ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಜಗತ್ತಿನ ವಿವಿಧ ಭಾಷೆಗಳಲ್ಲಿ ನಡೆಯುವ ವೈಜ್ಞಾನಿಕ ಸಂಶೋಧನೆಗಳ ಸತ್ಯಾಂಶಗಳನ್ನು ಮಾತೃ ಭಾಷೆಗೆ ತರ್ಜುಮೆ ಮಾಡಿ, ಪಠ್ಯಪುಸ್ತಕಗಳಲ್ಲಿ ಅಳವಡಿಸಿ ಪ್ರತಿಯೊಬ್ಬ ಪ್ರಜೆಗೂ ತಲುಪಿಸುವ ಕೆಲಸವನ್ನು ಸರ್ಕಾರ ಮಾಡಿದಾಗ ಭಾರತೀಯರಲ್ಲೂ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಮೃದ್ಧವಾಗಿ ಬೆಳೆದು, ದೇಶ ಅಭಿವೃದ್ಧಿ ಪಥದತ್ತ ಮತ್ತಷ್ಟು ಮುನ್ನಡೆ ಸಾಧಿಸುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ ಕೆ.ಸದಾಶಿವ ಅಭಿಪ್ರಾಯಪಟ್ಟರು.ಜಿಲ್ಲಾ ಚರಿತ್ರಾ ಉಪನ್ಯಾಸಕರ ವೇದಿಕೆ ಹಾಗೂ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಮ್ಮಿಕೊಂಡಿದ್ದ ಇತಿಹಾಸ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಏಷ್ಯಾದಲ್ಲಿಯೇ ಉತ್ಕೃಷ್ಟ ಅಭಿವೃದ್ಧಿ ಹೊಂದಿರುವ ಜಪಾನ್ ದೇಶವು ಜಗತ್ತಿನ ಎಲ್ಲಾ ಭಾಷೆಯ ಸಂಶೋಧನಾತ್ಮಕ ಜ್ಞಾನವನ್ನು ಅಧ್ಯಯನ ಮಾಡಿ, ಅದನ್ನು ಜಪಾನ್ ಭಾಷೆಗೆ ಅನುವಾದಿಸಿ, ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಕಲಿಸುವ, ಜನಸಾಮಾನ್ಯರಿಗೆ ತಿಳಿಸುವ ಕೆಲಸವನ್ನು ಮಾಡುತ್ತದೆ. ಜಪಾನ್ನಲ್ಲಿ ಜಪಾನ್ ಭಾಷೆಯೇ ಸರ್ವಸ್ವ. ಅಲ್ಲಿ ಇಂಗ್ಲೀಷ್ ಗೆ ಆದ್ಯತೆಯಿಲ್ಲ. ತಮ್ಮದೇ ಭಾಷೆಯ ಶ್ರೇಷ್ಠತೆ, ಹಿರಿಮೆಯನ್ನು ಸಂರಕ್ಷಣೆ ಮಾಡಿಕೊಂಡಿದ್ದಾರೆ. ನಮ್ಮಲ್ಲಿ ಇಂಗ್ಲೀಷ್ ಗೆ ಆದ್ಯತೆ ನೀಡಿರುವುದು ಕೆಲವರಿಗಷ್ಟೇ ಉನ್ನತ ಜ್ಞಾನದೊರೆತು, ಕನ್ನಡ ಮಾಧ್ಯಮದ ಮಕ್ಕಳಿಗೆ ಸ್ಥಳೀಯ ಭಾಷೆಯಲ್ಲಿ ಜಾಗತಿಕ ಜ್ಞಾನದ ಕೊರತೆಯಿಂದಾಗಿ ಕೀಳರಿಮೆ, ನಿರುದ್ಯೋಗ, ಅಸಮಾನತೆ ಏರ್ಪಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.