ಕೃಷಿ ವಿದ್ಯಾರ್ಥಿಗಳಿಂದ ರೈತರಿಗೆ ಬೀಜೋಪಚಾರ ಮಾಹಿತಿ

| Published : Oct 29 2024, 12:52 AM IST / Updated: Oct 29 2024, 12:53 AM IST

ಕೃಷಿ ವಿದ್ಯಾರ್ಥಿಗಳಿಂದ ರೈತರಿಗೆ ಬೀಜೋಪಚಾರ ಮಾಹಿತಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಉಡಮಕಲ್ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯ ರಾಯಚೂರು, ಕೃಷಿ ಮಹಾವಿದ್ಯಾಲಯ ಗಂಗಾವತಿ ವತಿಯಿಂದ ಏರ್ಪಡಿಸಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳು ಗ್ರಾಮದಲ್ಲಿ ಬೀಜೋಪಚಾರದ ವಿಧಾನದ ಕುರಿತು ರೈತರಿಗೆ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಗಂಗಾವತಿ

ತಾಲೂಕಿನ ಉಡಮಕಲ್ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯ ರಾಯಚೂರು, ಕೃಷಿ ಮಹಾವಿದ್ಯಾಲಯ ಗಂಗಾವತಿ ವತಿಯಿಂದ ಏರ್ಪಡಿಸಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳು ಗ್ರಾಮದಲ್ಲಿ ಬೀಜೋಪಚಾರದ ವಿಧಾನದ ಕುರಿತು ರೈತರಿಗೆ ಮಾಹಿತಿ ನೀಡಿದರು.

ಪ್ರಗತಿಪರ ರೈತ ಬಸವರಾಜ ಸಂಡೂರು ಅವರ ಹೊಲಕ್ಕೆ ತೆರಳಿ ಅಲ್ಲಿ ಬೀಜೋಪಚಾರ ಮಾಡುವುದನ್ನು ಹಾಗೂ ಅದರಿಂದ ಆಗುವ ಉಪಯೋಗ ತಿಳಿಸಿದರು. ಜೊತೆಯಲ್ಲಿ ಶಿವಪ್ಪ ಸಂಗನಾಳ ಎಂಬವರ ಹೊಲದಲ್ಲಿಯೂ ಸಹ ಟೈಕೋಗ್ರಾಮದಿಂದ ಮೆಕ್ಕೆಜೋಳಕ್ಕೆ ಬೀಜೋಪಚಾರ ಮಾಡಲಾಯಿತು. ಸಹಾಯಕ ಪ್ರಾಧ್ಯಾಪಕ ಡಾ. ಬದರಿ ಪ್ರಸಾದ್ ಹಾಗೂ ಗಂಗಾಧರ ಬೀಜೋಪಚಾರದ ಉಪಯೋಗ ವಿಸ್ತಾರವಾಗಿ ತಿಳಿಸಿದರು. ಮೊದಲನೆಯದಾಗಿ ಕೀಟಭಾದೆ ಕಡಿಮೆ ಮಾಡುತ್ತದೆ. ಮಣ್ಣಿನ ಕೀಟಗಳನ್ನು ನಿಯಂತ್ರಿಸುತ್ತದೆ ಹಾಗೂ ರೋಗಗಳನ್ನು ತಡೆಗಟ್ಟುತ್ತದೆ. ಅಲ್ಲದೆ ಬೀಜ ಕೊಳೆತ, ಮೊಳಕೆ ರೋಗದಿಂದ ಬೀಜವನ್ನು ರಕ್ಷಿಸುತ್ತದೆ ಮತ್ತು ಮಣ್ಣಿನಲ್ಲಿ ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಹಾಯ ಮಾಡುತ್ತದೆ.

ಇದರ ಜೊತೆಗೆ ಮೋಹಕ ಬಲೆಗಳನ್ನು ಹೊಲದಲ್ಲಿ ಅಳವಡಿಸಲಾಯಿತು ಮತ್ತು ಅದರ ಉಪಯೋಗ ತಿಳಿಸಲಾಯಿತು. ಹೆಣ್ಣು ಕೀಟಗಳು ಗಂಡು ಕೀಟಗಳನ್ನು ಆಕರ್ಷಿಸಲು ಒಂದು ರಾಸಾಯನಿಕ ಹೊರಸೂಸುತ್ತದೆ, ಇದನ್ನು ಫಿರಾಮೋನ್ ಎಂದೂ ಕರೆಯುತ್ತಾರೆ. ಈ ರಾಸಾಯನಿಕವನ್ನು ಕೃತಕವಾಗಿ ತಯಾರಿಸಿ ಮೋಹಕ ಬಲೆಗಳಲ್ಲಿ ಬಳಸಲಾಗುತ್ತದೆ. ಇದರಿಂದಾಗಿ ನಾವು ಸುಲಭವಾಗಿ ಕೀಟಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು, ರಾಸಾಯನಿಕ ಕೀಟ ನಾಶಕಗಳ ಮೊರೆ ಹೋಗುವುದನ್ನು ತಡೆಗಟ್ಟಬಹುದು ಜೊತೆಗೆ ಮಣ್ಣಿನ ಆರೋಗ್ಯವನ್ನು ಸಹ ರಕ್ಷಿಸಬಹುದು ಎಂದು ಮಾಹಿತಿ ನೀಡಿದರು.