ಚುನಾವಣೆ ಪ್ರಚಾರಕ್ಕೆ ಬಂದಿದ್ದ ಇಂದಿರಾಗಾಂಧಿ!

| Published : Apr 04 2024, 01:06 AM IST

ಚುನಾವಣೆ ಪ್ರಚಾರಕ್ಕೆ ಬಂದಿದ್ದ ಇಂದಿರಾಗಾಂಧಿ!
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿರಾಗಾಂಧಿಯವರ ಜೊತೆ ಗುರುತಿಸಿಕೊಂಡು ಅವರ ಪಕ್ಷದಿಂದ ಸ್ಪರ್ಧೆಮಾಡಿ ಸತತ 3ನೇ ಗೆಲವು ಪಡೆದ ಸಂಗನಗೌಡರ ಪಕ್ಷನಿಷ್ಠೆ ಪ್ರಶ್ನಾತೀತವಾಗಿತ್ತು.

ಈಶ್ವರ ಶೆಟ್ಟರ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

1971ನೇ ಇಸವಿ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಎರಡು ದಶಕಗಳು ಗತಿಸಿದ್ದವು. ಜೊತೆಗೆ ದೇಶವು ನಾಲ್ಕು ಸಾರ್ವತ್ರಿಕ ಲೋಕಸಭೆ ಚುನಾವಣೆಯನ್ನು ಎದುರಿಸಿತ್ತು. ಈಗ ಐದನೇ ಚುನಾವಣೆ ಎದುರಿಸಲು ಸಿದ್ಧವಾಗಿತ್ತು. ಹಿಂದಿನ ಎಲ್ಲ ಚುನಾವಣೆಯಲ್ಲೂ ಕಾಂಗ್ರೆಸ್‌ ಒಗ್ಗಟ್ಟಿನಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿತ್ತು. ಆದರೆ, 1971ರಲ್ಲಿ ಕಾಂಗ್ರೆಸ್‌ ಇಬ್ಭಾಗವಾಯಿತು. ಈ ವಿಭಜನೆ ಕಾಂಗ್ರೆಸ್‌ನ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಚುನಾವಣಾ ಪ್ರಚಾರಕ್ಕೆ ಬಾಗಲಕೋಟೆಗೂ ಬರುವಂತೆ ಮಾಡಿತ್ತು.

ಹೌದು, ಅಂದು ಕಾಂಗ್ರೆಸ್ ಪಕ್ಷದ ಗೆಲುವಿಗೆ ತಡೆ ಒಡ್ಡುವವರು ಯಾರೂ ಇರಲಿಲ್ಲ. ಈಗಿನ ಬಾಗಲಕೋಟೆ ಹಾಗೂ ಅಂದಿನ ವಿಜಯಪುರ ದಕ್ಷಿಣ ಲೋಕಸಭಾ (ಸದ್ಯ ಬಾಗಲಕೋಟೆ) ಕ್ಷೇತ್ರದಿಂದ ಸತತ 3ನೇ ಬಾರಿ ಗೆಲುವು ಪಡೆಯಲು ಕಾಂಗ್ರೆಸ್ ಪಕ್ಷದಿಂದ ಬೀಳಗಿ ತಾಲೂಕಿನ ಸುನಗ ಗ್ರಾಮದ ಎಸ್.ಬಿ.ಪಾಟೀಲ ಅವರು ಕಣಕ್ಕಿಳಿದಿದ್ದರು.

ಸರಳ, ಸಜ್ಜನಿಕೆಯ ರಾಜಕಾರಣಕ್ಕೆ ಮತ್ತೊಂದು ಹೆಸರೆ ಸುನಗದ ಎಸ್.ಬಿ.ಪಾಟೀಲರದ್ದು. ಪ್ರಾಮಾಣಿಕ ರಾಜಕಾರಣಿಯಾಗಿದ್ದ ಎಸ್.ಬಿ.ಪಾಟೀಲರನ್ನು ಜನತೆ ಲೋಕಸಭಾ ಸದಸ್ಯ ಬದಲಾಗಿ ಸಾಮಾನ್ಯ ವ್ಯಕ್ತಿಯಂತೆ ಗುರುತಿಸಿ ಮಾತನಾಡುವಷ್ಟರ ಮಟ್ಟಿಗೆ ಸರಳತೆಯನ್ನು ಅವರು ಮೈಗೂಡಿಸಿಕೊಂಡಿದ್ದರು. ಹೀಗಾಗಿ ಜನಸಾಮಾನ್ಯರ ಸಂಸದರಂತೆ ಎಸ್.ಬಿ.ಪಾಟೀಲರು ಬಿಂಬಿತರಾಗಿದ್ದರು. ಅವರು ಕೆಲವು ನಿಶ್ಚಿತವಾಗಿದ್ದರೂ, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ವಿಭಜನೆ ಇವರ ಗೆಲುವಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇತ್ತು.

