ಹುಬ್ಬಳ್ಳಿ:

ಕಳೆದ 5 ದಿನಗಳಿಂದ ನಗರದಲ್ಲಿ ನಡೆದ ಕೈಗಾರಿಕಾ ಮತ್ತು ವಾಣಿಜ್ಯ ವಸ್ತು ಪ್ರದರ್ಶನ ಇನ್‌ಕಾಮೆಕ್ಸ್‌- 2026ಕ್ಕೆ ಬುಧವಾರ ತೆರೆ ಬಿದ್ದಿತು.

ಇಲ್ಲಿನ ಅಮರಗೋಳ ಎಪಿಎಂಸಿಯಲ್ಲಿನ ಹು-ಧಾ ವಿವಿಧೋದ್ದೇಶ ವಸ್ತು ಪ್ರದರ್ಶನ ಕೇಂದ್ರದಲ್ಲಿ ಕೆಸಿಸಿಐ ವತಿಯಿಂದ ಇನ್‌ಕಾಮೆಕ್ಸ್‌ ಆಯೋಜಿಸಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಜಿಲ್ಲಾಧಿಕಾರಿ ಆರ್‌.ಸ್ನೇಹಲ್‌ ಮಾತನಾಡಿ, ಯಾವುದೇ ಭಾಗದ ಅಭಿವೃದ್ಧಿಯಾಗಬೇಕೆಂದರೆ ಆ ಪ್ರದೇಶದಲ್ಲಿನ ಕೈಗಾರಿಕಾಭಿವೃದ್ಧಿಯೂ ಮುಖ್ಯ ಪಾತ್ರವಹಿಸುತ್ತದೆ ಎಂದರು.

ಕೈಗಾರಿಕೆಗಳು ಆ ಪ್ರದೇಶಾಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತವೆ. ಜತೆಗೆ ಆ ಪ್ರದೇಶವನ್ನು ಗುರುತಿಸುವಂತೆಯೂ ಮಾಡುತ್ತದೆ. ಲಾಜಿಸ್ಟಿಕ್‌ನಲ್ಲಿ ಹುಬ್ಬಳ್ಳಿ, ಧಾರವಾಡ ದೇಶದಲ್ಲೇ ಅತ್ಯಂತ ಹೆಸರು ಪಡೆದಿದೆ. ಇದು ಹೆಮ್ಮೆಯ ವಿಷಯ ಎಂದರು.


ಸದ್ಯ ಧಾರವಾಡವನ್ನು ವಿದ್ಯಾಕಾಶಿ ಎಂದು ಕರೆಯಲಾಗುತ್ತದೆ. ಹೆಚ್ಚೆಚ್ಚು ವಾಣಿಜ್ಯ, ಕೈಗಾರಿಕೆಗಳು ಬರುವ ಮೂಲಕ ವಾಣಿಜ್ಯ ಕಾಶಿ ಎಂತಲೂ ಆಗಲಿ. ಕೈಗಾರಿಕೆಗಳ ಅಭಿವೃದ್ಧಿಗೆ ಬೇಕಾದ ಸಹಾಯ, ಸಹಕಾರ ಮಾಡಲು ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ಹೇಳಿದರು.

