ಸಾರಾಂಶ
ಹುಬ್ಬಳ್ಳಿ
ಮಧ್ಯಪ್ರದೇಶದ ಇಂದೋರ್ ಮಾದರಿಯಲ್ಲಿ ಇಲ್ಲಿನ ಮಹಾನಗರ ಪಾಲಿಕೆ ಕಾರವಾರ ರಸ್ತೆಯಲ್ಲಿರುವ ಕಸದ ಗುಡ್ಡೆ ಕರಗಿಸಲು ಕ್ರಮಕೈಗೊಳ್ಳಬೇಕು. ಇದಕ್ಕೆ ಬೇಕಾದ ಸಹಕಾರ ನೀಡಲಾಗುವುದು ಎಂದು ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂದೋರ್ ಮಹಾನಗರ ಕಸ ನಿರ್ವಹಣೆಯಲ್ಲಿ ಮೊದಲ ಸ್ಥಾನದಲ್ಲಿದೆ. ಹುಬ್ಬಳ್ಳಿಯಂತೆ ಅಲ್ಲಿಯೂ ಕಸದ ರಾಶಿ ಇತ್ತು. ಅದನ್ನು ಕರಗಿಸಿ ಈಗ ಅಲ್ಲಿ ಅದ್ಭುತವಾದ ಉದ್ಯಾನ ನಿಮಿರ್ಸಿದ್ದಾರೆ. ಅದೇ ಮಾದರಿಯಲ್ಲಿ ಕಾರವಾರ ರಸ್ತೆಯಲ್ಲಿರುವ 19 ಎಕರೆ ಜಮೀನಿನಲ್ಲಿನ ಕಸದ ಗುಡ್ಡೆ ಕರಗಿಸಿದರೆ ಸುಂದರ ಗಾರ್ಡನ್ ನಿರ್ಮಿಸಬಹುದಾಗಿದೆ. ಹುಬ್ಬಳ್ಳಿಯನ್ನು ಸಹ ಮಾದರಿ ನಗರ ಏಕೆ ಮಾಡಬಾರದು? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಈ ಬಗ್ಗೆ ಪಾಲಿಕೆ ಆಯುಕ್ತರು ಯೋಜನೆ ರೂಪಿಸಬೇಕು. ಹೊಸ ಬದಲಾವಣೆಗೆ ಹೆಜ್ಜೆ ಇಡಬೇಕು. ಸ್ವಚ್ಛತೆಯಲ್ಲಿ ವೃತ್ತಿಪರತೆ ತರಬೇಕು ಎಂದು ಸಲಹೆ ನೀಡಿದರು.
ಪ್ರಸ್ತಾವನೆ ಸಲ್ಲಿಕೆ:ಮಹಾನಗರದಲ್ಲಿ ತ್ಯಾಜ್ಯ ಸಂಗ್ರಹಣೆ ಹಾಗೂ ಸ್ವಚ್ಛತೆ ನಿರ್ವಹಣೆ ಕೊರತೆಯಿಂದ ಮತ್ತಷ್ಟು ಸಮಸ್ಯೆಗಳು ಉಲ್ಬಣವಾಗುತ್ತಿವೆ. ಇದು ಕಳೆದೊಂದು ತಿಂಗಳು ವಿವಿಧೆಡೆ ಪರಿಶೀಲಿಸಿದ ನಂತರ ಗಮನಕ್ಕೆ ಬಂದಿದೆ. ಈ ದಿಸೆಯಲ್ಲಿ ಸಮಗ್ರ ಕಸ ನಿರ್ವಹಣೆಗೆ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದರು.
ಈ ಭಾಗದ ಶಾಸಕರು, ಜನಪ್ರತಿನಿಧಿಗಳೊಂದಿಗೆ ಸೇರಿ ಬೆಳಗಾವಿ ಅಧಿವೇಶನ ವೇಳೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಶಾಸಕರು ಅನುದಾನ ಮಂಜೂರಾತಿ ಪಡೆಯಲು ಶ್ರಮಿಸಬೇಕು. ಅಂದುಕೊಂಡಂತೆ ನಡೆದರೆ ಕಾರವಾರ ರಸ್ತೆಯ ಗಾರ್ಬೇಜ್ ಯಾರ್ಡ್ ಮುಂದೊಂದು ದಿನ ಉತ್ತಮ ಗಾರ್ಡನ್ ಆಗಿ ಪರಿವರ್ತನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮಹಾನಗರದಲ್ಲಿ ಕಸಾಯಿಖಾನೆಗಳನ್ನು ಬೇಕಾಬಿಟ್ಟಿಯಾಗಿ ನಡೆಸಲಾಗುತ್ತಿದೆ. ಅಲ್ಲಿ ಯಾವುದೇ ನಿಯಮಾವಳಿ ಪಾಲನೆಯಾಗುತ್ತಿಲ್ಲ. ಅಲ್ಲದೇ ರಸ್ತೆ ಬದಿ ಎಲ್ಲೆಂದರಲ್ಲಿ ದನ, ಕುರಿ, ಕೋಳಿ ಕಡಿದು ತ್ಯಾಜ್ಯ ಎಸೆಯಲಾಗುತ್ತಿದೆ. ಇದರಿಂದ ವಾತಾವರಣ ಹದಗೆಡುತ್ತಿದೆ. ಕಸಾಯಿಖಾನೆ ನಿರ್ವಹಣೆ ಬಗ್ಗೆ ಸ್ವತಃ ಅಧಿಕಾರಿಗಳಿಗೂ ಸರಿಯಾದ ಮಾಹಿತಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವೇಗ ಹೆಚ್ಚಲಿ:ಕಾರವಾರ ರಸ್ತೆ ಹಾಗೂ ಧಾರವಾಡದ ಕಸದ ಗುಡ್ಡೆ ಕರಗಿಸುವ ಕಾರ್ಯ ನಿಧಾನಗತಿಯಲ್ಲಿ ನಡೆದಿದೆ. ಇದಕ್ಕೆ ವೇಗ ನೀಡಲು ಇನ್ನೆರಡು ಕಸ ಪ್ರತ್ಯೇಕಗೊಳಿಸುವ ಯಂತ್ರ ತರಿಸಬೇಕು. ಮನೆ-ಮನೆಯಿಂದ ಕಸ ಸಂಗ್ರಹಕ್ಕೆ ಇನ್ನೂ 200ಕ್ಕೂ ಹೆಚ್ಚು ವಾಹನ ಖರೀದಿಸಬೇಕು ಎಂದು ಪಾಲಿಕೆಗೆ ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಇಕ್ಸಾಲ್ ನವಲೂರ, ಮಹದೇವಪ್ಪ ನರಗುಂದ, ಚಂದ್ರಕಲಾ ಕೊಟಬಾಗಿ, ಸುಮಿತ್ರಾ ಗುಂಜಾಳ ಸೇರಿದಂತೆ ಹಲವರಿದ್ದರು.