ಕೈಗಾರಿಕೆಗಳು ದೇಶದ ಅಭಿವೃದ್ಧಿಗೆ ಪೂರಕ: ಜಿಲ್ಲಾಧಿಕಾರಿ

| Published : Jan 31 2024, 02:17 AM IST

ಕೈಗಾರಿಕೆಗಳು ದೇಶದ ಅಭಿವೃದ್ಧಿಗೆ ಪೂರಕ: ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶವು ಗುಡಿ ಕೈಗಾರಿಕೆಗಳಿಗೆ ಅತ್ಯಂತ ಹೆಚ್ಚು ಪ್ರಸಿದ್ಧಿ ಪಡೆದಿದೆ. ಒಂದು ಕಾಲದಲ್ಲಿ ವಿಶ್ವದ ವಿವಿಧೆಡೆ ಮಾಡುತ್ತಿದ್ದ ರಫ್ತುಗಳ ಅವಲೋಕಿಸಿದರೆ, ಶೇ.50ಕ್ಕೂ ಹೆಚ್ಚು ಪ್ರಮಾಣ ರಫ್ತು ಇರುತ್ತಿತ್ತು. ಆದರೆ, ಬ್ರಿಟಿಷರು ದೇಶಕ್ಕೆ ಕಾಲಿಟ್ಟ ನಂತರ ಗುಡಿ ಕೈಗಾರಿಕೆಗಳು ನಶಿಸುತ್ತಾ ಬಂದವು. ಹತ್ತಿ ಬಟ್ಟೆ, ಕರಕುಶಲ ವಸ್ತುಗಳು, ಆಭರಣ ಹೀಗೆ ನಾನಾ ಗುಡಿ ಕೈಗಾರಿಕೆಗಳಿದ್ದರೂ ಬ್ರಿಟಿಷರು ಕಾಲಿಟ್ಟ ನಂತರ ಗುಡಿ ಕೈಗಾರಿಕೆಗಳು ನಶಿಸಿ, ಕುಶಲಕರ್ಮಿಗಳ ಕೆಲಸಕ್ಕೂ ಸಂಕಷ್ಟ ಬಂದೊದಗಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬೃಹತ್ ಕೈಗಾರಿಕೆಗಳು ಕೇವಲ ದೊಡ್ಡ ನಗರ ವ್ಯಾಪ್ತಿಯಲ್ಲಿ ಆರಂಭವಾಗುತ್ತಿದ್ದು, ಕಾರ್ಖಾನೆಗಳು, ಕೈಗಾರಿಕೆಗಳು ದೇಶದ ಅಭಿವೃದ್ಧಿಗೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ತಿಳಿಸಿದರು.

ನಗರದ ಸಾಯಿ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಮಂಗಳವಾರ ಕಾಸಿಯಾ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೆನರಾ ಬ್ಯಾಂಕ್ ಮತ್ತು ರಾಜ್ಯ ಸಣ್ಣ ಕೈಗಾರಿಕೆಗಳ ಉದ್ದಿಮೆದಾರರ ಸಂಘ(ಕಾಸಿಯಾ)ದಿಂದ ಎಂಎಸ್‍ಎಂಇಗಳಿಗೆ ಆರ್ಥಿಕ ಸಾಕ್ಷರತೆ ಮತ್ತು ಉದಯೋನ್ಮುಖ ಅವಕಾಶಗಳ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದೇಶವು ಗುಡಿ ಕೈಗಾರಿಕೆಗಳಿಗೆ ಅತ್ಯಂತ ಹೆಚ್ಚು ಪ್ರಸಿದ್ಧಿ ಪಡೆದಿದೆ. ಒಂದು ಕಾಲದಲ್ಲಿ ವಿಶ್ವದ ವಿವಿಧೆಡೆ ಮಾಡುತ್ತಿದ್ದ ರಫ್ತುಗಳ ಅವಲೋಕಿಸಿದರೆ, ಶೇ.50ಕ್ಕೂ ಹೆಚ್ಚು ಪ್ರಮಾಣ ರಫ್ತು ಇರುತ್ತಿತ್ತು. ಆದರೆ, ಬ್ರಿಟಿಷರು ದೇಶಕ್ಕೆ ಕಾಲಿಟ್ಟ ನಂತರ ಗುಡಿ ಕೈಗಾರಿಕೆಗಳು ನಶಿಸುತ್ತಾ ಬಂದವು. ಹತ್ತಿ ಬಟ್ಟೆ, ಕರಕುಶಲ ವಸ್ತುಗಳು, ಆಭರಣ ಹೀಗೆ ನಾನಾ ಗುಡಿ ಕೈಗಾರಿಕೆಗಳಿದ್ದರೂ ಬ್ರಿಟಿಷರು ಕಾಲಿಟ್ಟ ನಂತರ ಗುಡಿ ಕೈಗಾರಿಕೆಗಳು ನಶಿಸಿ, ಕುಶಲಕರ್ಮಿಗಳ ಕೆಲಸಕ್ಕೂ ಸಂಕಷ್ಟ ಬಂದೊದಗಿತು ಎಂದು ವಿಷಾದಿಸಿದರು.

