ಬಂಗಾರಪೇಟೆ: ಒಂದು ತಿಂಗಳೊಳಗೆ ಕಟ್ಟಡ ಕಾಮಗಾರಿ ಪೂರ್ಣಗೊಂಡರೆ ಕಾಲೇಜಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗುವುದು ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಭರವಸೆ ನೀಡಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶೇಷ ಅಭಿವೃದ್ಧಿ ಯೋಜನೆಯಡಿ ನಿರ್ಮಾಣಗೊಂಡಿರುವ ನೂತನ ಕಟ್ಟಡ ಹಾಗೂ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಟ್ಟಡ ಕಾಮಗಾರಿ ವಿಳಂಬದಿಂದ ಕ್ಯಾಂಟೀನ್ ಆರಂಭವಾಗಿಲ್ಲ. ಒಂದು ತಿಂಗಳಲ್ಲಿ ಕಾಮಗಾರಿ ಮುಗಿಯಲಿದ್ದು, ಬಳಿಕ ರಿಯಾಯಿತಿ ದರದಲ್ಲಿ ವಿದ್ಯಾರ್ಥಿಗಳಿಗೆ ತಿಂಡಿ, ಊಟ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.ಯಾವುದೇ ಸೌಲಭ್ಯಗಳಿಲ್ಲದೆ ಹಿಂದುಳಿದಿದ್ದ ಈ ಕಾಲೇಜು ಇಂದು ಜಿಲ್ಲೆಯಲ್ಲೆ ಮಾದರಿ ಕಾಲೇಜಾಗಿ ರೂಪುಗೊಂಡಿದೆ. 6.75 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಭಾಂಗಣವನ್ನು ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೂ 3 ಕೋಟಿ ಮಂಜೂರು ಮಾಡಲಾಗಿದೆ ಎಂದರು.

ಈ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಕುಂತಲ, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್.ಎ.ಪಾರ್ಥಸಾರಥಿ, ಪುರಸಭೆ ಮಾಜಿ ಅಧ್ಯಕ್ಷರಾದ ಗೋವಿಂದ, ಸುಹೇಲ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಮುನಿರಾಜು, ಉದ್ಯಮಿಗಳಾದ ಅನಿಲ್ ಸೇಗು, ಹಿದ್ದು, ವೈ.ವಿ.ರಮೇಶ್, ಪಿಐ ರವಿಕುಮಾರ್, ಉದಯೋಗ ವಿನಿಮಯ ಅಧಿಕಾರಿ ಶ್ರೀನಿವಾಸ್, ರಾಜನ್, ವೆಂಕಟರಾಮಣ್ಣ, ಭಾಗ್ಯಮ್ಮ ಇತರರು ಇದ್ದರು.