ಗದಗ: ಕಳೆದ 12 ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತದ ಭದ್ರತೆ, ಅಖಂಡತೆ ಮತ್ತು ಆರ್ಥಿಕತೆ ಅತ್ಯಂತ ಬಲಗೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಶನಿವಾರ ಗದಗದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಭಯೋತ್ಪಾದನೆ ನಿಯಂತ್ರಣ ಹಾಗೂ ಗಡಿ ಭದ್ರತೆಯಲ್ಲಿ ಭಾರತ ದಿಟ್ಟ ನಿಲುವು ತಳೆದಿದೆ ಎಂದರು. ಕೇಂದ್ರ ಸರ್ಕಾರದ ಆರ್ಥಿಕ ಕ್ರಮಗಳಿಂದ 25 ಕೋಟಿ ಜನರು ಬಡತನದಿಂದ ಮುಕ್ತರಾಗಿದ್ದು, ಮುದ್ರಾ, ಕಿಸಾನ್ ಸಮ್ಮಾನ್ ಮತ್ತು ಜಲ ಜೀವನ್ ಮಿಷನ್ ಯೋಜನೆಗಳು ಜನಸಾಮಾನ್ಯರಿಗೆ ನೆರವಾಗಿವೆ. ಭಾರತವು ಶೀಘ್ರದಲ್ಲೇ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದ್ದು, 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಹೋರಾಟದ ಸತ್ಯಾಗ್ರಹಗಳು ಹಾಗೂ ವಿಭಜನೆಯ ನೋವನ್ನು ಸ್ಮರಿಸಿದ ಅವರು, ದೇಶವೀಗ ಹಸಿವು ಮುಕ್ತ ಭಾರತವಾಗಿ ಹೊರಹೊಮ್ಮಿದೆ ಎಂದರು. ಇಂದಿನ ಯುವಜನತೆ (ಜೆನ್ ಝಿ) ಪ್ರಧಾನಿ ಮೋದಿಯವರ ಮೇಲೆ ಅಪಾರ ನಂಬಿಕೆ ಇಟ್ಟಿದ್ದು, ಮೋದಿ ಕೂಡ ಯುವಶಕ್ತಿಯ ಬಗ್ಗೆ ಸಕಾರಾತ್ಮಕ ನಿಲುವು ಹೊಂದಿದ್ದಾರೆ. ರಾಷ್ಟ್ರವೇ ಮೊದಲು ಎಂಬ ತತ್ವದಡಿ ಪ್ರತಿಯೊಬ್ಬರೂ ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಿಪ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಗದಗ ಉತ್ಸವಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಭೇಟಿ:

ಗದಗ ನಗರದ ಎಪಿಎಂಸಿ ಯಾರ್ಡ್‌ ಸ್ವಾಮಿ ವಿವೇಕಾನಂದ ಸಭಾಭವನ ಹಾಗೂ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ ಹಾಗೂ ಜಿಪಂ ಆಶ್ರಯದಲ್ಲಿ ನಡೆಯುತ್ತಿರುವ ಗದಗ ಉತ್ಸವ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶನಿವಾರ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು. ಈ ವೇಳೆ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಗುಡಿಮನಿ, ಚನ್ನವೀರಪ್ಪ ಹುಣಶಿಕಟ್ಟಿ, ಮಧುಸೂದನ ಪುಣೇಕರ, ಜಯದೇವ ಮೆಣಸಗಿ, ಪ್ರಕಾಶ ಉಗಲಾಟ, ಸಿದ್ರಾಮಪ್ಪ ಉಮಚಗಿ, ಚನ್ನವೀರಪ್ಪ ಹುಣಶೀಕಟ್ಟಿ, ರಾಘವೇಂದ್ರ ಕಾಲವಾಡ, ಅಶೋಕ ಸಂಕಣ್ಣವರ, ಅರವಿಂದ ಕಾಮತ, ಮದುಸೂಧನ ಪುಣೇಕರ, ಮಂಜುನಾಥ ವೀರಲಿಂಗಯ್ಯನಮಠ, ದಾನಯ್ಯ ಗಣಾಚಾರಿ, ವೀರಭದ್ರಯ್ಯ ಧನ್ನೂರಹಿರೇಮಠ, ಕಿರಣ ಭೂಮಾ, ಚಂದ್ರು ಬಾಳಿಹಳ್ಳಿಮಠ, ಬಸವರಾಜ ಅಂಗಡಿ, ಸೋಮನಾಥ ಜಾಲಿ, ದಾನಪ್ಪಗೌಡ್ರ, ರಾಜು ಕುರಡಗಿ ಇದ್ದರು.