ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಶಾಸನ ಸಭೆಗಳಲ್ಲಿ ಚರ್ಚೆಯ ಗುಣಮಟ್ಟ ಹೆಚ್ಚಿಸಲು ವಿಧೇಯಕಗಳ ಮಂಡನೆಯ ಎರಡು ದಿನ ಮೊದಲು ಸಂಸದರು, ಶಾಸಕರಿಗೆ ವಿಧೇಯಕಗಳ ಕುರಿತು ಪೂರ್ವಭಾವಿ ಮಾಹಿತಿ ನೀಡುವ ಕಾರ್ಯಕ್ರಮ ಅನುಷ್ಠಾನಗೊಳಿಸುವುದಾಗಿ ಲೋಕಸಭೆ ಸಭಾಧ್ಯಕ್ಷ ಓಂಬಿರ್ಲಾ ಹೇಳಿದರು.ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ 11ನೇ ಕಾಮನ್‌ವೆಲ್ತ್ ಸಂಸದೀಯ ಸಂಘದ (ಸಿಪಿಎ) ಸಮ್ಮೇಳನದ ಸಮಾರೋಪದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಶಾಸನ ಸಭೆಯ ಕಲಾಪಗಳಲ್ಲಿ ಜನತೆಯ ಕಲ್ಯಾಣದ ಕುರಿತು ಹೆಚ್ಚು ಚರ್ಚೆ ನಡೆಯಬೇಕು. ಅದಕ್ಕಾಗಿ ಸಭೆಯಲ್ಲಿ ಮಂಡಿಸುವ ವಿಧೇಯಕಗಳ ಕುರಿತು ಸಂಸದರು, ಶಾಸಕರು ಚರ್ಚೆ ನಡೆಸಲು ಮಾಹಿತಿ ಕೊರತೆ ಆಗದಂತೆ ಪೂರ್ವಭಾವಿ ಮಾಹಿತಿ ಕಾರ್ಯಕ್ರಮ ಜಾರಿ ಕುರಿತು ತಜ್ಞರೊಂದಿಗೆ ಸಮಾಲೋಚಿಸುವ ಅವಕಾಶ ನೀಡುವ ಉದ್ದೇಶ ಹೊಂದಲಾಗಿದೆ. ಹಾಗೆಯೇ ಕಾನೂನಿನಲ್ಲಿನ ಭಾಷೆ ಬಗ್ಗೆ ಕೆಲವರು ತಕರಾರು ತೆಗೆಯುತ್ತಾರೆ. ಕಾನೂನಿನ ಭಾಷೆಯನ್ನು ಸರಳಗೊಳಿಸುವ ಮತ್ತು ಎಲ್ಲ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಕಾನೂನು ರೂಪಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.ಸಂಸತ್ತಿನಲ್ಲಿ 24/7 ಮಾಹಿತಿ ಸಿಗುವಂತೆ ಗ್ರಂಥಾಲಯದ ಲಭ್ಯತೆ ಇರುವ ಡಾಟಾ ಬೇಸ್ ಸ್ಥಾಪಿಸಲಾಗುವುದು. ಈ ಡಾಟಾಬೇಸ್‌ನಲ್ಲಿ ಶಾಸನ ಸಭೆಗಳ ಸಮಗ್ರ ಮಾಹಿತಿ, ವಿಷಯದ ಬಗ್ಗೆ ಈ ಹಿಂದೆ ನಡೆದ ಚರ್ಚೆಗಳು, ಸಂಬಂಧಿತ ಕಾನೂನುಗಳೆಲ್ಲದರ ಮಾಹಿತಿ ಸಿಗಲಿದೆ. ಇದರಿಂದ ಶಾಸನ ಸಭೆಗಳ ಪ್ರತಿನಿಧಿಗಳಿಗೆ ಹೆಚ್ಚು ಸಮರ್ಥವಾಗಿ ತಮ್ಮ ವಿಚಾರ ಮಂಡಿಸಲು ಸಾಧ್ಯವಾಗಲಿದೆ ಎಂದರು.