ಗುಡಿ ಕೈಗಾರಿಕೆಗಳು ನಶಿಸುತ್ತಾ ಬಂದಂತೆ ದೇಶದ ಜನತೆ ಕೃಷಿ ಅವಲಂಬಿತರಾದರು. ಸ್ವಾತಂತ್ರ್ಯ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡುತ್ತಾ ಬಂದವು. ಕೈಗಾರಿಕೆಗಳು ಬೃಹತ್ ಮಟ್ಟದಲ್ಲಿ ದೊಡ್ಡ ದೊಡ್ಡ ನಗರದಲ್ಲಿ ಸ್ಥಾಪನೆಯಾಗಿವೆ. ಅಭಿವೃದ್ಧಿಯು ಸಮತೋಲನವಾಗಬೇಕಾದರೆ, ಅಭಿವೃದ್ಧಿಯು ಎಲ್ಲಾ ಕ್ಷೇತ್ರದಲ್ಲೂ ಆಗಬೇಕು. ಪ್ರತಿ ಜಿಲ್ಲಾ, ತಾಲೂಕು ಕೇಂದ್ರಗಳಲ್ಲೂ ಸಣ್ಣ, ಮಧ್ಯಮ ಕೈಗಾರಿಕೆಗಳು, ಕೈಗಾರಿಕೋದ್ಯಮ ಆರಂಭವಾಗಬೇಕು ಎಂದು ತಿಳಿಸಿದರು.

ಆರ್ಥಿಕ ಚೇತರಿಕೆಗೆ ಸಹಾಯ:

ಕೈಗಾರಿಕೆಗಳ ಸ್ಥಾಪನೆಯಿಂದಾಗಿ ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಯಾಗುತ್ತದೆ. ಆ ಊರಿನ ಜನರ ಜೀವನ ಮಟ್ಟವೂ ಸುಧಾರಣೆಯಾಗಿ ಆರ್ಥಿಕವಾಗಿ ಚೇತರಿಕೆ ಹೊಂದಲು ಸಾಧ್ಯ. ಅದರಲ್ಲೂ ಸೂಕ್ಷ್ಮ, ಸಣ್ಣ ಕೈಗಾರಿಕೆಗಳು ಬಲವಾಗಿ ಬೆಳೆಯಬೇಕು. ಅದಕ್ಕೆ ಉತ್ಪಾದಕರು ಮುಂದೆ ಬರಬೇಕು. ಕಡಿಮೆ ಬಂಡವಾಳ ಹೂಡಿ ಯುವ ಸಮೂಹವು ಉತ್ತಮ ಕೈಗಾರಿಕೆಗಳ ಸ್ಥಾಪಿಸಬೇಕು. ಪ್ರತಿ ಜಿಲ್ಲೆಯಲ್ಲೂ ಕಾಸಿಯಾ ಇಂತಹ ಕಾರ್ಯ ಮಾಡುತ್ತಿವೆ ಎಂದು ಶ್ಲಾಘಿಸಿದರು.

ಕೆನರಾ ಬ್ಯಾಂಕ್‌ನ ಸಹಾಯಕ ಮುಖ್ಯ ವ್ಯವಸ್ಥಾಪಕ ಪ್ರೊ.ವಿ.ಎನ್‌.ಶಿವಪ್ರಸಾದ, ಸಣ್ಣ ಕೈಗಾರಿಕೆಗಳ ಅಭಿವೃದ್ದಿ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಎಂ.ಆರ್‌.ವಿಕಾಸ್‌, ಕಾಸಿಯಾ ಅಧ್ಯಕ್ಷ ಸಿ.ಎ.ಶಶಿಧರ ಶೆಟ್ಟಿ, ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ರಾಜೇಂದ್ರ ನಾಮದೇವ ಕದಂ, ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಎನ್.ಶಿವಲಿಂಗಪ್ಪ ಕುಂಬಾರ್, ಕಾಸಿಯಾದ ಡಿ.ಶೇಷಾಚಲ, ಎಂ.ಬಿ.ರಾಜಗೋಪಾಲ, ಎಸ್‌.ನಾಗರಾಜ, ಎನ್.ಅರುಣ ಪಡಿಯಾರ್‌ ಇತರರಿದ್ದರು.

ಕೈಗಾರಿಕೆಗಳ ಸ್ಥಾಪನೆಗೆ ಉತ್ತಮ ಅವಕಾಶ

ದಾವಣಗೆರೆ ಒಂದು ಕಾಲದಲ್ಲಿ ಕರ್ನಾಟಕದ ಮ್ಯಾಂಚೆಸ್ಟರ್ ಖ್ಯಾತಿ ಪಡೆದ ಊರು. ಪಕ್ಕದ ಹರಿಹರವೂ ಕೈಗಾರಿಕೆ ಹೊಂದಿದ್ದ ಊರು. ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಉತ್ತಮ ಅವಕಾಶಗಳಿದ್ದು, ಭೂಮಿ ಸಮತಟ್ಟಿನಿಂದ ಕೂಡಿದ್ದು, ತುಂಗಭದ್ರಾ ನದಿ ನೀರು ಲಭ್ಯತೆ, ಕೈಗಾರಿಕೆಗೆ ಪೂರಕ ವಾತಾವರಣ, ಮಾನವ ಸಂಪನ್ಮೂಲವೂ ಇದೆ. ಕೌಶಲ್ಯ ಕಲಿತು, ಹಣ ವಿನಿಯೋಗಿಸಿ, ಅದರಿಂದ ಉದ್ಯೋಗ ಸೃಜಿಸಿ, ಉತ್ಪನ್ನಗಳ ಮಾರುಕಟ್ಟೆ ಮಾಡಿ, ಯಶಸ್ವಿಯಾಗುವ ಎಂಟರ್‌ ಪ್ರೈಸಸ್‌ಗಳ ಅವಶ್ಯಕತೆ ಇದೆ.

ಡಾ.ಎಂ.ವಿ.ವೆಂಕಟೇಶ, ಜಿಲ್ಲಾಧಿಕಾರಿ