ಭಾರತದ ಮೂಲ ಶಕ್ತಿ ಸಂಸ್ಕೃತದಲ್ಲಿದೆ: ಸ್ವರ್ಣವಲ್ಲೀ ಶ್ರೀ

| Published : Jul 06 2025, 01:48 AM IST

ಸಾರಾಂಶ

ಶಿರಸಿ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಪೂರ್ಣಾಂಕ ಪಡೆದ ಸಂಸ್ಕೃತ ವಿದ್ಯಾರ್ಥಿಗಳಿಗೆ ಸೋಂದಾ ಸ್ವರ್ಣವಲ್ಲೀಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರು ಪ್ರತಿಭಾ ಪುರಸ್ಕಾರ ನೀಡಿದರು.

ಶಿರಸಿ: ಭಾರತದ ಮೂಲಶಕ್ತಿ ಸಂಸ್ಕೃತದಲ್ಲಿದೆ. ಸಂಸ್ಕೃತ ಅರಿತರೆ ಮಾತ್ರ ಭಾರತ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಸೋಂದಾ ಸ್ವರ್ಣವಲ್ಲೀಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಅವರು ಶನಿವಾರ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸಂಸ್ಕೃತ ಅಧ್ಯಾಪಕರ ಸಂಘ ಹಮ್ಮಿಕೊಂಡ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಪೂರ್ಣಾಂಕ ಪಡೆದ ಸಂಸ್ಕೃತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ಸಂಸ್ಕೃತ ಭಾಷೆ ಎಂದರೆ ನೆನಪಾಗುವುದು ಸುಂದರ ಶುಭಾಷಿತಗಳು. ಶುಭಾಷಿತಗಳು ಬದುಕಿನ ಪರಿಪಾಠ ತಿಳಿಸುತ್ತವೆ. ನಮ್ಮನ್ನು ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಸಜ್ಜನರು ಒಪ್ಪುವ ಮಾತನ್ನಾಡಬೇಕು. ವಿಮರ್ಶೆ ಮಾಡಿಕೊಳ್ಳುವ ಮನುಷ್ಯ ಶೀಘ್ರವಾಗಿ ಬೆಳೆಯುತ್ತಾನೆ. ಆತ್ಮವಿಮರ್ಶೆ ಇಲ್ಲದ ವ್ಯಕ್ತಿ ಬೆಳೆಯಲು ಸಾಧ್ಯವಾಗುವುದಿಲ್ಲ. ಸಂಸ್ಕೃತ ಮಹಾ ವೃಕ್ಷಕ್ಕೆ ಇಂಗ್ಲಿಷ್ ಎಂಬ ಬಂದಳಿಕೆ ಬೆಳೆಯುತ್ತಿದೆ. ಸಂಸ್ಕೃತಕ್ಕೆ ಬೆಂಬಲಿಸಿದರೆ ಆಂಗ್ಲ ಭಾಷೆ ಬೆಳೆಸಿದಂತೆ ಎಂದ ಶ್ರೀಗಳು, ಭಾರತ ದೇಶ ಅರ್ಥ ಮಾಡಿಕೊಳ್ಳಲು ಸಂಸ್ಕೃತ ಭಾಷೆ ಓದಬೇಕು. ಭಾರತದ ಎಲ್ಲ ಭಾಷೆಗಳ ಮೂಲ ಸಂಸ್ಕೃತ. ಕೇರಳದಿಂದ ಹಿಡಿದು ಕಾಶ್ಮೀರದ ವರೆಗಿನ ಭಾಷೆಗಳಲ್ಲಿ ಸಂಸ್ಕೃತ ಪದಗಳು ಹೇರಳವಾಗಿವೆ ಎಂದರು.

ಸಂಸ್ಕೃತ ಬೆಂಬಲಿಸಿದರೆ ಉಳಿದ ಭಾಷೆಗಳೂ ಬೆಳೆಯುತ್ತದೆ. ಸಂಸ್ಕೃತದ ಶ್ಲೋಕದಲ್ಲಿ ಆನಂದದ ಜತೆಗೆ ಬದುಕಿಗೆ ಪ್ರೇರಕ, ಮಾರ್ಗದರ್ಶಕವಾಗಿರುತ್ತವೆ. ಸಂಸ್ಕೃತ ವೈಜ್ಞಾನಿಕ ಭಾಷೆ ಎಂದು ಇಂಗ್ಲಿಷ್ ಪಂಡಿತರು ಹೇಳುತ್ತಾರೆ. ಸಂಸ್ಕೃತವನ್ನು ಪೋಷಿಸಿದರೆ ಭಾರತ ಇನ್ನೂ ಗಟ್ಟಿಯಾಗುತ್ತದೆ. ಇದು ಪ್ರತಿಭಾ ಪುರಸ್ಕಾರವಲ್ಲ, ನಿರಂತರ ಸಾಧನೆ ಮಾಡಿ ಪಡೆದ ಫಲಿತಾಂಶಕ್ಕೆ ನೀಡುವ ಅಭಿನಂದನೆ. ಹಾಗಾಗಿ ಇದು ಸಾಧನಾ ಪುರಸ್ಕಾರ ಎಂದು ಶ್ರೀಗಳು ಹೇಳಿದರು.

ರಾಜ್ಯ ಸಂಘದ ನಾರಾಯಣ ಭಟ್ಟ ಪ್ರಾಸ್ತಾವಿಕ ಮಾತನಾಡಿ, ಸಂಸ್ಕೃತದಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯದ ಇಪ್ಪತ್ತಕ್ಕೂ ಅಧಿಕ ಕಡೆ ಸಂಸ್ಕೃತ ಅಧ್ಯಾಪಕರ ಸಂಘದಿಂದ ಪ್ರತಿಭಾ ಪುರಸ್ಕಾರ ಮಾಡಲಾಗುತ್ತಿದೆ ಎಂದರು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತಾಧ್ಯಾಪಕರ ಸಂಘದ ಶಿರಸಿ ಘಟಕದ ಅಧ್ಯಕ್ಷ ಗಿರೀಶ ಹೆಗಡೆ, ಉಪಾಧ್ಯಕ್ಷ ರಾಜಾರಾಮ ದೀಕ್ಷಿತ, ಕಾರ್ಯದರ್ಶಿ ಕೆ.ಎಸ್. ವಿಘ್ನೇಶ್ವರ, ಕೋಶಾಧ್ಯಕ್ಷ ಗಣಪತಿ ಜೋಶಿ, ನಿವೃತ್ತ ಮುಖ್ಯೋಧ್ಯಾಪಕ ಪ್ರಭಾಕರ ಭಟ್ಟ, ಪ್ರಮುಖರಾದ ರಮಾಕಾಂತ ಭಟ್ಟ, ರಾಘವೇಂದ್ರ ಮಠದ ಗಣಪತಿ ಜೋಶಿ ಮತ್ತಿತರರು ಉಪಸ್ಥಿತರಿದ್ದರು.