ಸಾರಾಂಶ
ಆಲಮಟ್ಟಿ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯದ ಒಳಹರಿವು ಗುರುವಾರ ಸಂಜೆ 70,000 ಕ್ಯೂಸೆಕ್ ಗೆ ಹೆಚ್ಚಿದೆ.
ಆಲಮಟ್ಟಿ : ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯದ ಒಳಹರಿವು ಗುರುವಾರ ಸಂಜೆ 70,000 ಕ್ಯೂಸೆಕ್ ಗೆ ಹೆಚ್ಚಿದೆ. ಹೀಗಾಗಿ, ಜಲಾಶಯದ 26 ಗೇಟ್‌ಗಳ ಪೈಕಿ 19 ಗೇಟ್ ಮೂಲಕ 27,500 ಕ್ಯೂಸೆಕ್ ಹಾಗೂ ಜಲಾಶಯದ ಬಲಭಾಗದ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ 42,500 ಕ್ಯೂಸೆಕ್ ಸೇರಿ ಒಟ್ಟು 70 ಸಾವಿರ ಕ್ಯೂಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿಬಿಡಲಾಗುತ್ತಿದೆ.
ಕೃಷ್ಣಾ ನದಿಗೆ ಅಪಾರ ನೀರು ಹರಿದು ಬರುತ್ತಿದ್ದು, ಕಲ್ಲೋಳ ಬ್ಯಾರೇಜ್ ಬಳಿ ಕೃಷ್ಣಾ ನದಿಗೆ ದೂಧಸಾಗರ ನದಿ ಬಂದು ಸೇರುತ್ತಿದ್ದು, ಅಲ್ಲಿ 70 ಸಾವಿರ ಕ್ಯುಸೆಕ್‌ಗೂ ಅಧಿಕ ಹರಿವಿದೆ. ಹೀಗಾಗಿ ಆಲಮಟ್ಟಿ ಜಲಾಶಯದ ಒಳಹರಿವು ಮುಂದಿನ ಮೂರ್ನಾಲ್ಕು ದಿನ ಏರಲಿದೆ. ಹೀಗಾಗಿ, ಜಲಾಶಯದಲ್ಲಿ ಸದ್ಯ 68 ಟಿಎಂಸಿ ನೀರು ಸಂಗ್ರಹವಿದೆ.
225 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ: ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ ಘಟಕದ ಮೂಲಕ 42,500 ಕ್ಯೂಸೆಕ್ ನೀರು ಬಿಟ್ಟ ಕಾರಣ ಕೇಂದ್ರದ ಆರೂ ಘಟಕಗಳು ಕಾರ್ಯಾರಂಭ ಮಾಡಿವೆ. ಆ ಮೂಲಕ ಸದ್ಯ 225 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಕೆಪಿಸಿಎಲ್ ಅಧಿಕಾರಿ ಚಂದ್ರಶೇಖರ ದೊರೆ ತಿಳಿಸಿದರು.
ಇನ್ನು, ಕೃಷ್ಣಾ ತೀರದ ಗ್ರಾಮಗಳಾದ ಅರಳದಿನ್ನಿ, ಕಾಶೀನಕುಂಟಿ, ಯಲಗೂರು, ಯಲ್ಲಮ್ಮನಬೂದಿಹಾಳ, ಮಸೂತಿ ಗ್ರಾಮಗಳಲ್ಲಿ ಆತಂಕ ಶುರು ಆಗಿದೆ. ಈಗಾಗಲೇ ನದಿಗೆ ಅಳವಡಿಸಿದ್ದ ಪಂಪಸೆಟ್ ಗಳನ್ನು ತೆರವುಗೊಳಿಸಲಾಗಿದೆ.
ಮುರ್ನಾಲ್ಕು ದಿನಗಳ ಕಾಲ ಜಲಾಶಯದ ಒಳಹರಿವು ಏರಿಕೆಯಾಗಲಿದ್ದು, ಮುಂಜಾಗ್ರತೆಯ ಕ್ರಮವಾಗಿ ಹೊರಹರಿವನ್ನು 70 ಸಾವಿರ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ. ಒಂದು ವೇಳೆ ಒಳಹರಿವು ಕಡಿಮೆಯಾದರೆ ಹೊರಹರಿವನ್ನು ಕಡಿಮೆ ಮಾಡಲಾಗುವುದು ಎಂದು ಸೂಪರಿಂಟೆಂಡಿಂಗ್ ಎಂಜಿನಿಯರ್ ವಿ.ಆರ್.ಹಿರೇಗೌಡರ ಮಾಹಿತಿ ನೀಡಿದ್ದಾರೆ.