ಆಯುರ್ವೇದವು ಜಗತ್ತಿಗೆ ಭಾರತ ನೀಡಿದ ಅತ್ಯಂತ ಮಹತ್ವದ ಕೊಡುಗೆಯಾಗಿದೆ. ಆಯುರ್ವೇದ ಹಾಗೂ ಯೋಗವು ಪುರಾತನ ಕಾಲದಿಂದಲೂ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
ಧಾರವಾಡ:
ಒತ್ತಡದ ಜೀವನಶೈಲಿಯಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಉತ್ತಮ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಹಾಗೂ ಯೋಗಾಭ್ಯಾಸವನ್ನು ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಹೇಳಿದರು.ಬುಧವಾರ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾ ಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಆಯುಷ್ ಅಭಿಯಾನದಡಿ ೧೧ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಆಯುರ್ವೇದವು ಜಗತ್ತಿಗೆ ಭಾರತ ನೀಡಿದ ಅತ್ಯಂತ ಮಹತ್ವದ ಕೊಡುಗೆಯಾಗಿದೆ. ಆಯುರ್ವೇದ ಹಾಗೂ ಯೋಗವು ಪುರಾತನ ಕಾಲದಿಂದಲೂ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಆದರೆ, ಒಂದು ಹಂತದಲ್ಲಿ ಭಾರತದಲ್ಲಿಯೇ ಆಯುರ್ವೇದ ಪದ್ಧತಿಗೆ ಸೂಕ್ತವಾದ ಪ್ರಾಮುಖ್ಯತೆ ದೊರೆಯದೆ ಹಿಂದುಳಿಯುವಂತಾಗಿತ್ತು. ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಹಾಗೂ ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿದೆ ಎಂದರು.
ಆಯುರ್ವೇದ ಮತ್ತು ಆಯುಷ್ ಚಿಕಿತ್ಸಾ ಪದ್ಧತಿಗಳು ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇವುಗಳ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದ ಅವರು, ನೌಕರರು ವಿವಿಧ ರೀತಿಯ ಕೆಲಸದ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಕರ್ತವ್ಯದಷ್ಟೇ ತಮ್ಮ ಆರೋಗ್ಯಕ್ಕೂ ನೌಕರರು ಆದ್ಯತೆ ನೀಡಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಆಯುಷ್ ಹಿರಿಯ ವೈದ್ಯಾಧಿಕಾರಿ ಡಾ. ಸಂತೋಷ ತಾಡಪತ್ರಿ, ಡಾ. ಎಸ್.ಪಿ. ಕೊಟ್ಟೂರ, ಸಹಾಯಕ ಪ್ರಾಧ್ಯಾಪಕಿ ರಚನಾ ಯಾದವರಾವ್ ಅವರು ಅಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಆಯುರ್ವೇದ ಸಿದ್ಧಾಂತದ ಮಹತ್ವದ ಬಗ್ಗೆ ಉಪನ್ಯಾಸ ಮತ್ತು ಪ್ರದರ್ಶನ ಕಾರ್ಯಕ್ರಮ ನೀಡಿದರು.
ಆಯುಷ್ ವೈದ್ಯಾಧಿಕಾರಿ ಡಾ. ಆಶಾ ಎನ್. ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಆಯುಷ್ ವೈದ್ಯಾಧಿಕಾರಿ ಡಾ. ಅಮೃತ ಪಾಸ್ತೆ ನಿರೂಪಿಸಿದರು. ವೈದ್ಯಾಧಿಕಾರಿ ಡಾ. ಇಸ್ಮಾಯಿಲ್ ಸಂಕದಾಳ ಅವರು ವಂದಿಸಿದರು.ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಗಣೇಶ ಎಸ್. ಕಬಾಡೆ, ಪ್ರಾಂಶುಪಾಲ ಸುಹನ್ ಮುನಗತ್ತಿ, ಡಾ. ಬಿ.ಪಿ. ಪೂಜಾರಿ, ಡಾ. ಸವಿತಾ ಹುಣಸಿಮರದ, ಜಿಲ್ಲಾ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ ಹಳೇಪೇಟ್ ಉಪಸ್ಥಿತರಿದ್ದರು.