1967ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲವು ಕಂಡಿದ್ದ ಸುನಗದ ಸಂಗನಗೌಡರು 1971ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಜಗಜೀವನರಾಮ್ ಗ್ರೂಪ್ (ಕಾಂಗ್ರೆಸ್ ಇಂಡಿಕೇಟ್)ನಿಂದ ಸ್ಪರ್ಧಿಸಿದ್ದರು. ಇಂದಿರಾಗಾಂಧಿ ಹಾಗೂ ನಿಜಲಿಂಗಪ್ಪನವರ ನಡುವೆ ಭಿನ್ನಾಬಿಪ್ರಾಯ ಬಂದು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಇಂಡಿಕೇಟ್, ಸಿಂಡಿಕೇಟ್ ಎಂದು ಇಬ್ಭಾಗವಾದಾಗ ಇಂದಿರಾಗಾಂಧಿಯವರ ಜೊತೆ ಗುರುತಿಸಿಕೊಂಡು ಅವರ ಪಕ್ಷದಿಂದ ಸ್ಪರ್ಧೆಮಾಡಿ ಸತತ 3ನೇ ಗೆಲವು ಪಡೆದ ಸಂಗನಗೌಡರ ಪಕ್ಷ ನಿಷ್ಠೆ ಪ್ರಶ್ನಾತೀತವಾಗಿತ್ತು. ರಾಷ್ಟ್ರ ಮಟ್ಟದಲ್ಲಿ ಬಹುದೊಡ್ಡ ಹೆಸರು ಅವರದಾಗಿತ್ತು.

1971ರ ಚುನಾವಣೆಗೆ ಇವರ ಪ್ರತಿ ಸ್ಪರ್ಧೆಯಾಗಿ ಕಣದಲ್ಲಿದ್ದ ಮತ್ತೊಬ್ಬ ಪ್ರಭಾವಿ ನಾಯಕ ಬಾಗಲಕೋಟೆಯ ಎಸ್.ಎಸ್. ಮೆಳ್ಳಿಗೇರಿಯವರು. ನಿಜಲಿಂಗಪ್ಪ ಅವರ ಜೊತೆ ಗುರುತಿಸಿಕೊಂಡಿದ್ದ ಮೆಳ್ಳಿಗೇರಿಯವರು (ಕಾಂಗ್ರೆಸ್ ಸಿಂಡಿಕೇಟ್)ನಿಂದ ಸ್ಪರ್ಧಿಸಿದ್ದರು.

ಮೇಲ್ನೋಟಕ್ಕೆ ಚುನಾವಣೆ ಇಬ್ಬರ ನಡುವೆ ತುರುಸಿನಿಂದ ಕಂಡಿದ್ದರು, ಅಂತಿಮವಾಗಿ ಎಸ್.ಬಿ.ಪಾಟೀಲರೆ ಗೆಲವಿನ ನಗೆ ಬೀರಿದ್ದರು. ಅಂದು ಸುನಗದ ಪ್ರಚಾರ ನಡೆಸಲು ಇಂದಿರಾಗಾಂಧಿಯವರು ಬಾಗಲಕೋಟೆಗೆ ಆಗಮಿಸಿದ್ದು, ಈಗ ಇತಿಹಾಸ. ಚುನಾವಣಾ ಫಲಿತಾಂಶದ ಹೊರಬಿದ್ದ ವೇಳೆ ಸುನಗದ ಎಸ್.ಬಿ.ಪಾಟೀಲ ಅವರು 1,97,589 ಮತಗಳನ್ನು ಪಡೆದು ಆಯ್ಕೆಯಾದರೆ, (ಕಾಂಗ್ರೆಸ್ ಸಿಂಡಿಕೇಟ್)ನಿಂದ ಸ್ಪರ್ಧಿಸಿದ್ದ ಎಸ್.ಎಸ್.ಮೆಳ್ಳಿಗೇರಿಯವರು 91, 821 ಮತಗಳನ್ನು ಮಾತ್ರ ಪಡೆದು ಪರಾಭವಗೊಂಡಿದ್ದರು. 2,99,677ಮತಗಳ ಒಟ್ಟು ಚಲಾವಣೆಯಾಗಿದ್ದು, ಶೇಕಡಾ 61.24ರಷ್ಟು ಮತದಾನವಾಗಿತ್ತು. ಗೆಲವಿನ ಅಂತರ 1,05768 ಮತಗಳಷ್ಟಿತ್ತು.

----------

ಬಾಕ್ಸ್

ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿದ್ದ ಪಾಟೀಲರು

ಇಂದಿರಾಗಾಂಧಿಯವರ ಜೊತೆ ಗುರುತಿಸಿಕೊಂಡು ಅವರ ಪಕ್ಷದಿಂದ ಸ್ಪರ್ಧೆಮಾಡಿ ಸತತ 3ನೇ ಗೆಲವು ಪಡೆದ ಸಂಗನಗೌಡರ ಪಕ್ಷನಿಷ್ಠೆ ಪ್ರಶ್ನಾತೀತವಾಗಿತ್ತು. ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಹೆಸರು ಅವರದಾಗಿತ್ತು. ಅಂದಿನ ಚುನಾವಣೆಯಲ್ಲಿ ಎಸ್.ಬಿ.ಪಾಟೀಲ ಸುನಗ ಅವರ ಪರವಾಗಿ ಪ್ರಚಾರಕ್ಕಾಗಿ ಸ್ವತಃ ಇಂದಿರಾ ಗಾಂಧಿ ಅವರೇ ಬಾಗಲಕೋಟೆಗೆ ಬಂದಿದ್ದರು.