ಸಾರಾಂಶ
ಶ್ರಾವಣದಲ್ಲಿ ಶ್ರವಣ ಕಾರ್ಯಕ್ರಮದಡಿ ಸಂಪ್ರದಾಯ ಹಾಡುಗಳ ಸ್ಪರ್ಧೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಭಾರತೀಯ ಸಂಪ್ರದಾಯವನ್ನು ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಶಂಕರ ತತ್ವ ಅಭಿಯಾನ ಭಕ್ತ ವೃಂದದ ಭಜನಾ ಸಂಚಾಲಕಿ ಕಮ್ಮರಡಿಯ ಮನೋನ್ಮಣಿ ಮೂರ್ತಿತಿಳಿಸಿದರು.
ಶನಿವಾರ ಅಗ್ರಹಾರದ ಉಮಾ ಮಹೇಶ್ವರ ಸಭಾ ಭವನದಲ್ಲಿ ತಾಲೂಕು ಕಸಾಪ ಮಹಿಳಾ ಘಟಕ ಹಾಗೂ ಕಣಿವೆ ನಾಗ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಶ್ರಾವಣದಲ್ಲಿ ಶ್ರವಣ ಕಾರ್ಯಕ್ರಮದಡಿ ಸಂಪ್ರದಾಯ ಹಾಡುಗಳ ಸ್ಪರ್ಧೆ- ಮರೆಯಾಗುತ್ತಿರುವ ಸಂಪ್ರದಾಯಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.ಸಂಪ್ರದಾಯ ಎನ್ನುವುದು ಮಹಿಳೆಯರಿಗೆ ಮಾತ್ರ ಸೀಮಿತವಲ್ಲ. ಪುರುಷರು ಸಹ ಸಂಪ್ರದಾಯ ಪಾಲಿಸಬೇಕು.ಊಟ ಮಾಡುವಾಗಲೂ ಕೆಲವು ಸಂಪ್ರದಾಯಗಳಿವೆ. ದೇವಸ್ಥಾನ, ಕಚೇರಿ, ಮದುವೆ ಮನೆಗಳಿಗೆ ಹೋಗುವಾಗ ಬೇರೆ, ಬೇರೆ ಉಡುಗೆ ತೊಡಿಗೆಗಳಿವೆ. ಮನೆಯ ಹಿರಿಯರು ಮೊದಲು ಸಂಪ್ರದಾಯ ಪಾಲಿಸಬೇಕು. ನಮಗೆ ವಿದೇಶಿ ಸಂಸ್ಕೃತಿ ಅಗತ್ಯವಿಲ್ಲ. ಭಾರತೀಯ ಸಂಸ್ಕೃತಿ ಅತಿ ಶ್ರೇಷ್ಠವಾದ ಸಂಸ್ಕೃತಿ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್ ಆಶಯ ಭಾಷಣ ಮಾಡಿ, ಸಂಪ್ರದಾಯದ ಉಡುಗೆ ತೊಡುಗೆ ಗಳು ಮಹಿಳೆಯರಿಗೆ ಭೂಷಣವಾಗಲಿದೆ. ಮಹಿಳೆಯರು ಸಂಪ್ರದಾಯದ ಹಾಡುಗಳ ಬಗ್ಗೆ ಹೆಚ್ಚು ಗಮನ ನೀಡಬೇಕಾಗಿದೆ. ಕಸಾಪ ದಿಂದ ಮುಂದಿನ ದಿನಗಳಲ್ಲಿ ಜಾನಪದ ಗುಂಪು ಸ್ಪರ್ಧೆ ಏರ್ಪಡಿಸುತ್ತೇವೆ. ಕಣಿವೆ ವಿನಯ ಅವರ ಮನೆಯಲ್ಲಿ ನವಂಬರ್‌ನಲ್ಲಿ ಕಸಾಪ ಹೋಬಳಿ ಸಮಾವೇಶ ನಡೆಸಲಿದ್ದೇವೆ ಎಂದರು.