿಸಿದರು.