ರಕ್ತದಾನ ಶಿಬಿರದೊಂದಿಗೆ ವಿಮೆ ಮಹತ್ವ ಕುರಿತು ಮಾಹಿತಿ

| Published : Sep 20 2025, 01:00 AM IST

ಸಾರಾಂಶ

ತಾಲೂಕು ರೆಡ್‌ಕ್ರಾಸ್ ಸಂಸ್ಥೆ ಸಭಾಪತಿ ಭರತ್ ಕುಮಾರ್ ಎಚ್.ಜಿ ಮಾತನಾಡಿ, ನಮ್ಮ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಸೇವನೆಯ ಅಡ್ಡ ಪರಿಣಾಮಗಳು ಹಾಗೂ ಮಾದಕ ದ್ರವ್ಯ ಮನುಷ್ಯನ ಜೀವನವನ್ನು ಹೀಗೆ ನಾಶ ಮಾಡುತ್ತದೆ ಎಂಬುದರ ಬಗ್ಗೆ ಆರಕ್ಷಕ ವೃತ್ತ ನಿರೀಕ್ಷಕ ಸಂತೋಷ್‌ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು ಎಂದರು. ತಾಲೂಕು ರೆಡ್ ಕ್ರಾಸ್ ಸಂಸ್ಥೆಯು ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಎಚ್. ಪಿ ಮೋಹನ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕು ರೆಡ್ ಕ್ರಾಸ್ ಸಂಸ್ಥೆಯು ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಎಚ್. ಪಿ ಮೋಹನ್ ತಿಳಿಸಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ತಾಲೂಕು ಘಟಕದ ವತಿಯಿಂದ ಆರಕ್ಷಕ ಠಾಣೆ ವೃತ್ತ ಕಚೇರಿ ಹಿರೀಸಾವೆ ಹಾಗೂ ವಿ ಸೆಕ್ಯೂರ್ ಕ್ವಿಕ್ ಇನ್ಶೂರೆನ್ಸ್ ಮೈಸೂರು ಮತ್ತು ನಾರಾಯಣ ಆಸ್ಪತ್ರೆ ಮೈಸೂರು ಹಾಗೂ ಸ್ವಯಂ ಪ್ರೇರಿತ ರಕ್ತ ಕೇಂದ್ರ ಚನ್ನರಾಯಪಟ್ಟಣ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ತಾಲೂಕಿನ ಹಿರೀಸಾವೆಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ನೂರಾರು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತಿರುವುದು ಸಂತೋಷದ ವಿಷಯ ಎಂದು ತಿಳಿಸಿದರು.

ಸರ್ಕಾರಿ ಆಡಳಿತ ವೈದ್ಯಾಧಿಕಾರಿ ಡಾ. ಯುವರಾಜ್ ಬಿ.ಆರ್‌ ಮಾತನಾಡಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ನಮ್ಮ ಚನ್ನರಾಯಪಟ್ಟಣದಲ್ಲಿ ಸಮಾಜಮುಖಿ ಹಾಗೂ ಸಮಾಜಸೇವೆಯಲ್ಲಿ ನಿರತರಾಗಿರುವುದು ಹೆಮ್ಮೆಯ ವಿಷಯ ಮತ್ತು ಈ ಸಂಸ್ಥೆಯು ಹಲವಾರು ಆರೋಗ್ಯ ಶಿಬಿರವನ್ನು ಆಯೋಜಿಸುತ್ತಿರುವುದು ನಮ್ಮ ತಾಲೂಕಿನ ಎಲ್ಲಾ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತಿದೆ ಎಂದು ತಿಳಿಸಿದರು.

ಡಾ. ಶಿವಸ್ವಾಮಿ ಬಿ. ಎನ್ ಮಾತನಾಡಿ, ನಮ್ಮ ತಾಲೂಕಿನಲ್ಲಿ ಗ್ರಾಮೀಣ ಭಾಗದ ಸಾರ್ವಜನಿಕರು ಹೆಚ್ಚಿರುವ ಕಾರಣ ಇಂತಹ ಆರೋಗ್ಯ ಶಿಬಿರವು ಅತ್ಯಗತ್ಯ ಇದನ್ನು ಅರಿತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉತ್ತಮ ಸೇವೆಯನ್ನು ಸಲ್ಲಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹಿರೀಸಾವೆ ಆರಕ್ಷಕ ವೃತ್ತ ನಿರೀಕ್ಷಕರು ಸಂತೋಷ್.ಎಸ್ ಮಾತನಾಡಿ, ಇಂದು ನಮ್ಮ ಜಿಲ್ಲೆಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.ತಾಲೂಕು ರೆಡ್‌ಕ್ರಾಸ್ ಸಂಸ್ಥೆ ಸಭಾಪತಿ ಭರತ್ ಕುಮಾರ್ ಎಚ್.ಜಿ ಮಾತನಾಡಿ, ನಮ್ಮ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಸೇವನೆಯ ಅಡ್ಡ ಪರಿಣಾಮಗಳು ಹಾಗೂ ಮಾದಕ ದ್ರವ್ಯ ಮನುಷ್ಯನ ಜೀವನವನ್ನು ಹೀಗೆ ನಾಶ ಮಾಡುತ್ತದೆ ಎಂಬುದರ ಬಗ್ಗೆ ಆರಕ್ಷಕ ವೃತ್ತ ನಿರೀಕ್ಷಕ ಸಂತೋಷ್‌ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು ಎಂದರು.ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿ ಸೆಕ್ಯೂರ್‌ ಕ್ವಿಟ್ ಇನ್ಸೂರೆನ್ಸ್ ಮೈಸೂರು ಇವರ ವತಿಯಿಂದ ಸಾರ್ವಜನಿಕರಿಗೆ ಇನ್ಶೂರೆನ್ಸ್ ಎಂದರೇನು, ಇನ್ಶೂರೆನ್ಸ್ ಅವಶ್ಯಕತೆ ಏನು, ಇನ್ಶೂರೆನ್ಸ್ ಏಕೆ ಮಾಡಿಸಬೇಕು ಹಾಗೂ ಇನ್ಶೂರೆನ್ಸ್ ಉಪಯೋಗವೇನು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಚಲನಚಿತ್ರ ನಟಿ ಶುಭ ರಕ್ಷಾ ಇವರಿಂದ ಸಾರ್ವಜನಿಕರಿಗೆ ವಿಶೇಷ ಮಾಹಿತಿಯೊಂದಿಗೆ ಅರಿವು ಮೂಡಿಸಲಾಯಿತು.

