ಮತದಾನದಲ್ಲಿ ಉದಾಸೀನ ತೋರಿದರೆ ಭವಿಷ್ಯ ಹಾಳು: ಡಾ. ಎಸ್.ಪಿ. ಗೌಡರ

| Published : Feb 01 2024, 02:04 AM IST

ಮತದಾನದಲ್ಲಿ ಉದಾಸೀನ ತೋರಿದರೆ ಭವಿಷ್ಯ ಹಾಳು: ಡಾ. ಎಸ್.ಪಿ. ಗೌಡರ
Share this Article
  • FB
  • TW
  • Linkdin
  • Email

ಸಾರಾಂಶ

ಮತದಾನ ಎನ್ನುವುದು ನಮ್ಮ ಮೂಲಭೂತ ಹಕ್ಕು ಮತ್ತು ಕರ್ತವ್ಯ ಆಗಿದ್ದು, ಇದರಲ್ಲಿ ನಾವು ಉದಾಸೀನ ತೋರಿದರೆ ನಮ್ಮ ಭವಿಷ್ಯವನ್ನು ನಾವೇ ಹಾಳು ಮಾಡಿಕೊಂಡಂತೆ.

ರಾಷ್ಟ್ರೀಯ ಮತದಾನ ದಿನಾಚರಣೆಯ ಕಾರ್ಯಕ್ರಮ ಉದ್ಘಾಟನೆ ಮಾಡಿದ ಪ್ರಾಚಾರ್ಯ

ಕನ್ನಡಪ್ರಭ ವಾರ್ತೆ ಹಿರೇಕೆರೂರು

ಮತದಾನ ಎನ್ನುವುದು ನಮ್ಮ ಮೂಲಭೂತ ಹಕ್ಕು ಮತ್ತು ಕರ್ತವ್ಯ ಆಗಿದ್ದು, ಇದರಲ್ಲಿ ನಾವು ಉದಾಸೀನ ತೋರಿದರೆ ನಮ್ಮ ಭವಿಷ್ಯವನ್ನು ನಾವೇ ಹಾಳು ಮಾಡಿಕೊಂಡಂತೆ ಎಂದು ಪ್ರಾಚಾರ್ಯ ಡಾ. ಎಸ್.ಪಿ. ಗೌಡರ ಹೇಳಿದರು.

ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ ಹಾಗೂ ಕಾಲೇಜಿನ ಚುನಾವಣಾ ಸಾಕ್ಷರತಾ ಕ್ಲಬ್ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಮತದಾನ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಕ್ರಿಯವಾಗಿ ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ಸುಭದ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮತದಾನ ಮತ್ತು ಕನ್ಯಾದಾನ ಬದುಕಿನ ಮಹತ್ವದ ಕಾರ್ಯಗಳು. ಒಂದು ಕುಟುಂಬದ ನೆಲೆಯಾದರೆ ಮತ್ತೊಂದು ರಾಜ್ಯ ಅಥವಾ ರಾಷ್ಟ್ರದ ನೆಲೆಯಾಗಿದೆ. ಯಾವುದೇ ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡಿದರೆ, ಜನಪ್ರತಿನಿಧಿಗಳನ್ನು ಕೈಹಿಡಿದು ಕೇಳುವ ನೈತಿಕತೆ ನಿಮ್ಮಲ್ಲಿ ಉಳಿಯುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಕುರಿತು ಚುನಾವಣಾ ಸಾಕ್ಷರತಾ ಕ್ಲಬ್ಬಿನ ಸಂಚಾಲಕಿ ಪ್ರೊ. ಮೀನಾಕ್ಷಿ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ, ವಿಭಿನ್ನ ಕಾರ್ಯಕ್ರಮಗಳನ್ನು ಮಾಡುತ್ತಾ ಪ್ರತಿ ವರ್ಷ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸುವಂತಹ ಕಾರ್ಯ ಮಾಡಲಾಗುತ್ತಿದೆ ಎಂದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಪರಶುರಾಮ ಕೊರವರ, ದೈಹಿಕ ಶಿಕ್ಷಣ ಅಧ್ಯಾಪಕ ಬಸವರಾಜ ಮಾಗಳದ ಉಪಸ್ಥಿತರಿದ್ದರು. ಮತದಾನದ ಮಹತ್ವ ಕುರಿತು ವಿದ್ಯಾರ್ಥಿಗಳಾದ ಸಂಗೀತ ಪಿ., ಶಾಂತಪ್ಪ, ಲಕ್ಷ್ಮಿ ಕೆ.,ಶಾರುಖ್ ಖಾನ ಕೆ. ಮೊದಲಾದವರು ಮಾತನಾಡಿದರು. ಮೇಘ ಎಚ್.ಎಚ್. ಪ್ರಾರ್ಥಿಸಿ, ಭಾಗ್ಯ ನಿರೂಪಿಸಿ, ಶಾರುಖ್ ಖಾನ್ ಸ್ವಾಗತಿಸಿ, ಲಿಂಗರಾಜ ಎಚ್.ಜಿ. ವಂದಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.