ಸಾರಾಂಶ
ಶಿರಸಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಯೋಜಿಸಿದ್ದ ಪ್ರಕೃತಿಯ ಮಡಿಲು ನುಡಿಯ ಒಡಲು ಕಾರ್ಯಕ್ರಮ ನರೂರಿನಲ್ಲಿ ಜರುಗಿತು. ನರೂರಿನ ರಘುನಂದನ ಭಟ್ಟ ಅವರ ಮನೆಯಂಗಳದಲ್ಲಿ ನಡೆದ ಕಾರ್ಯಕ್ರಮವನ್ನು ಅಭಾಸಾಪ ಮಕ್ಕಳ ಪ್ರಕಾರದ ಪುಟಾಣಿಗಳು ಉದ್ಘಾಟಿಸಿದರು.
ದಿಕ್ಸೂಚಿ ಮಾತುಗಳನ್ನಾಡಿದ ಅಭಾಸಾಪ ಕರ್ನಾಟಕದ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಅವರು, ಸಾಹಿತ್ಯಕ್ಕೂ ಪರಿಸರಕ್ಕೂ ಅವಿನಾಭಾವ ಸಂಬಂಧವಿದೆ. ಪರಿಸರದ ಕುರಿತಾಗಿ ಸೃಷ್ಟಿಶೀಲ ಸಾಹಿತ್ಯ ರಚನೆಗೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಅಭಾಸಾಪದ ಶಿರಸಿ ಜಿಲ್ಲೆ ಅಧ್ಯಕ್ಷ ಗಂಗಾಧರ ಕೊಳಗಿ ಅವರು, ಸಾಹಿತಿ ಹೊರಗಿನ ಪರಿಸರವನ್ನು ಗ್ರಹಿಸಬೇಕು. ಅದಕ್ಕಿಂತ ಮುಖ್ಯವಾಗಿ ತನ್ನೊಳಗಿನ ಕತ್ತಲೆಯನ್ನು ಸರಿಸಿ ಬೆಳಕು ಮೂಡಿಸಿಕೊಳ್ಳಬೇಕು ಎಂದರು.ಎರಡನೇ ಅವಧಿಯಲ್ಲಿ ಮಂಕುತಿಮ್ಮನ ಕಗ್ಗದ ಹಾಡುಗಾರಿಕೆ ಮತ್ತು ವ್ಯಾಖ್ಯಾನ ಜರುಗಿತು.ಅಭಾಸಾಪ ಬನವಾಸಿ ಘಟಕದ ಶ್ರೀಪಾದ ಭಟ್ಟರ ಮಾರ್ಗದರ್ಶನದಲ್ಲಿ ಕು. ವಿಂದ್ಯಾ ಮಂಗಳೂರು ಸಂಗಡಿಗರು ಕಗ್ಗವನ್ನು ಹಾಡಿದರು. ಅಭಾಸಾಪದ ಕರ್ನಾಟಕದ ವಿದ್ಯಾರ್ಥಿ ಪ್ರಮುಖ್ ತಿಮ್ಮಣ್ಣ ಭಟ್ಟ ವ್ಯಾಖ್ಯಾನ ಮಾಡಿದರು. ಮೂರನೇ ಅವಧಿಯಲ್ಲಿ ವೇದಗಳಲ್ಲಿ ಪರಿಸರ ಚಿಂತನೆ ಕುರಿತು ಉಪನ್ಯಾಸ ನೀಡಿದ ಹಿರಿಯ ವಿದ್ವಾಂಸ ವಿ. ಉಮಾಕಾಂತ ಭಟ್ಟ ಕೆರೆಕೈ ಅವರು, ಪರಿಸರ ವಿಜ್ಞಾನ ಅನ್ನುವುದು ಒಂದು ಭ್ರಮೆ. ಪರಿಸರ ಉಳಿಸುವಲ್ಲಿ ಹಲವು ವಿಜ್ಞಾನಿಗಳಿಗೆ ಹಲವು ತೊಡಕಿದೆ. ಆದರೆ ಅದರ ಮಾರ್ಗದರ್ಶನ ಋಷಿಗಳ ಮಾತುಗಳಲ್ಲಿದೆ. ನಿಜವಾದ ಕೃಷಿ ವಿಜ್ಞಾನವೇ ಪರಿಸರ ವಿಜ್ಞಾನ ಎಂದರು.ನಾಲ್ಕನೇಯ ಅವಧಿಯಲ್ಲಿ ಕವನವಾಚನ- ಅವಲೋಕನ ನಡೆಯಿತು. ಅಭಾಸಾಪ ತೀರ್ಥಹಳ್ಳಿ ತಾಲೂಕು ಅಧ್ಯಕ್ಷ ಅಣ್ಣಪ್ಪ ಅರಬಗಟ್ಟಿ ಅವಲೋಕನ ಮಾಡಿದರು. ಅಭಾಸಾಪದ ಪ್ರಾಂತ ಕಾರ್ಯಕಾರಿಣಿ ಆಮಂತ್ರಿತ ಸದಸ್ಯ ಜಗದೀಶ ಭಂಡಾರಿ ಮಾತನಾಡಿದರು. ರಾಜ್ಯದ ವಿವಿಧೆಡೆಯ ೮ ಕವಿಗಳು ಕವನ ವಾಚಿಸಿದರು.ಸಮಾರೋಪ ಮಾತುಗಳನ್ನಾಡಿದ ಅಭಾಸಾಪ ಮೈಸೂರು ಜಿಲ್ಲೆ ಅಧ್ಯಕ್ಷ ದಿವಾಕರ ಹೆಗಡೆ ಕೆರೆಹೊಂಡ ಅವರು, ಪರಿಸರ ವಾದವಾಗದೇ ಪ್ರಜ್ಞೆಯಾಗಬೇಕು. ಪರಿಸರದ ತೊಡಕುಗಳು ಬರವಣಿಗೆಯಲ್ಲಿ ಬರಬೇಕು. ಸಾಹಿತ್ಯ, ಕೃಷಿಯಲ್ಲಿ ಹೊಸ ಆಲೋಚನೆ ಸೃಷ್ಟಿಸಬೇಕು ಎಂದರು.
ಯಲ್ಲಾಪುರದ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಪ್ರಾಂಶುಪಾಲ ನಾಗರಾಜ ಇಳೆಗುಂಡಿ ಮಾತನಾಡಿ, ನಾಡು ಅಭಿವೃದ್ಧಿಶೀಲವಾಗಲು ನಾವು ಎಷ್ಟು ಕಳೆದುಕೊಳ್ಳಬೇಕು ಎನ್ನುವ ಚಿಂತನೆಯ ಜತೆಗೆ ನಿಜ ಅಭಿವೃದ್ಧಿಯ ಬಗ್ಗೆ ಚರ್ಚೆ ಮುಖ್ಯವಾದದ್ದು ಎಂದರು.ಈ ಸಂದರ್ಭದಲ್ಲಿ ಪರಿಸರತಜ್ಞ ಉಮಾಪತಿ ಭಟ್ ರಚಿಸಿದ ಸಸ್ಯಲೋಕ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಅಭಾಸಾಪ ಬನವಾಸಿ ಘಟಕದ ಅಧ್ಯಕ್ಷ ಭಾನುರಾಜ್ ಮಂಗಳೂರು ಸ್ವಾಗತಿಸಿ ಪರಿಚಯಿಸಿದರು. ರೇಖಾ ಮಂಗಳೂರು ನಿರೂಪಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಅಭಾಸಾಪದ ಪದಾಧಿಕಾರಿಗಳು, ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.