ವಿ ಸೆಕ್ಯೂರ್ ಕ್ವಿಟ್ ಇನ್ಶೂರೆನ್ಸ್ ಮುಖ್ಯಾಧಿಕಾರಿ ಮಹದೇವ್ ಮಾತನಾಡಿ, ಇನ್ಶೂರೆನ್ಸ್ ಮಾಡಿಸುವುದರಿಂದ ಸಾರ್ವಜನಿಕರಿಗೆ ಆಗುವ ಅನುಕೂಲ ಹಾಗೂ ಅನಿವಾರ್ಯ ಮತ್ತು ವಿಮೆ ನವೀಕರಣ ಯಾಕೆ ಮಾಡಬೇಕು ಮತ್ತು ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಪ್ರಾಣಹಾನಿ ಅಥವಾ ಅಂಗ ವೈಫಲ್ಯ ಸಮಸ್ಯೆ ಎದುರಾದರೆ ಇನ್ಶೂರೆನ್ಸ್ ಸಂಸ್ಥೆಯ ವತಿಯಿಂದ ಸಾರ್ವಜನಿಕರಿಗೆ ಆಗುವ ಅನುಕೂಲವನ್ನು ತಿಳಿಸಿದರು. ಸಾರ್ವಜನಿಕರು ಇನ್ಶೂರೆನ್ಸ್ ಪಡೆದುಕೊಳ್ಳುವ ಮುಂಚೆ ಇನ್ಶೂರೆನ್ಸ್ ಎಂದರೇನು ಮತ್ತು ಅದರ ಉಪಯೋಗವನ್ನು ತಿಳಿದುಕೊಂಡು ಉತ್ತಮ ಗುಣಮಟ್ಟದ ಸೇವೆ ನೀಡುವ ಇನ್ಶೂರೆನ್ಸ್ ಸಂಸ್ಥೆಯಲ್ಲಿ ವಿಮೆ ಮಾಡಿಸುವುದು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿಕೊಟ್ಟರು.ವೀ ಸೆಕ್ಯೂರ್ ಕ್ವಿಕ್ ಇನ್ಶೂರೆನ್ಸ್ ಮೈಸೂರು ಇವರ ವತಿಯಿಂದ ಕಾರ್ಯಕ್ರಮದ ದಿನದಂದು ನೋಂದಣಿ ಮಾಡಿದ ದ್ವಿಚಕ್ರ ವಾಹನದಲ್ಲಿ ೨೫ ದ್ವಿಚಕ್ರ ವಾಹನ ಮಾಲೀಕರಿಗೆ ಲಕ್ಕಿ ಡ್ರಾ ಮೂಲಕ ಉಚಿತ ವಿಮೆ ಮಾಡಿಕೊಡುವುದಾಗಿ ಭರವಸೆ ಕೊಟ್ಟರು. ೩೧೭ಕ್ಕೂ ಹೆಚ್ಚು ಸಾರ್ವಜನಿಕರಿಗೆ ಉಚಿತ ಬಿ.ಪಿ ಶುಗರ್, ಹೃದಯ ತಪಾಸಣೆ, ಕಣ್ಣಿನ ತಪಾಸಣೆ, ಶ್ವಾಸಕೋಶ ತಪಾಸಣೆ, ಹಾಗೂ ಇತರೆ ಕಾಯಿಲೆಗೆ ವೈದ್ಯಕೀಯ ಸೇವೆಯನ್ನು ಒದಗಿಸಲಾಯಿತು ಎಂದು ತಿಳಿಸಿದರು.ಮೈಸೂರಿನ ನಾರಾಯಣ ಆಸ್ಪತ್ರೆಯ ಡಾ. ಗುಲ್ಜಾರ್‌, ಡಾ. ಬಿಂದ್ಯಾ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಜಬಿವುಲ್ಲಾ ಬೇಗ್ ಸಿ.ಎನ್, ಖಜಾಂಚಿ ಕಿಶೋರ್ ಕುಮಾರ್‌ ಸಿ.ಎಸ್, ನಾಗರತ್ನಮ್ಮ, ಬಾಬಣ್ಣ, ಆಶಾ ಕುಮಾರಿ, ಜಯೇಂದ್ರ ಕುಮಾರ್, ಉದಯ್ ಕುಮಾರ್, ಪೂರ್ಣಿಮಾ, ಬಿ.ವಿ ವಿಜಯ್, ಉದಯ್ ಶಂಕರ್, ಮಂಜು, ಉಮೇಶ್ ಶಿವಕುಮಾರ್ ಮತ್ತಿತರಿದ್ದರು.