ಹುಬ್ಬಳ್ಳಿ:

ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (ಕೆಎಸ್‌ಎಸ್‌ಐಡಿಸಿ) ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವ್ಯಾಪ್ತಿಯ ಕೈಗಾರಿಕಾ ಪ್ರದೇಶಗಳನ್ನು ಸ್ಥಳೀಯ ಆಡಳಿತಕ್ಕೆ ಹಸ್ತಾಂತರಿಸುವ ಕಾರ್ಯವಾಗಲಿ ಎಂದು ಉದ್ಯಮಿ ಅಶೋಕ ಕೊಣ್ಣೂರ ಮನವಿ ಮಾಡಿದರು.

ನಗರದ ಗೋಕುಲ ರಸ್ತೆಯ ಕೈಗಾರಿಕಾ ವಲಯದಲ್ಲಿನ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದಲ್ಲಿ (ಎನ್‌ಕೆಎಸ್‌ಎಸ್‌ಎಐ) ಸೋಮವಾರ ಆರಂಭವಾದ ಮೂರು ದಿನಗಳ ಇ-ಸ್ವತ್ತು ಮೇಳದಲ್ಲಿ ಪಾಲ್ಗೊಂಡು ಮಾತನಾಡಿದರು.

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಹಲವು ಕೈಗಾರಿಕಾ ವಲಯಗಳು ಈ ವರೆಗೆ ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿಲ್ಲ. ಇದು ಸಮಸ್ಯೆಗೆ ಕಾರಣವಾಗಿದ್ದು, ಸುಗಮ ಆಡಳಿತಕ್ಕೆ ತೊಡಕಾಗಿದೆ. ಅಲ್ಲದೇ ಯೋಜನೆಯ ಪ್ರಕಾರ ಕೈಗಾರಿಕಾ ವಲಯಗಳು ಅಭಿವೃದ್ಧಿಗೊಂಡಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವು ತುರ್ತಾಗಿ ಕ್ರಮಕೈಗೊಳ್ಳಬೇಕು ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಈ ವಿಚಾರವನ್ನು ವಿಧಾನಸಭೆ ಮುಂಗಾರು ಅಧಿವೇಶನದಲ್ಲಿ ಚರ್ಚಿಸಲಾಗುವುದು. ಜತೆಗೆ ಸಂಬಂಧಿಸಿದ ಸಚಿವರ ಗಮನಕ್ಕೂ ತಂದು, ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಅದಕ್ಕಾಗಿ ಪೂರಕ ದಾಖಲೆ ಒದಗಿಸಬೇಕು ಎಂದು ಹೇಳಿದರು.


ಕಳೆದ 6 ವರ್ಷಗಳ ಆಸ್ತಿ ತೆರಿಗೆ ಭರಿಸಿದ ಉದ್ಯಮಿಗಳಿಗೆ ಇ- ಸ್ವತ್ತು ವಿತರಿಸಲು ಪಾಲಿಕೆ ಮುಂದಾಗಿದೆ. ಉದ್ಯಮಿಗಳು ಇದರ ಪ್ರಯೋಜನ ಪಡೆಯಬೇಕು. ಎಪಿಎಂಸಿ ವರ್ತಕರಿಗೂ ಇಂಥದ್ದೇ ಸೌಲಭ್ಯ ನೀಡಲಾಗುವುದು. ಮುಂಬರುವ ದಿನಗಳಲ್ಲಿ ವಾರ್ಡ್‌ವಾರು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ರಮೇಶ ಪಾಟೀಲ ಮಾತನಾಡಿ, ಶಾಸಕ ಮಹೇಶ ಟೆಂಗಿನಕಾಯಿ ಅವರು ಸಂಘದ ಮನವಿ ಮೇರೆಗೆ ಕೆಎಸ್‌ಎಸ್‌ಐಡಿಸಿನ ಹಲವು ಸಮಸ್ಯೆಗಳನ್ನು ಪರಿಹರಿಸಿದ್ದಾರೆ ಎಂದರು

ಈ ಸಂದರ್ಭದಲ್ಲಿ ಎನ್‌ಕೆಎಸ್‌ಎಸ್‌ಎಐ ಪದಾಧಿಕಾರಿಗಳಾದ ವಿಜೇಶ ಸೈಗಲ್, ಸಂದೀಪ ಬಿಡಸಾರಿಯಾ, ಶ್ರೀಪತಿ ಭಟ್, ರಮೇಶ ಪಾಟೀಲ ಸೇರಿದಂತೆ ಹಲವರಿದ್ದರು.