ದೇಶದ ಎಲ್ಲ ಭಾಷೆಗಳ ಮೇಲೂ ಸಂಸ್ಕೃತದ ಪ್ರಭಾವ: ವಿ. ಗೋಪಾಲಕೃಷ್ಣ ಭಟ್ಟ

| Published : Aug 31 2024, 01:42 AM IST

ಸಾರಾಂಶ

ಪ್ರಾಚೀನ ಕಾಲದಲ್ಲಿ ಸಂಸ್ಕೃತ ವ್ಯಾವಹಾರಿಕ ಭಾಷೆಯಾಗಿತ್ತು ಎಂಬುದನ್ನು ತಿಳಿದಿದ್ದೇವೆ. ಯಾರೋ ಅನನುಭವಿಗಳು ಸಂಸ್ಕೃತ ಮೃತಭಾಷೆ ಎಂದಿರಬಹುದು. ಅದು ಅಮೃತ ಭಾಷೆ ಎಂದು ಗೋಪಾಲಕೃಷ್ಣ ಭಟ್ಟ ತಿಳಿಸಿದರು.

ಯಲ್ಲಾಪುರ: ಭಾರತದ ಎಲ್ಲ ಭಾಷೆಗಳಿಗೂ ಸಂಸ್ಕೃತ ಪ್ರಭಾವ ಬೀರಿದೆ. ಸಂಸ್ಕೃತ ವೇದ ಇರುವರೆಗೂ ಇರುತ್ತದೆ. ಇದು ದೇವಭಾಷೆ. ಪುರಾಣ, ಶಾಸ್ತ್ರ ಎಲ್ಲವೂ ಸಂಸ್ಕೃತದಲ್ಲೇ ಇದೆ. ಜಗತ್ತಿನ ಮುಂದುವರಿದ ರಾಷ್ಟ್ರಗಳು ಸಂಸ್ಕೃತವನ್ನು ಅಧ್ಯಯನ ಮಾಡುವುದಕ್ಕೆ ಮುಂದಾಗಿವೆ ಎಂದು ವಿ. ಗೋಪಾಲಕೃಷ್ಣ ಭಟ್ಟ ಕವಡೀಕೆರೆ ತಿಳಿಸಿದರು.

ಆ. ೨೮ರಂದು ಪಟ್ಟಣದ ನಾಯಕನಕೆರೆಯ ಶಾರದಾಂಬಾ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ನಿರ್ದೇಶನಾಲಯ ಹಾಗೂ ಶಾರದಾಂಬಾ ವೇದಸಂಸ್ಕೃತ ಪಾಠಶಾಲೆ ಹಮ್ಮಿಕೊಂಡ ಅಸ್ಮಾಕಂ ಸಂಸ್ಕೃತಂ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉಪನ್ಯಾಸ ನೀಡಿದರು.

ಪ್ರಾಚೀನ ಕಾಲದಲ್ಲಿ ಸಂಸ್ಕೃತ ವ್ಯಾವಹಾರಿಕ ಭಾಷೆಯಾಗಿತ್ತು ಎಂಬುದನ್ನು ತಿಳಿದಿದ್ದೇವೆ. ಯಾರೋ ಅನನುಭವಿಗಳು ಸಂಸ್ಕೃತ ಮೃತಭಾಷೆ ಎಂದಿರಬಹುದು. ಅದು ಅಮೃತ ಭಾಷೆ ಎಂದರು.

ತಾಲೂಕು ವಿಪ್ರ ಸಮಾಜದ ಅಧ್ಯಕ್ಷರೂ, ಶಾರದಾಂಬಾ ಶಿಕ್ಷಣ ಸಂಸ್ಥೆಯ ನಿರ್ದೇಶಕರೂ ಆದ ಶಂಕರ ಭಟ್ಟ ತಾರೀಮಕ್ಕಿ ಅಧ್ಯಕ್ಷತೆ ವಹಿಸಿ, ಸಂಸ್ಕೃತ, ವೇದ ಕಲಿಯುವ ವಿದ್ಯಾರ್ಥಿಗಳು ಪಾಲಕರ ಒತ್ತಾಸೆಗೆ ಕಲಿಯದೆ, ನಿಜವಾದ ಶ್ರದ್ಧೆ, ನಿಷ್ಠೆಯಿಂದ ಪರಿಪೂರ್ಣ ಅಧ್ಯಯನ ಮಾಡಿದಾಗ ಮಾತ್ರ ಸಮಾಜದಿಂದ ಉತ್ತಮ ಗೌರವ ದೊರೆಯಲು ಸಾಧ್ಯ ಎಂದರು.

ಸಂಸ್ಥೆಯ ನಿರ್ದೇಶಕರಲ್ಲೊಬ್ಬರಾದ ದತ್ತಾತ್ರೇಯ ಭಟ್ಟ ಮುಂಡಗೋಡಿ, ಶಾರದಾಂಬಾ ದೇವಸ್ಥಾನದ ಕಾರ್ಯಾಧ್ಯಕ್ಷ ಜಗದೀಶ ದೀಕ್ಷಿತ ಉಪಸ್ಥಿತರಿದ್ದರು. ರವಿ ಭಟ್ಟ, ಶಿವಮೂರ್ತಿ ಹೆಗಡೆ ವೇದಘೋಷ ಪಠಿಸಿದರು. ಮುಖ್ಯಾಧ್ಯಾಪಕ ಡಾ. ನರಸಿಂಹ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕ ಡಾ. ಶಿವರಾಮ ಭಾಗ್ವತ್ ವಂದಿಸಿದರು. ಆದಿತ್ಯ ಮಂಜುನಾಥ ಭಟ್ಟ ಮೊಟ್ಟೇಗದ್ದೆ ನಿರ್ವಹಿಸಿದರು.