ಸದನದ ಕಾರ್ಯಕಲಾಪಗಳ ಗುಣಮಟ್ಟ ಅಳೆಯಲು ಮಾನದಂಡವೊಂದನ್ನು ರೂಪಿಸಲು ಸಿದ್ಧತೆ ನಡೆದಿದೆ. ಸದನದಲ್ಲಿ ನಡೆದ ಚರ್ಚೆಗಳು, ಕಲಾಪದ ಕಾಲಾವಧಿ ಮತ್ತಿತರ ಅಂಶಗಳನ್ನು ಆಧಾರವನ್ನಾಗಿಸಿಕೊಂಡು ಈ ಮಾನದಂಡ ರಚಿಸಲಾಗುತ್ತದೆ. ಮುಂದಿನ ವರ್ಷ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯುವ 12ನೇ ಕಾಮನ್‌ವೆಲ್ತ್ ಸಂಸದೀಯ ಸಂಘದ ಸಮ್ಮೇಳನದಲ್ಲಿ ಈ ಮಾನದಂಡಗಳಿಗೆ ಅಂತಿಮ ರೂಪ ನೀಡಲಾಗುವುದು ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭೆ ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್, ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್, ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು. -ಬಾಕ್ಸ್-
ಪ್ರತಿಪಕ್ಷಗಳಿಂದ ಪತ್ರ ಬಂದಿಲ್ಲಗಂಭೀರ ಪ್ರಕರಣಗಳಲ್ಲಿ ಸತತ 30 ದಿನಗಳಿಗಿಂತ ಹೆಚ್ಚು ಜೈಲು ವಾಸ ಅನುಭವಿಸಿದ ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಸಚಿವರನ್ನು ಹುದ್ದೆಯಿಂದ ವಜಾಗೊಳಿಸುವ ವಿಧೇಯಕದ ಬಗ್ಗೆ ಸಮಾಲೋಚನೆ ನಡೆಸಲು ರೂಪಿಸಲಾಗಿರುವ ಜಂಟಿ ಸದನ ಸಮಿತಿ ಬಹಿಷ್ಕರಿಸಿ ಯಾವುದೇ ಪಕ್ಷ ನನಗೆ ಪತ್ರ ಬರೆದಿಲ್ಲ ಎಂದು ಓಂ ಬಿರ್ಲಾ ಹೇಳಿದರು.-ಬಾಕ್ಸ್-
ಸಿಪಿಎಯಲ್ಲಿ 4 ನಿರ್ಣಯಗಳು-ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ಜನರ ನಂಬಿಕೆ ಹೆಚ್ಚಿಸಲು, ಸದನಗಳಲ್ಲಿನ ಅಸ್ತವ್ಯಸ್ತತೆ ಮತ್ತು ಕಲಾಪಗಳಿಗೆ ಆಗುವ ಅಡಚಣೆ ನಿವಾರಿಸಬೇಕು, ಇದರಿಂದಾಗಿ ಶಾಸಕಾಂಗಗಳು ಸಾರ್ವಜನಿಕ ಕಲ್ಯಾಣದ ವಿಷಯ ಚರ್ಚಿಸಲು ಹೆಚ್ಚಿನ ಸಮಯ ವಿನಿಯೋಗಿಸಬಹುದು.
-ಭಾರತದ ಸಂಸತ್ತಿನ ಅಗತ್ಯ ಬೆಂಬಲದೊಂದಿಗೆ, ರಾಜ್ಯ ಶಾಸಕಾಂಗಗಳ ಸಂಶೋಧನೆ ಮತ್ತು ಇತರೆ ಸಂಬಂಧಿತ ಶಾಖೆಗಳನ್ನು ಬಲಪಡಿಸಬೇಕು. ಶಾಸಕಾಂಗಗಳಲ್ಲಿನ ಎಲ್ಲಾ ಪ್ರಮುಖ ವಿಷಯಗಳ ಕುರಿತು ಸಮಗ್ರ ಡೇಟಾಬೇಸ್ ಅನ್ನು ಸಿದ್ಧಪಡಿಸಬೇಕು.-ಶಾಸಕಾಂಗಗಳಲ್ಲಿ ಸಾಧ್ಯವಾದಷ್ಟು ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಇದರಿಂದ ಪ್ರಜಾಪ್ರಭುತ್ವ ಸಂಸ್ಥೆಗಳ ಕಾರ್ಯವೈಖರಿಯ ಮಾಹಿತಿ ಜನರಿಗೆ ತಿಳಿಯುತ್ತದೆ. ಶಾಸಕಾಂಗ ಸಂಸ್ಥೆಗಳ ದಕ್ಷತೆ ಸುಧಾರಣೆಯಾಗುತ್ತದೆ. ಇದು ನಮ್ಮ ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಜನರ ನಂಬಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ.
-ನಮ್ಮ ದೇಶದ ಜನಸಂಖ್ಯೆಯ ಹೆಚ್ಚಿನ ಭಾಗ ಯುವಕರು ಮತ್ತು ಮಹಿಳೆಯರಿಂದ ಕೂಡಿದೆ. ಆದ್ದರಿಂದ ನಮ್ಮ ಶಾಸಕಾಂಗಗಳು, ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಪ್ರಯತ್ನ ನಡೆಸಬೇಕು.