ಆಫ್ರಿಕಾದಲ್ಲಿ ಮಾನವನ ಉಗಮವಾಗಿದ್ದು, ಯೂರೋಪ್ ಖಂಡವನ್ನು ತಲುಪಲು ಎರಡೂವರೆ ಲಕ್ಷ ವರ್ಷಗಳನ್ನು ತೆಗೆದುಕೊಂಡರು. ಶಿಲಾಯುಗದ ಮಾನವರಲ್ಲಿ ಒಂಭತ್ತು ಪ್ರಭೇದಗಳಿದ್ದವು. ಈ 9 ಪ್ರಭೇದಗಳು ನಶಿಸಿ ಹೋಗಿವೆ. ಆದರೆ ಅವರ ವರ್ಣತಂತುಗಳು ಆಧುನಿಕ ಮಾನವರಲ್ಲಿ ಇಂದಿಗೂ ಇವೆ. ಭಾರತೀಯರ ತಾಯಿ ಒಬ್ಬಳೇ, ಒಂದೇ ರಕ್ತದ ಗುಣ ಎಂದು ತಳಿಶಾಸ್ತ್ರದ ಸಂಶೋಧನೆಗಳಿಂದ ದೃಢಪಟ್ಟಿದೆ. ಆದರೂ ಜಾತಿ, ಧರ್ಮ, ಕುಲ, ಗೋತ್ರದ ಹೆಸರಲ್ಲಿ ಸಂಘರ್ಷಗಳು ಏರ್ಪಟ್ಟಿರುವುದು ಶೋಚನೀಯ. ಮಾನವ ಸಹಜವಾಗಿ ಅಸಹನಶೀಲ. ಶಿಕ್ಷಣ ಮತ್ತು ಆತ್ಮಸಂಸ್ಕಾರದಿಂದ ಸಹನಶೀಲನನ್ನಾಗಿ ರೂಪಿಸುವುದೇ ನಮ್ಮ ಮುಂದಿರುವ ಸವಾಲು ಎಂದು ಪ್ರೊ ಕೆ.ಸದಾಶಿವ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಡಾ.ಎಂ.ಎಸ್.ಅನಿತಾ, ಇತಿಹಾಸವನ್ನು ಪಠ್ಯದ ಚೌಕಟ್ಟಿನಲ್ಲಿ ನಾಲ್ಕು ಗೋಡೆಗಳ ನಡುವೆ ವಿದ್ಯಾರ್ಥಿಗಳಿಗೆ ಬೋಧಿಸಿದರೆ ಬೇಸರ ತರಿಸುತ್ತದೆ. ಕೊಠಡಿಯಾಚೆಗೆ ಇತಿಹಾಸದ ಕುರುಹುಗಳಿರುವ, ಐತಿಹಾಸಿಕ, ಚಾರಿತ್ರಿಕ ಸ್ಥಳಗಳಿಗೆ ಕ್ಷೇತ್ರಾಧ್ಯಯನ, ವೀಕ್ಷಣೆ, ವಿವರಣೆ ಮತ್ತು ದಾಖಲೆಗಳ ಅಧ್ಯಯನ ಮಾಡಿಸಿದಾಗ ಇತಿಹಾಸದ ಕಡೆಗೆ ಆಕರ್ಷಿತರಾಗಿ ಆಳವಾದ ಅಧ್ಯಯನಕ್ಕೆ ಮುಂದಾಗುತ್ತಾರೆ. ಆಗ ಇತಿಹಾಸದ ರುಚಿ ಸಿಗುತ್ತದೆ ಎಂದರು.ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ರಾಮನಗರ ಜಿಲ್ಲೆಯ ಉಪ ನಿರ್ದೇಶಕಿ ಎಂ.ಪಿ.ನಾಗಮ್ಮ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳು ಹಿಂದೆ ಸರಿಯುತ್ತಿದ್ದಾರೆ. ಕಳೆದ ಎರಡು- ಮೂರು ವರ್ಷಗಳಿಂದ ಹೊಸದಾಗಿ ಪ್ರಾರಂಭವಾಗುತ್ತಿರುವ ಪದವಿ ಪೂರ್ವ ಕಾಲೇಜುಗಳಲ್ಲಿ ಕಲಾ ವಿಭಾಗದ ಸಂಯೊಜನೆಗಳೇ ಇಲ್ಲವಾಗಿವೆ. ವಿಜ್ಞಾನ ಮತ್ತು ವಾಣಿಜ್ಯ ಸಂಯೊಜನೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಏರುತ್ತದೆ. ಉದ್ಯೋಗಾವಕಾಶಗಳ ಲಭ್ಯತೆ ಶಿಕ್ಷಣದ ಆಧ್ಯತೆಯಾಗಿದೆ. ಆಸಕ್ತಿ ಗೌಣವಾಗುತ್ತಿದೆ. ಪೋಷಕರೂ ಮಕ್ಕಳ ಆಸಕ್ತಿಯನ್ನು ಪ್ರೋತ್ಸಾಹಿಸುತ್ತಿಲ್ಲ. ಹಣ ಮಾಡುವ ದುರಾಸೆಗೆ ಹೆಚ್ಚಿನ ಅವಕಾಶ ನೀಡುತ್ತಿದ್ದಾರೆ ಎಂದು ಹೇಳಿದರು.
ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ.ಶಿವಣ್ಣ ಮಾತನಾಡಿ, ಗತಿಸಿದ ಘಟನೆಗಳ ಅಧ್ಯಯನದಿಂದ ಮಾನವನ ಉಗಮದ ಮೂಲ, ಚಲನೆ, ಚಿಂತನೆ, ಅವನ ಬದುಕಿನ ಸ್ಥಿತ್ಯಂತರಗಳನ್ನು ಹಾಗೂ ಸಾಮ್ರಾಜ್ಯಗಳ ಬೆಳವಣಿಗೆ, ವಿಸ್ತರಣೆ, ಪತನದ ಕಥಾನಕಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ಸ್ವಾತಂತ್ಯ ಬಂದಮೇಲೆ ರಾಜಪ್ರಭುತ್ವ ನೇಪಥ್ಯಕ್ಕೆ ಸರಿದು, ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿದೆ. ಇಂದು ಯಾವ ರಾಜ ಮಹಾರಾಜರುಗಳಿಲ್ಲ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಶತಮಾನಗಳ ಶೋಷಣೆಯ ವಿರುದ್ಧ ಸಂವಿಧಾನಾತ್ಮಕ ಸಮಾನತೆಯನ್ನು ತಂದುಕೊಟ್ಟರು. ಇಂದಿಗೂ ಶೋಷಣೆ ರೂಪಾಂತರಗೊಂಡು ಉಳಿದಿದೆ. ಲಿಂಗ ಅಸಮಾನತೆ, ಭೂ ಉಷ್ಣಾಂಶದಲ್ಲಿ ಏರಿಕೆ, ಹವಾಮಾನ ವೈಪರಿತ್ಯ, ಬಡತನ ಇತ್ಯಾದಿ ಸಮಕಾಲೀನ ಸಮಸ್ಯೆಗಳು, ಭವಿಷ್ಯದ ದುರಂತಗಳನ್ನು ಅಂದಾಜಿಸಿ ಇತಿಹಾಸವನ್ನು ಕೇವಲ ಗತಕ್ಕೆ ಸಿಮಿತಗೊಳಿಸದೇ ವರ್ತಮಾನ ಮತ್ತು ಭವಿಷ್ಯತ್ತಿಗೂ ಪೂರಕ ಜ್ಞಾನವಾಗಿ ಪರಿವರ್ತಿಸಿ ಪುನರ್ರಚಿಸುವ ಕೆಲಸವಾಗಬೇಕಾಗಿದೆ. ಆಗ ಮಾತ್ರ ಕಲಾವಿಭಾಗ ಜೀವಕಳೆ ಪಡೆಯುತ್ತದೆ ಎಂದು ತಿಳಿಸಿದರು.ಚರಿತ್ರಾ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಡಾ. ಪಿ.ಕನ್ಯಾಕುಮಾರ್, ಕೋಶಾಧ್ಯಕ್ಷ ರಾಮಣ್ಣ, ಕಾರ್ಯದರ್ಶಿ ಎಚ್.ಎಸ್.ನಾಗೇಶ್, ಸಂಪನ್ಮೂಲ ವ್ಯಕ್ತಿ ಡಾ.ಜಿ.ವಿ.ಗೋಪಾಲ್, ಉಪನ್ಯಾಸಕರ ಸಂಘದ ಅಧ್ಯಕ್ಷ ಎನ್.ವೇಣುಗೋಪಾಲ್, ಪ್ರಾಂಶುಪಾಲರಾದ ನೀಲಿಸತ್ಯನಾರಾಯಣ, ಕೂಟಗಲ್ ಮೋಹನ್, ಇತಿಹಾಸ ಉಪನ್ಯಾಸಕರಾದ ಸುನಿಲ್ ಕುಮಾರ್, ಜಿ.ಕೆ.ಸತ್ಯನಾರಾಯಣ, ಕಿರಣ್ ಕುಮಾರ್, ಕೆ.ನಾಗೇಶ್, ಟಿ.ಬಿ.ವಸಂತ ಕುಮಾರಿ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
2024ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಇತಿಹಾಸ ವಿಷಯದಲ್ಲಿ ನೂರಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಶೇ 100ಕ್ಕೆ ನೂರು ಫಲಿತಾಂಶ ಕೊಟ್ಟ ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.