ಶಿರೂರು ನೀರಿನಾಳದಲ್ಲಿ ವಾಹನಗಳ ಕೆಲವು ವಸ್ತುಗಳು ಪತ್ತೆ

| Published : Aug 15 2024, 01:50 AM IST

ಶಿರೂರು ನೀರಿನಾಳದಲ್ಲಿ ವಾಹನಗಳ ಕೆಲವು ವಸ್ತುಗಳು ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿರೂರು ಗುಡ್ಡ ಕುಸಿತ ಸ್ಥಳದ ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ಪುನರ್ ಆರಂಭವಾದ ಬೆನ್ನಲ್ಲೆ ಬುಧವಾರ ಕಾರ್ಯಾಚರಣೆ ವೇಗ ಪಡೆದಿದ್ದು, ಲಾರಿಯ ಮತ್ತೆರಡು ಬಿಡಿಭಾಗಗಳು ದೊರೆತಿದೆ. ಕಾರ್ಯಾಚರಣೆ ಬುಧವಾರ ಮುಂಜಾನೆ ೮ ಗಂಟೆಯಿಂದ ಆರಂಭವಾಗಿದ್ದು, ನೌಕಾದಳ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಜತೆಗೆ ಮಲ್ಪೆ ಈಶ್ವರ ತಂಡದಿಂದ ನದಿಯಲ್ಲಿ ಮುಳುಗಿ ಪತ್ತೆ ಕಾರ್ಯ ನಡೆದಿದೆ.

ಅಂಕೋಲಾ: ಶಿರೂರು ಗುಡ್ಡ ಕುಸಿತ ಸ್ಥಳದ ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ಪುನರ್ ಆರಂಭವಾದ ಬೆನ್ನಲ್ಲೆ ಬುಧವಾರ ಕಾರ್ಯಾಚರಣೆ ವೇಗ ಪಡೆದಿದ್ದು, ಲಾರಿಯ ಮತ್ತೆರಡು ಬಿಡಿಭಾಗಗಳು ದೊರೆತಿದೆ.

ಲಾರಿಗೆ ಅಳವಡಿಸುವ ಲಾಕ್‌ ಮತ್ತು ಲಾರಿಗಿರುವ ಕಬ್ಬಿಣದ ಶೀಟ್‌ ಬುಧವಾರ ದೊರೆತಿದೆ. ಆದರೆ ಇದು ಬೆಂಜ್‌ ಲಾರಿಯದ್ದಲ್ಲ ಎಂದು ಬೆಂಜ್ ಲಾರಿ ಮಾಲೀಕ ಮುನಾಫ್‌ ಖಚಿತಪಡಿಸಿದ್ದಾರೆ. ಅದು ಟ್ಯಾಂಕರ್‌ನದ್ದು ಎಂದು ಖಚಿತವಾಗಿದೆ. ಇದೇ ಸಂದರ್ಭದಲ್ಲಿ ಲಾರಿಗೆ ಕಟ್ಟುವ ಎರಡು ಮೀಟರ್‌ನಷ್ಟು ಹಗ್ಗದ ತುಂಡು ಸಿಕ್ಕಿದೆ.

ಕಾರ್ಯಾಚರಣೆ ಬುಧವಾರ ಮುಂಜಾನೆ ೮ ಗಂಟೆಯಿಂದ ಆರಂಭವಾಗಿದ್ದು, ನೌಕಾದಳ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಜತೆಗೆ ಮಲ್ಪೆ ಈಶ್ವರ ತಂಡದಿಂದ ನದಿಯಲ್ಲಿ ಮುಳುಗಿ ಪತ್ತೆ ಕಾರ್ಯ ನಡೆದಿದೆ. ನೌಕಾದಳದ ಸಿಬ್ಬಂದಿಯವರು ತಮ್ಮ ಮುಳುಗು ಪರಿಣತರನ್ನು ಇಲ್ಲಿ ಕಾರ್ಯಾಚರಣೆಗೆ ಇಳಿಸಿದ್ದಾರೆ. ಈಶ್ವರ ಮಲ್ಪೆಯ ಮೂರು ಜನರು ಮುಳುಗು ಕಾರ್ಯಾಚರಣೆ ನಡೆಸಿದ್ದು, ಲಾರಿ ಮತ್ತು ಮೂವರ ಮೃತದೇಹದ ಕುರಿತಾಗಿ ಬಲವಾದಂತಹ ಯಾವುದೇ ಮಾಹಿತಿಗಳು ಕಾರ್ಯಾಚರಣೆ ವೇಳೆ ದೊರೆತಿಲ್ಲ.

ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ, ಶಾಸಕ ಸತೀಶ ಸೈಲ್, ಕೇರಳ ಮಂಜೇಶ್ವರ ಶಾಸಕ ಅಶ್ರಫ್‌, ಪೊಲೀಸ್ ವರಿಷ್ಠ ಎಂ. ನಾರಾಯಣ ಸ್ಥಳದಲ್ಲಿ ಹಾಜರಿದ್ದು, ಈಗ ನಡೆಯುತ್ತಿದ್ದ ಕಾರ್ಯಾಚರಣೆ ಯಶಸ್ವಿಯಾಗದಿದ್ದರೆ ಮುಂದೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವುದರ ಕುರಿತು ಚರ್ಚೆ ನಡೆಸಿದ್ದಾರೆ. ನದಿಯಲ್ಲಿರುವ ಮಣ್ಣನ್ನು ತೆರವು ಮಾಡಿ ಮೂವರ ಮೃತದೇಹವನ್ನು ಪತ್ತೆ ಮಾಡಲು ಈ ತಂಡ ಸಿದ್ಧತೆ ನಡೆಸುತ್ತಿದೆ.

ಈ ಘಟನೆಯಲ್ಲಿ ೧೧ ಜನ ಮೃತಪಟ್ಟಿದ್ದು, ೮ ಜನರ ಮೃತದೇಹ ದೊರೆತಿದೆ. ಇನ್ನುಳಿದ ಮೂರು ಮೃತದೇಹಗಳಾದ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಮತ್ತು ಕೇರಳದ ಅರ್ಜುನ ಪತ್ತೆ ಕಾರ್ಯ ಕಳೆದೆ ಒಂದು ತಿಂಗಳಿನಿಂದ ನಡೆದಿದೆ. ಭಾರಿ ಮಳೆ ಮತ್ತು ನೀರಿನ ಹರಿವು ಹೆಚ್ಚಿದ್ದರಿಂದ ಮಧ್ಯೆ ಕೆಲವು ದಿನಗಳ ಕಾಲ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದ್ದು, ಮತ್ತೆ ಮಂಗಳವಾರದಿಂದ ಕಾರ್ಯಾಚರಣೆ ನಡೆದಿದೆ. ನೀರಿನಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ಕಲ್ಲುಗಳು ತುಂಬಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಇದನ್ನು ತೆರವುಗೊಳಿಸಲು ಡ್ರೆಜರ್ ಕಳುಹಿಸುವಂತೆ ಗೋವಾ ಸರ್ಕಾರಕ್ಕೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಇನ್ನೆರಡು ದಿನಗಳಲ್ಲಿ ಆ ಕಾರ್ಯಾಚರಣೆ ನಡೆಯಲಿದೆ ಎಂದು ಶಾಸಕ ಸತೀಶ ಸೈಲ್ ಹೇಳಿದರು.