ಸಾರಾಂಶ
ಬೀದರ್ ನಗರದ ಬಿವಿಬಿ ಕಾಲೇಜು ಆವರಣದಲ್ಲಿ ನವೀನ್ ಪಬ್ಲಿಕ್ ಸ್ಕೂಲ್ ಮತ್ತು ಸೂರ್ಯ ನಮಸ್ಕಾರ ಸಂಘದಿಂದ ‘ಯುಗಾದಿ ಆಚರಣೆ’ ಕಾರ್ಯಕ್ರಮ ಜರುಗಿತು.
ಕನ್ನಡಪ್ರಭ ವಾರ್ತೆ ಬೀದರ್
ನಾವು ಆಧುನಿಕತೆಯಲ್ಲಿ ಎಷ್ಟೇ ಮುಂದುವರಿದರೂ ಕೂಡ ನಮ್ಮ ಆಚಾರ, ಸಂಸ್ಕೃತಿ, ಸಂಪ್ರದಾಯಗಳು ಉಳಿಸಿಕೊಂಡು ಬರಬೇಕಾಗಿದೆ ಎಂದು ಸೂರ್ಯ ನಮಸ್ಕಾರ ಸಂಘದ ಅಧ್ಯಕ್ಷರಾದ ಕಾಮಶೆಟ್ಟಿ ಚಿಕಬಸೆ ನುಡಿದರು.ನಗರದ ಬಿವಿಬಿ ಕಾಲೇಜು ಆವರಣದಲ್ಲಿ ನವೀನ್ ಪಬ್ಲಿಕ್ ಸ್ಕೂಲ್ ಮತ್ತು ಸೂರ್ಯ ನಮಸ್ಕಾರ ಸಂಘವು ಆಯೋಜಿಸಿದ ‘ಯುಗಾದಿ ಆಚರಣೆ’ ಕಾರ್ಯಕ್ರಮದಲ್ಲಿ ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯ ಕೋರಿ ಮಾತನಾಡಿದ ಅವರು, ಈ ಯುಗಾದಿ ಪರ್ವದಲ್ಲಿಯೇ ಹೊಸ ಚಿಗುರಾದ ಮಾವು-ಬೇವು ಬೆಲ್ಲದ ಜೊತೆ ಸೇರಿಸಿ ಸವಿಯುವ ಮೂಲಕ ಹೊಸ ವರ್ಷಕ್ಕೆ ಸ್ವಾಗತಿಸುವ ಸಂಪ್ರದಾಯವಿದೆ ಎಂದರು.
ಹೊಸ ವರ್ಷ ನಮ್ಮ ಭಾರತೀಯ ಪಂಚಾಂಗವು ಯುಗಾದಿಯ ದಿನದಿಂದಲೇ ಬದಲಾಗುತ್ತದೆ. ಈ ನೂತನ ವರ್ಷದ ಮೊದಲ ದಿನವೇ ನಮ್ಮ ಗುರು-ಹಿರಿಯರು ಇಡಿ ವರ್ಷದ ಮಳೆ-ಬೆಳೆಯ ಸಂಪೂರ್ಣ ಭವಿಷ್ಯ ಹೇಳುತ್ತಾರೆ. ಗ್ರಾಮಗಳಲ್ಲಿನ ರೈತರು ಮುಖಂಡರು, ಗುರು-ಹಿರಿಯರ ಸಮ್ಮುಖದಲ್ಲಿ ಕುಳಿತು ಹೊಸ ವರ್ಷದ ಮಹತ್ವವನ್ನು ತಿಳಿದುಕೊಳ್ಳುತ್ತಾರೆ ಎಂದರು.ಇದರರ್ಥ ಇಷ್ಟೇ ನಮ್ಮ ಜೀವನದಲ್ಲಿ ಸಿಹಿ-ಕಹಿಗಳೆರಡು ಸಮಾನವಾಗಿ ಸ್ವೀಕರಿಸಬೇಕು. ಬದುಕಿನ ಏರಿಳಿತದಲ್ಲಿ ಸುಖ ಬಂದಾಗ ಅತಿಯಾಗಿ ಹಿಗ್ಗದೆ ದುಃಖ ಬಂದಾಗ ಅತಿಯಾಗಿ ಕುಗ್ಗದೆ ಕಷ್ಟ-ಸುಖಗಳೆರಡೂ ಸಮಾನವಾಗಿ ಸ್ವೀಕರಿಸಬೇಕೆಂಬ ಉತ್ತಮ ಸಂದೇಶ ಈ ಯುಗಾದಿ ಪರ್ವ ರವಾನಿಸುತ್ತದೆ ಎಂದು ಯುಗಾದಿ ಹಬ್ಬದ ಮಹತ್ವ ವಿವರಿಸಿದರು.
ಈ ಆಚರಣೆಯಲ್ಲಿ ಸೂರ್ಯ ನಮಸ್ಕಾರ ಸಂಘದ ಪದಾಧಿಕಾರಿಗಳಾದ ಪ್ರಭು ಚಾರಿ, ಬಳವಂತರೆಡ್ಡಿ, ರಾಜಕುಮಾರ ಬಿರಾದಾರ, ರಾಜಕುಮಾರ ಪಾಟೀಲ, ಬಸವರಾಜ ದಾನಿ, ವಿಜಯಕುಮಾರ ರಾಥೋಡ, ಬಸವರಾಜ ಕರಪೂರ, ಮನೋಹರ ರಾಥೋಡ, ಶಿವರಾಜ, ವಿನೋದ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದು, ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯ ಕೋರಿದರು.