ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಭಾರತೀಯ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡಿದ್ದನ್ನು ಗುರುತಿಸಿ, ಭಾರತದಲ್ಲಿ ಪ್ರತಿ ವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ತಿಳಿಸಿದರು. ನಗರದ ಸಿದ್ಧಗಂಗಾ ಮಠದ ಉದ್ಧಾನೇಶ್ವರ ಸಮುದಾಯ ಭವನದಲ್ಲಿ ಭಾರತೀಯ ಸೇನಾ ದಿನದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಮೊದಲ ಬಾರಿಗೆ 1859 ಏಪ್ರಿಲ್ 1ರಂದು ಭಾರತೀಯ ಸೇನೆಯನ್ನು ಸ್ಥಾಪಿಸಲಾಗಿತ್ತು.ಅಂದು ಅದನ್ನು ಬ್ರಿಟಿಷ್ ಭಾರತೀಯ ಸೇನೆ ಎಂದು ಕರೆಯಲಾಗುತ್ತಿತ್ತು. 1947 ಆಗಸ್ಟ್ 15 ರಂದು ಭಾರತವು ಬ್ರಿಟಷರಿಂದ ಸ್ವಾತಂತ್ರವನ್ನು ಪಡೆದುಕೊಂಡಿತು. ಆದರೆ ಜನವರಿ 1949 ಜನವರಿ 15 ರಂದು ಮೊದಲ ಬಾರಿಗೆ ಕೆ.ಎಂ.ಕಾರ್ಯಪ್ಪ ಅವರು ಭಾರತೀಯ ಸೇನೆಯ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡರು. ಅಂದು ಫ್ರಾನ್ಸಿಸ್ ಬಟ್ಟರ್ ಅವರು ಕೆ.ಎಂ.ಕಾರ್ಯಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಬ್ರಿಟಿಷ್ ಅಧಿಕಾರಿಯಿಂದ ಅಧಿಕಾರ ಹಸ್ತಾಂತರವಾದ ದಿನವು ಭಾರತದ ಇತಿಹಾಸದಲ್ಲೇ ಮಹತ್ವ ಪಡೆದುಕೊಂಡಿದ್ದು, ಇದರ ಜ್ಞಾಪಕಾರ್ಥವಾಗಿ ಭಾರತೀಯ ಸೇನಾ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ವಿವರಿಸಿದರು.
ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಅನುಭವಿಗಳಿಗೆ ವಿಶೇಷ ಸ್ಥಾನವಿದೆ. ನಮ್ಮ ಸೈನಿಕರು ಕುಟುಂಬ, ಜಾತಿ ಮತ್ತು ಧರ್ಮಕ್ಕಿಂತ ಮೇಲೇರುತ್ತಾರೆ ಮತ್ತು ರಾಷ್ಟ್ರದ ಬಗ್ಗೆ ಮಾತ್ರ ಯೋಚಿಸುತ್ತಾರೆ. ರಾಷ್ಟ್ರವು ಸುರಕ್ಷಿತವಾಗಿದ್ದರೆ, ಎಲ್ಲವೂ ಸುರಕ್ಷಿತವಾಗಿರುತ್ತದೆ ಎಂದು ತಿಳಿದು ತಮ್ಮ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾರೆ. ಇದು ಅವರಿಗೆ ಪ್ರತಿ ಸವಾಲನ್ನು ಎದುರಿಸುವ ನೈತಿಕ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದರು.ಭಾರತೀಯ ಸೈನಿಕರ ಶೌರ್ಯ, ಸಮಗ್ರತೆ, ವೃತ್ತಿಪರ ಮತ್ತು ಮಾನವೀಯತೆಯನ್ನು ಇಡೀ ದೇಶವಲ್ಲದೆ ಇಡೀ ವಿಶ್ವವೇ ಗೌರವಿಸುತ್ತದೆ ಮತ್ತು ಗುರುತಿಸುತ್ತದೆ ಎಂದರು. ರಾಜ್ಯದಲ್ಲೇ ಎರಡನೇ ಅತಿದೊಡ್ಡ ಜಿಲ್ಲೆಯಾಗಿರುವ ತುಮಕೂರಿನಲ್ಲಿ ಸೈನಿಕರ ಭವನ ನಿರ್ಮಾಣವಾಗದಿರುವುದು ವಿಷಾಧನೀಯ, ಬಸ್ ನಿಲ್ದಾಣದಲ್ಲಿರುವ ವೀರಸೌಧ ಕಟ್ಟಡವನ್ನಾದರೂ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಿಮ್ಮ ಜೊತೆ ನಾನೂ ಕೂಡ ಕೈಜೋಡಿಸಿ ಜಿಲ್ಲಾಡಳಿತಕ್ಕೆ ಮನವಿ ಮಾಡುವುದಾಗಿ ತಿಳಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಇಂದು ಭಾರತೀಯ ಸೇನಾ ದಿನವಾಗಿದ್ದು, ನಮ್ಮ ಸೇನಾ ಸಿಬ್ಬಂದಿಯ ಅಸಾಧಾರಣ ಧೈರ್ಯ, ಅಚಲ ಬದ್ಧತೆ ಮತ್ತು ತ್ಯಾಗವನ್ನು ನಾವು ಗೌರವಿಸಬೇಕಾಗಿದೆ. ನಮ್ಮ ರಾಷ್ಟ್ರವನ್ನು ರಕ್ಷಿಸುವಲ್ಲಿ ಮತ್ತು ನಮ್ಮ ಸಾರ್ವಭೌಮತ್ವವನ್ನು ಎತ್ತಿಹಿಡಿಯುವಲ್ಲಿ ಅವರ ಅವಿರತ ಸಮರ್ಪಣೆ ಅವರ ಶೌರ್ಯಕ್ಕೆ ಸಾಕ್ಷಿಯಾಗಿದೆ ಎಂದು ನುಡಿದರು.