ಮುಖ್ಯ ಅತಿಥಿಯಾಗಿದ್ದ ಕಣಿವೆ ನಾಗಚಂದ್ರ ಪ್ರತಿಷ್ಠಾನದ ಅಧ್ಯಕ್ಷ ಕಣಿವೆ ವಿನಯ್ ಮಾತನಾಡಿ,ಇಂದು ಸಂಪ್ರದಾಯ ಗೀತೆ ಗಳ ದೊಡ್ಡ ಹಬ್ಬವಾಗಿದೆ. ವಿದೇಶಿಯರು ಸಹ ಭಾರತೀಯ ಮಹಿಳೆಯರ ಸಂಪ್ರದಾಯ ಉಡುಗೆ ತೊಡುಗೆಗಳನ್ನು ಇಷ್ಟ ಪಡುತ್ತಾರೆ. ನಾಗ ಚಂದ್ರ ಪ್ರತಿಷ್ಠಾನದ ಆಶ್ರಯದಲ್ಲಿ ನವಂಬರ್ ನಲ್ಲಿ ಕಸಾಪ ಹೋಬಳಿ ಸಮಾವೇಶ, ಮುಖ್ಯಮಂತ್ರಿ ಚಂದ್ರ ಅವರ ನಾಟಕ ಏರ್ಪಡಿಸಲಿದ್ದೇವೆ ಎಂದರು.
ಸಭೆ ಅಧ್ಯಕ್ಷತೆವಹಿಸಿದ್ದ ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ, ಅಳಿಯುತ್ತಿರುವ ಸಂಪ್ರದಾಯ ಉಳಿಸಲು ಕಸಾಪ ಮಹಿಳಾ ಘಟಕದಿಂದ ಸಂಪ್ರದಾಯ ಗೀತೆಗಳ ಸ್ಪರ್ಧೆ ಏರ್ಪಡಿಸುವ ಪ್ರಯತ್ನ ನಡೆಸಿದ್ದೇವೆ. 21 ತಂಡಗಳು ನೋಂದಣಿಯಾಗಿತ್ತು. ಮುಂದಿನ ದಿನಗಳಲ್ಲಿ ಸಂಪ್ರದಾಯದ ಬಗ್ಗೆ ಆಸಕ್ತ ಲೇಖಕರು ಪುಸ್ತಕ ಬರೆದರೆ ಮುಂದಿನ ಪೀಳಿಗೆಗೆ ಅದು ದಾಖಲಾಗುತ್ತದೆ. ಪ್ರತಿ ಮಹಿಳೆಯರಲ್ಲೂ ಸುಪ್ತವಾದ ಕಲೆ ಅಡಗಿರುತ್ತದೆ. ಇಂತಹ ವೇದಿಕೆ ಸಿಕ್ಕಿದರೆ ಕಲೆ ಅನಾವರಣಗೊಳ್ಳಲಿದೆ ಎಂದರು.ಸಂಪ್ರದಾಯ ಹಾಡುಗಳ ಸ್ಪರ್ಧೆಯಲ್ಲಿ ಬಿ.ಎಚ್.ಕೈಮರದ ಉಮಾ ನಾರಾಯಣ ಸ್ವಾಮಿ ಮತ್ತು ತಂಡ ಪ್ರಥಮ, ಬಿ.ಎಚ್. ಕೈಮರದ ಪ್ರಶೀಲ ಮತ್ತು ತಂಡದವರು ದ್ವಿತೀಯ ಹಾಗೂ ಶೆಟ್ಟಿಕೊಪ್ಪದ ಹೊನ್ನಮ್ಮ ಮತ್ತು ತಂಡದವರು ತೃತೀಯ ಬಹುಮಾನ ಪಡೆದರು.
ಮುಖ್ಯ ಅತಿಥಿಗಳಾಗಿ ಸಾಹಿತಿ ಜಯಮ್ಮ, ತಾ.ಕಸಾಪ ಪೂರ್ವಾಧ್ಯಕ್ಷ ಪಿ.ಕೆ.ಬಸವರಾಜ್, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷ ಶ್ಯಾಮಲ ಸತೀಶ್ , ನಂದಿನಿ ಆಲಂದೂರು, ಶಶಿಕಲಾ ಇದ್ದರು.