ದೇಶದ ಕರಾಳ ಇತಿಹಾಸಕ್ಕೆ ಇಂದಿರಾ ಗಾಂಧಿ ಸಾಕ್ಷಿ

| Published : Jun 26 2024, 12:32 AM IST

ಸಾರಾಂಶ

ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಂಡ ಇಂದಿರಾ ಗಾಂಧಿ ಆಯ್ಕೆ ಅಸಿಂಧುಗೊಳಿಸಿದ ಅಹಲಬಾದ್ ಹೈಕೋರ್ಟ್ ತೀರ್ಪು ಹಾಗೂ ಇದನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ವಿರುದ್ಧ ಹೋರಾಟ ರೂಪಿಸಿದ್ದು, ನಾಚಿಗೇಡಿನ ಸಂಗತಿ.

ಧಾರವಾಡ:

ಮಾಜಿ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಣೆ ಮೂಲಕ ಡಾ. ಅಂಬೇಡ್ಕರ್ ರಚಿಸಿರುವ ಸಂವಿಧಾನದ ಆಶಯ ಮಣ್ಣುಪಾಲು ಮಾಡಿದರು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ ಹೇಳಿದರು.

ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ಸಂಘಟನೆಯು ಇಲ್ಲಿಯ ಸೃಜನಾ ರಂಗ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡ ತುರ್ತು ಪರಿಸ್ಥಿತಿ ಸಂವಿಧಾನದ ಆಶಯಕ್ಕೆ ಅಪಚಾರ ಸಂವಾದ ಉದ್ಘಾಟಿಸಿ, ತುರ್ತು ಪರಿಸ್ಥಿತಿಯಲ್ಲಿ ಕಲಂ 39,40,41ಕ್ಕೆ ತಿದ್ದುಪಡಿ ತಂದು, ಸಂವಿಧಾನ, ನ್ಯಾಯಾಂಗದ ಮೇಲೆ ಶಾಸಕಾಂಗದ ಹಿಡಿತ ಸಾಧಿಸಿ, ದೇಶದ ಆಡಳಿತ ವ್ಯವಸ್ಥೆ ಮುಗಿಸಿದ ಶ್ರೇಯಸ್ಸು ಇಂದಿರಾ ಅವರಿಗೆ ಸಲ್ಲುತ್ತದೆ ಎಂದರು.

ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಂಡ ಇಂದಿರಾ ಗಾಂಧಿ ಆಯ್ಕೆ ಅಸಿಂಧುಗೊಳಿಸಿದ ಅಹಲಬಾದ್ ಹೈಕೋರ್ಟ್ ತೀರ್ಪು ಹಾಗೂ ಇದನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ವಿರುದ್ಧ ಹೋರಾಟ ರೂಪಿಸಿದ್ದು, ನಾಚಿಗೇಡಿನ ಸಂಗತಿ ಎಂದು ಹರಿಹಾಯ್ದರು. ಸಂವಿಧಾನ ಆಶಯ ಬುಡಮೇಲು ಮಾಡಿ, ಕಾನೂನಿನ ಮೇಲೆ ಹಿಡಿತವೂ ಸಾಧಿಸುವ ಜತೆಗೆ ಡಾ. ಅಂಬೇಡ್ಕರ್ ಕನಸಿಗೆ ತೀಲಾಂಜಲಿ ಹಾಡಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ದೇಶದ ಕರಾಳ ಇತಿಹಾಸಕ್ಕೆ ಸಾಕ್ಷಿಯಾಗಿದ್ದಾರೆ. ವಾಸ್ತವ ಹೀಗಿದ್ದರೂ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖಂಡರು ಹಾಗೂ ಕೆಪಿಸಿಸಿ ಪದಾಧಿಕಾರಿಗಳು ಈ ಸತ್ಯ ಒಪ್ಪಿಕೊಳ್ಳುತ್ತಿಲ್ಲ. ವಿನಾಕಾರಣ ಬಿಜೆಪಿ ಕುರಿತಂತೆ ಅಪಪ್ರಚಾರ ಮಾಡುವುದು ನಾಚಿಗೇಡಿನ ಸಂಗತಿ ಎಂದು ಕಿಡಿಕಾರಿದರು.

ಬಿಜೆಪಿ ಎಸ್ಸಿ-ಎಸ್ಟಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ, ಇಂದಿರಾ ಗಾಂಧಿ ಸಂವಿಧಾನಕ್ಕೆ ದೊಡ್ಡ ಕಂಟಕವಾಗಿದ್ದರು. ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ಮಾಡಿದಂತ ಅಪಚಾರ. ದೇಶಕ್ಕೆ ದೊಡ್ಡ ಕಪ್ಪುಚುಕ್ಕೆ ಎಂದರು.

ಪ್ರಸ್ತುತ ಸಂವಿಧಾನ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ. ಕೆಲವು ಅವಿವೇಕಿಗಳು ಸ್ವಾರ್ಥ ರಾಜಕಾರಣಕ್ಕೆ ಸಂವಿಧಾನ ಬದಲಾವಣೆ ಹಾಗೂ ತಿದ್ದುಪಡಿ ಅಪಸ್ವರ ಎತ್ತಿ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.

ಬಿಜೆಪಿ ಆಡಳಿತದಲ್ಲಿ ದಲಿತರು, ಹಿಂದುಳಿದ ಜನಾಂಗ ಹೆಚ್ಚಿನ ಅಭಿವೃದ್ಧಿ ಹೊಂದಿದೆ. ಆದರೆ, ಆರ್‌ಎಸ್‌ಎಸ್‌ ಸಂವಿಧಾನ ಮತ್ತು ದಲಿತ ವಿರೋಧಿಗಳು ಎಂಬ ಸುಳ್ಳು ಹಬ್ಬಿಸುತ್ತಿದ್ದು, ಇದಕ್ಕೆ ಯಾರು ಕಿವಿಗೊಡಬಾರದು ಎಂದು ಸಲಹೆ ನೀಡಿದರು. ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಮಾಜಿ ಶಾಸಕ ಡಿ.ಎಸ್. ವೀರಯ್ಯ ಇದ್ದರು.