ನಾವು ಸುರಕ್ಷಿತವಾಗಿದ್ದೇವೆ ಎಂದರೆ ಅದಕ್ಕೆ ಗಡಿಯಲ್ಲಿ ನಮ್ಮನ್ನು ಕಾಯುತ್ತಿರುವ ಸೈನಿಕರೇ ಮುಖ್ಯ ಕಾರಣ. ಅನ್ನ ನೀರು ಎನ್ನದೆ ಬಿಸಿಲು ಮಳೆ ಎನ್ನದೆ ರಾತ್ರಿ ಹಗಲು ಎನ್ನದೆ ಗಡಿಯಲ್ಲಿ ನಿದ್ದೆಗೆಟ್ಟು ನಮ್ಮ ದೇಶದ ರಕ್ಷಣೆಗಾಗಿ ಹಗಲಿರುಳು ನಮ್ಮ ಸೈನಿಕರು ಶ್ರಮಿಸುತ್ತಿದ್ದಾರೆ. ಅವರಿಗೆ ನಾವು ಗೌರವ ಸಲ್ಲಿಸುವ ಸುದಿನವಾಗಿದೆ ಎಂದರು.ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ. ಶಿವಣ್ಣ ಮಾತನಾಡಿ, ಮಾಜಿ ಸೈನಿಕರಿಗೆ ಸರ್ಕಾರಗಳಿಂದ ಸಿಗಬೇಕಾದ ಸವಲತ್ತುಗಳು ಇನ್ನೂ ಸಿಕ್ಕಿಲ್ಲ, ವೇದಿಕೆಗಳಲ್ಲಿ ಭಾಷಣ ಮಾಡುವುದರ ಬದಲು ಮಾಜಿ ಸೈನಿಕರಿಗೆ ಸಿಗಬೇಕಾದ ಸವಲತ್ತುಗಳ ಬಗ್ಗೆ ಗಮನ ಹರಿಸಿ, ಬಗೆ ಹರಿಸಿದರೆ ಉತ್ತಮ. ತುಮಕೂರು 2001 ರಿಂದ ಜಿಲ್ಲೆಯಲ್ಲಿ ಸುಮಾರು 2000 ಕ್ಕೂ ಹೆಚ್ಚು ಮಾಜಿ ಸೈನಿಕರಿದ್ದಾರೆ. ಅವರಿಗೆ ಸರ್ಕಾರಗಳಿಂದ ಸಿಗಬೇಕಾದ ಸವಲತ್ತುಗಳು ಇನ್ನೂ ಮರೀಚಿಕೆಯಾಗಿಯೇ ಉಳಿದಿವೆ ಎಂದು ವಿಷಾಧಿಸಿದರು.
ಜಿಲ್ಲಾಧ್ಯಕ್ಷ ಸಿ.ಪಾಂಡುರಂಗ ಮಾತನಾಡಿ, ದೇಶಕ್ಕಾಗಿ ನಿಸ್ವಾರ್ಥ ಸೇವೆ, ರಾಷ್ಟ್ರದ ಮೇಲಿನ ಪ್ರೀತಿ ಹಾಗೂ ಸಹೋದರತ್ವಕ್ಕೆ ಉತ್ತಮ ಉದಾಹರಣೆಯಾಗಿರುವ ಭಾರತದ ಸೈನಿಕರ ಸಾಧನೆಗಳನ್ನು ಈ ದಿನ ಸ್ಮರಿಸಲಾಗುತ್ತದೆ. ಭಾರತೀಯ ಸೇನಾ ದಿನವನ್ನು ವಿಶೇಷವಾಗಿ ಆಚರಿಸಬೇಕೆನ್ನುವ ನಿಟ್ಟಿನಲ್ಲಿ ಇಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ರಕ್ತದಾನ ಶಿಬಿರದಲ್ಲಿ 40 ಯೂನಿಟ್ ರಕ್ತ ಸಂಗ್ರಹವಾಯಿತು. ಸಿದ್ಧಗಂಗಾ ಆಸ್ಪತ್ರೆಗೆ ರಕ್ತವನ್ನು ನೀಡಲಾಯಿತು. ಇದೇ ವೇಳೆ ಮಾಜಿ ಸೈನಿಕರ 2024 ನೇ ವರ್ಷದ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಲಿಂಗಣ್ಣ, ಕಾರ್ಯಾಧ್ಯಕ್ಷ ಡಾ.ವಿ.ನಾಗರಾಜು, ಗುಬ್ಬಿ ತಾಲೂಕು ಘಟಕದ ಅಧ್ಯಕ್ಷ ಲೋಕೇಶ್ ಬಿದರೆ, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಸ್ವರೂಪವಾಣಿ, ಶಾರದ ವೃದ್ದಾಶ್ರಮದ ಮುಖ್ಯಸ್ಥೆ ಯಶೋದ, ಎನ್‌ಸಿಸಿ ಬೆಟಾಲಿಯನ್ ನಾಯಕ್ ಸುಬೇದಾರ್ ದರೋಜಿ, ಪ್ರದೀಪ್‌ಕುಮಾರ್, ಬೆಸ್ಕಾಂನ ಪ್ರಶಾಂತ್ ಗೋಡೆ, ಎಸ್‌ಬಿಐನ ವಾದಿರಾಜು ಸೇರಿದಂತೆ ಮಾಜಿ ಸೈನಿಕರು ಮತ್ತು ವೀರನಾರಿಯರು ಭಾಗವಹಿಸಿದ್ದರು.