10 ವರ್ಷ ಬಳಿಕ ಆಯೋಜಿಸಿರುವ ಇನ್‌ಕಾಮೆಕ್ಸ್‌ ಯಶಸ್ವಿಯಾಗಿದೆ. ಸದ್ಯ ಕೆಲವೊಂದಿಷ್ಟು ಮಹಿಳಾ ಉದ್ಯಮಿಗಳು ಇನ್‌ಕಾಮೆಕ್ಸ್‌ನಲ್ಲಿ ಪಾಲ್ಗೊಂಡಿದ್ದುಂಟು. ಮುಂದೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಉದ್ಯಮಿಗಳು ಬರುವಂತಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಸಿಸಿಐ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ಮಾತನಾಡಿ, ಉತ್ತರ ಕರ್ನಾಟಕದ ಕೈಗಾರಿಕೋದ್ಯಮ ಬೆಳೆಯಲು ಇನ್‌ಕಾಮೆಕ್ಸ್‌ ವೇದಿಕೆಯಾಗಿದೆ. 2030ರಲ್ಲಿ ಮತ್ತೆ ಇನ್‌ಕಾಮೆಕ್ಸ್‌ ಆಯೋಜಿಸಲಾಗುವುದು ಎಂದ ಅವರು, ವಿವಿಧ ವಸ್ತು ಪ್ರದೇಶ ಕೇಂದ್ರವನ್ನು ಜಿಲ್ಲೆಯಲ್ಲಿ ನಡೆಯುವ ಉಳಿದ ವಸ್ತು ಪ್ರದರ್ಶನಕ್ಕೂ ಬಳಕೆಯಾಗುವಂತಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಇನ್‌ಕಾಮೆಕ್ಸ್ ಚೇರ್ಮನ್ ಮಹಾದೇವ ಕರಮರಿ ಮಾತನಾಡಿ, 1996ರಿಂದ ಇನ್‌ಕಾಮೆಕ್ಸ್ ಆಯೋಜಿಸುತ್ತ ಬರಲಾಗುತ್ತಿದೆ. 2022ರಲ್ಲಿ ಆಯೋಜಿಸಿರಲಿಲ್ಲ. ಇದು 6ನೇ ಪ್ರದರ್ಶನ. ಎಲ್ಲರನ್ನು ಒಗ್ಗೂಡಿಸಲು, ಒಂದೆಡೆ ಸೇರಲು ಅನುವು ಆಯಿತು. ಒಂಬತ್ತು ಎಕರೆ ಜಾಗದ ವಿವಿಧೋದ್ದೇಶ ವಸ್ತು ಪ್ರದರ್ಶನ ಕೇಂದ್ರವು ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಬೇಕು. ಕನ್ವೆನ್ಷನ್ ಹಾಲ್ ಮತ್ತು 20 ಸಾವಿರ ಚದುರ ಅಡಿ ವಿಸ್ತೀರ್ಣದ ಭವನ ನಿರ್ಮಿಸಬೇಕಿದೆ. ಇದಕ್ಕೆ ಜಿಲ್ಲಾಡಳಿತ ನೆರವು ನೀಡಬೇಕು ಎಂದರು.

ಇದೇ ವೇಳೆ ಇನ್‌ಕಾಮೆಕ್ಸ್‌ನಲ್ಲಿ ಪಾಲ್ಗೊಂಡಿದ್ದ‌ ಮಳಿಗೆದಾರರಿಗೆ ಪಾರಿತೋಷಕ ಮತ್ತು ಪ್ರಮಾಣಪತ್ರ ಪ್ರದಾನ ಮಾಡಿದರು. ಕೆಸಿಸಿಐ ಮಾಜಿ ಅಧ್ಯಕ್ಷರಾದ ಮಹೇಂದ್ರ ಲದ್ದಡ, ವಿನಯ ಜವಳಿ, ರಮೇಶ ಪಾಟೀಲ, ಪದಾಧಿಕಾರಿಗಳಾದ ಉದಯ ರೇವಣಕರ, ಪ್ರವೀಣ ಅಗಡಿ, ಸಿದ್ದೇಶ್ವರ ಕಮ್ಮಾರ, ವೀರಣ್ಣ ಕಲ್ಲೂರ, ಜಯಪ್ರಕಾಶ ಟೆಂಗಿನಕಾಯಿ, ಪ್ರಕಾಶ ಶೃಂಗೇರಿ, ಅಶೋಕ ಗಡಾದ, ಶಶಿಧರ ಶೆಟ್ಟರ್‌, ನಿಂಗಪ್ಪ ಬಿರಾದಾರ ಇತರರಿದ್ದರು.