ಭಾರತದ ತ್ರಿವರ್ಣ ಧ್ವಜ ನಮ್ಮೆಲ್ಲರ ಅಸ್ಮಿತೆಯ ಪ್ರತೀಕ: ಶಾಸಕ ಸವದಿ

| Published : Aug 15 2024, 01:50 AM IST

ಭಾರತದ ತ್ರಿವರ್ಣ ಧ್ವಜ ನಮ್ಮೆಲ್ಲರ ಅಸ್ಮಿತೆಯ ಪ್ರತೀಕ: ಶಾಸಕ ಸವದಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ತ್ರಿವರ್ಣ ಧ್ವಜ ನಮ್ಮೆಲ್ಲರ ಅಸ್ಮಿತೆಯ ಪ್ರತೀಕ. ಇದಕ್ಕೆ ಚ್ಯುತಿ ಬಾರದಂತೆ ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಪ್ರೇಮ ಮೆರೆಯಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಭಾರತದ ತ್ರಿವರ್ಣ ಧ್ವಜ ನಮ್ಮೆಲ್ಲರ ಅಸ್ಮಿತೆಯ ಪ್ರತೀಕ. ಇದಕ್ಕೆ ಚ್ಯುತಿ ಬಾರದಂತೆ ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಪ್ರೇಮ ಮೆರೆಯಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಬುಧವಾರ ಇಲ್ಲಿನ ಮಿನಿ ವಿಧಾನಸೌಧ ತಹಸೀಲ್ದಾರ್ ಕಾರ್ಯಾಲಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಹರ್ ಘರ್ ತಿರಂಗಾ ಅಭಿಯಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆ.15ರ ಸ್ವಾತಂತ್ರ್ಯ ದಿನಾಚರಣೆ ನಾವೆಲ್ಲರೂ ಅರ್ಥಪೂರ್ಣವಾಗಿ ಆಚರಿಸೋಣ. ಜೊತೆಗೆ ದೇಶದ ಸಂಸ್ಕೃತಿ, ಭದ್ರತೆ, ಐಕ್ಯತೆ ಮತ್ತು ಎಲ್ಲರೂ ಒಂದಾಗಿ ಸಾಗೋಣ ಎಂಬ ಸಂದೇಶವನ್ನು ಸಾರಲು ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ. ಈ ಜನಜಾಗೃತಿ ಮೆರವಣಿಗೆಯಲ್ಲಿ ಭಾಗವಹಿಸಲು ನನಗೂ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.

ತಾಲೂಕು ತಹಸೀಲ್ದಾರ್ (ಪ್ರೊಬೇಷನರಿ ಐಎಎಸ್ ಅಧಿಕಾರಿ) ದಿನೇಶಕುಮಾರ ಮೀನಾ ಮಾತನಾಡಿ, ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ, ಅಂಗನವಾಡಿ ಕೇಂದ್ರ, ಶಾಲಾ-ಕಾಲೇಜು, ಸರ್ಕಾರಿ ಕಚೇರಿ, ನ್ಯಾಯಬೆಲೆ ಅಂಗಡಿ, ಸಂಘ-ಸಂಸ್ಥೆಗಳು, ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು. ಕಡ್ಡಾಯವಾಗಿ ಧ್ವಜ ಸಂಹಿತೆ ಪಾಲಿಸಬೇಕು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ಸ್ಮರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಶ್ರೀಪಾದ ಜಾಲ್ದೆ, ತಾಪಂ ಇಒ ಶಿವಾನಂದ ಕಲ್ಲಾಪುರ, ಅಭಿಯಂತರ ವೀರಣ್ಣ ವಾಲಿ, ಕೃಷಿ ಸಹಾಯಕ ನಿರ್ದೇಶಕ ನಿಂಗನಗೌಡ ಬಿರಾದಾರ, ಪುರಸಭೆ ಮುಖ್ಯ ಅಧಿಕಾರಿ ಅಶೋಕ ಗುಡಿಮನಿ, ಪಿಎಸ್ಐ ಶಿವಾನಂದ ಕಾರಜೋಳ, ತಾಲೂಕು ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ, ಉಪತಹಸೀಲ್ದಾರ ಮಹದೇವ ಬಿರಾದಾರ, ಗ್ರಾಮ ಆಡಳಿತ ಅಧಿಕಾರಿಗಳಾದ ಎಂ.ಎಂ ಮಿರ್ಜಿ, ಎಂ.ಎಂ. ಮಲ್ಲುಖಾನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತ್ರಿವರ್ಣ ಧ್ವಜ ಹಿಡಿದು ಬೈಕ್ ಜಾಥಾದಲ್ಲಿ ಭಾಗವಹಿಸಿದ್ದರು.ಬೈಕ್ ಓಡಿಸಿ ಜಾಗೃತಿ ಮೂಡಿಸಿದ ಶಾಸಕ ಸವದಿ:

ಮಾಜಿ ಡಿಸಿಎಂ ಶಾಸಕ ಲಕ್ಷ್ಮಣ ಸವದಿ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಬಳಿಕ ಬುಲೆಟ್ ನಲ್ಲಿ ಹೆಲ್ಮೆಟ್ ಧರಿಸಿ ಜಾಥಾದಲ್ಲಿ ಪಾಲ್ಗೊಳ್ಳುವ ಮೂಲಕ ದೇಶಾಭಿಮಾನ ಮೆರೆದರು. ಮಿನಿವಿಧಾನಸೌಧ ತಹಸೀಲ್ದಾರ್ ಕಾರ್ಯಾಲಯದಿಂದ ಆರಂಭವಾದ ಹರ್ ಘರ್ ತಿರಂಗಾ ಅಭಿಯಾನದ ಜಾಗೃತಿ ಜಾಥಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ, ಶಿವಯೋಗಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ಹಾಯ್ದು ಶಿವಾಜಿ ವೃತ್ತದಲ್ಲಿ ಸಮಾರೋಪಗೊಂಡಿತು.