ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಭಾರತದ ಸಂಸ್ಕೃತಿಯು ಸನಾತನ ಹಿಂದೂ ಧರ್ಮದ ತಳಹದಿಯ ಮೇಲೆ ನಿಂತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.ತಾಲೂಕಿನ ಸೋರೆಕಾಯಿಪುರ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಮಲ್ಲಿಗಮ್ಮ, ಶ್ರೀ ದುರ್ಗಮ್ಮ, ಶ್ರೀ ಮುನೇಶ್ವರ ಹಾಗೂ ಶ್ರೀ ಮಾರಿಯಮ್ಮ ದೇವಿಯ ದೇಗುಲಗಳ ಲೋಕಾರ್ಪಣೆ ಹಾಗೂ ದೇವರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರತಿ ಗ್ರಾಮಗಳಲ್ಲಿಯೂ ದೇಗುಲ ಹಾಗೂ ಶಾಲೆಗಳು ಇರಬೇಕು. ದೇಗುಲದ ಗಂಟೆ ಹಾಗೂ ಶಾಲೆಯ ಗಂಟೆ ಶಬ್ದ ಮೊಳಗಬೇಕು. ಶಾಲೆಯಿಂದ ಶಿಕ್ಷಣ ಮತ್ತು ದೇಗುಲಗಳಿಂದ ಧರ್ಮ, ಸಂಸ್ಕೃತಿ ಹಾಗೂ ಸಂಸ್ಕಾರ ಬೆಳೆಯುತ್ತದೆ ಎಂದರು. ಇತ್ತೀಚಿನ ವರ್ಷಗಳಿಂದ ತಾಲೂಕಿನಾದ್ಯಂತ ದೇಗುಲಗಳು ಬಹುತೇಕ ಜೀರ್ಣೋದ್ಧಾರದೊಂದಿಗೆ ಲೋಕಾರ್ಪಣೆಗೊಂಡಿವೆ. ದೇಗುಲಗಳ ನಿರ್ಮಾಣಕ್ಕೆ ಶಾಸಕರ ನಿಧಿ ಹಾಗೂ ವೈಯಕ್ತಿಕವಾಗಿ ಸಾಕಷ್ಟು ಅನುದಾನ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮಗಳು:ದೇಗುಲಗಳ ಲೋಕಾರ್ಪಣೆ ಹಿನ್ನೆಲೆ ಮುಂಜಾನೆಯೇ ಹಸಿರು ಚಪ್ಪರ ಹಾಕಲಾಗಿದ್ದು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಮೊದಲಿಗೆ ವಿಶ್ವೇಶ್ವರ ಹಾಗೂ ಗಂಗಾ ಪೂಜೆ ನೆರವೇರಿತು. ನಂತರ ದುರ್ಗಾ ಹೋಮ, ಮೃತ್ಯುಂಜಯ ಹೋಮ, ವೀರಭದ್ರೇಶ್ವರ ಸಮೇತ ವೀರಗಾಸೆಯೊಂದಿಗೆ ಕುಂಭ ಕಳಸರಾಧನೆ ಬಳಿಕ ಮಲ್ಲಿಗೆಮ್ಮ ದೇವಾಲಯ ಪ್ರವೇಶ ಮತ್ತು ಬಿಂಬ ಸೋಮ ಕ್ಷಯನವಾಸ ಹಾಗೂ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿದವು. ಕಲಶ ಉತ್ಸವದಲ್ಲಿ ವೀರಗಾಸೆ ಕುಣಿತವು ನೋಡುಗರ ಗಮನ ಸೆಳೆಯಿತು.ಗ್ರಾಮ ಪಂಚಾಯಿತಿ ಸದಸ್ಯೆ ರಾಣಿ, ಮಾಜಿ ಅಧ್ಯಕ್ಷ ಚಂದ್ರು, ಜಿಕೆವಿಕೆಯ ನಿವೃತ್ತ ಅಧಿಕಾರಿ ಮತಿಘಟ್ಟ ದೇವರಾಜು, ದೇವಸ್ಥಾನದ ವ್ಯವಸ್ಥಾಪಕರಾದ ಮೇಗಲಮನೆ ನಂಜುಂಡೇಗೌಡ ಮತ್ತು ಪುಟ್ಟಸ್ವಾಮಿಗೌಡ, ಪ್ರಮುಖರಾದ ಚೇತನ್, ಪಟೇಲ್ ಸಣ್ಣತಮ್ಮೇಗೌಡ, ಸೋರೆಕಾಯಿಪುರ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.