ಭಾರತದ ಪ್ರಜಾಪ್ರಭುತ್ವ ವಿಶ್ವಕ್ಕೆ ಮಾದರಿ: ಶಿವರಾಜ ತಂಗಡಗಿ

| Published : Jan 27 2025, 12:46 AM IST

ಭಾರತದ ಪ್ರಜಾಪ್ರಭುತ್ವ ವಿಶ್ವಕ್ಕೆ ಮಾದರಿ: ಶಿವರಾಜ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಪ್ರಜಾಪ್ರಭುತ್ವ ಇಡೀ ವಿಶ್ವಕ್ಕೆ ಮಾದರಿಯಾಗಿದೆ.

76ನೇ ಗಣರಾಜ್ಯೋತ್ಸವ ದಿನಾಚರಣೆ: ಜಿಲ್ಲಾ ಉಸ್ತುವಾರಿ ಸಚಿವರಿಂದ ರಾಷ್ಟ್ರ ಧ್ವಜಾರೋಹಣ

ಕನ್ನಡಪ್ರಭ ವಾರ್ತೆ ಕೊಪ್ಪಳ

ಭಾರತದ ಪ್ರಜಾಪ್ರಭುತ್ವ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ವಿಶ್ವವೇ ಗೌರವಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಭಾನುವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಮಂಗಲ ಪಾಂಡೆ, ನೇತಾಜಿ ಸುಭಾಷಚಂದ್ರ ಭೋಸ್, ಭಗತ್‌ಸಿಂಗ್, ಮಹಾತ್ಮಾ ಗಾಂಧೀಜಿ, ಸರ್ದಾರ್ ವಲ್ಲಬ್ ಬಾಯ್ ಪಟೇಲ್ ಸೇರಿದಂತೆ ಇನ್ನೂ ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ 1947ರ ಆ. 15ರಂದು ನಮ್ಮ ದೇಶ ಸ್ವಾತಂತ್ರ್ಯ ಕಂಡಿತು. ಬಳಿಕ ಸಂವಿಧಾನ ಕರಡು ರಚನಾ ಸಮಿತಿ ಅಧ್ಯಕ್ಷರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಅವಿರತ ಪರಿಶ್ರಮದ ಫಲವಾಗಿ 1950ರ ಜನವರಿ 26 ರಂದು ಭಾರತದ ಸಂವಿಧಾನ ಅಂಗೀಕರಿಸಲಾಯಿತು. ಈ ದಿನವನ್ನು ನಾವು ಗಣರಾಜ್ಯ ದಿನವನ್ನಾಗಿ ಆಚರಿಸುತ್ತಾ ಬಂದಿದ್ದೇವೆ ಎಂದರು.

ನಮ್ಮ ಸಂವಿಧಾನವು ವಿಶ್ವದ ಬೃಹತ್ ಸಂವಿಧಾನವಾಗಿದ್ದು, 448 ವಿಧಿಗಳು, 12 ಪರಿಚ್ಛೇದಗಳು, 103ಕ್ಕೂ ಹೆಚ್ಚು ಬಾರಿ ತಿದ್ದುಪಡಿಗಳನ್ನು ಒಳಗೊಂಡ ಸಂವಿಧಾನವಾಗಿದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಇಡೀ ಜಗತ್ತಿಗೆ ಮಾದರಿ ಅನಿಸಿದೆ. ಎಂತಹ ಸವಾಲುಗಳು ಬಂದರೂ ಅವುಗಳನ್ನು ಎದುರಿಸಿ ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯ ನೆಲೆಗಟ್ಟು ಭದ್ರವಾಗಿ ನಿಂತಿದೆ. ಇದಕ್ಕೆ ಸಂವಿಧಾನದ ಅಡಿಪಾಯ ಹಾಕಿದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ನಾವೆಲ್ಲರೂ ಚಿರ ಋಣಿಗಳಾಗಿರಬೇಕು ಎಂದು ಹೇಳಿದರು.

ಕೊಪ್ಪಳದ ತೊಗಲುಗೊಂಬೆಯಾಟ ಕಲಾವಿದೆ ಭೀಮವ್ವ ಶಿಳ್ಳೇಕ್ಯಾತರ 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾವನಾಗಿರುವುದು ಜಿಲ್ಲೆ ಹಾಗೂ ನಮ್ಮ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಸುಮಾರು 7 ದಶಕಗಳಿಗೂ ಅಧಿಕ ಕಾಲ ತೊಗಲುಗೊಂಬೆಯಾಟವನ್ನೇ ತನ್ನ ಬದುಕಿನ ಹಾದಿಯಾಗಿಸಿಕೊಂಡು, ನೆಲದ ಕಲೆಯನ್ನು ದೇಶ-ವಿದೇಶಗಳಲ್ಲಿ ಪರಿಚಯಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ರಾಜ್ಯ ಸರ್ಕಾರವು ಪದ್ಮಶ್ರೀ ಪ್ರಶಸ್ತಿಗಾಗಿ ಭೀಮವ್ವ ಶಿಳ್ಳೇಕ್ಯಾತರ ಅವರ ಹೆಸರನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಇದರ ಜೊತೆಗೆ ಮುನಿರಾಬಾದ್ ಐ.ಆರ್.ಬಿ ಕಮಾಂಡೆಂಟ್ ಬಿ.ಎಂ. ಪ್ರಸಾದ್ ಅವರಿಗೆ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ ಲಭಿಸಿದ್ದು, ಈ ಎರಡು ಸಾಧಕರಿಗೆ ಜಿಲ್ಲೆ ಮತ್ತು ಈ ನಾಡಿನ ಜನತೆಯ ಪರವಾಗಿ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ:

ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸಚಿವರು ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.ಆಕರ್ಷಕ ಪಥಸಂಚಲನ:

76ನೇ ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ಪೊಲೀಸ್ ಇಲಾಖೆ, ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕದಳ, ಭಾರತ ಸೇವಾದಳ, ಎನ್.ಸಿ.ಸಿ, ಭಾರತ್ ಸ್ಕೌಟ್ಸ್ ಆ್ಯಂಡ್‌ ಗೈಡ್ಸ್ ತಂಡಗಳು ಜಿಲ್ಲಾ ಕ್ರೀಡಾಂಗಣದಲ್ಲಿ ಆಕರ್ಷಕ ಪಥಸಂಚಲನ ನಡೆಸಿ, ಸಚಿವರಿಗೆ ಗೌರವ ವಂದನೆ ಸಲ್ಲಿಸಿದವು.ಸಾಂಸ್ಕೃತಿಕ ಕಾರ್ಯಕ್ರಮ, ಬಹುಮಾನ ವಿತರಣೆ:

ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಕೊಪ್ಪಳದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮತ್ತು ಜ್ಞಾನಬಂಧು ಪಿಯು ಕಾಲೇಜು ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡಿದರು. ಪಥಸಂಚಲನದಲ್ಲಿ ಭಾಗವಹಿಸಿದ ತಂಡಗಳಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.