ಬೀದಿ ಬದಿ ವ್ಯಾಪಾರಸ್ಥರ ಹಿತರಕ್ಷಣೆಗೆ ಸರ್ಕಾರದಿಂದ ವಿವಿಧ ಯೋಜನೆ

| Published : Jan 12 2024, 01:45 AM IST

ಬೀದಿ ಬದಿ ವ್ಯಾಪಾರಸ್ಥರ ಹಿತರಕ್ಷಣೆಗೆ ಸರ್ಕಾರದಿಂದ ವಿವಿಧ ಯೋಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಳೆ, ಚಳಿ, ಗಾಳಿಯನ್ನು ಲೆಕ್ಕಿಸದೇ ಬೀದಿ ಬದಿ ಕುಳಿತು ನಿತ್ಯ ವ್ಯಾಪಾರ ಮಾಡುವವರ ಕೊಡುಗೆ ಸಮಾಜಕ್ಕೆ ಸಾಕಷ್ಟಿದೆ. ಹಾಗಾಗಿ, ಅವರ ಹಿತರಕ್ಷಣೆಗೆ ಸರ್ಕಾರ ಹಲವಾರು ಕಾನೂನು ಹಾಗೂ ಯೋಜನೆಗಳನ್ನು ರೂಪಿಸಿದೆ.

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಮಳೆ, ಚಳಿ, ಗಾಳಿಯನ್ನು ಲೆಕ್ಕಿಸದೇ ಬೀದಿ ಬದಿ ಕುಳಿತು ನಿತ್ಯ ವ್ಯಾಪಾರ ಮಾಡುವವರ ಕೊಡುಗೆ ಸಮಾಜಕ್ಕೆ ಸಾಕಷ್ಟಿದೆ. ಹಾಗಾಗಿ, ಅವರ ಹಿತರಕ್ಷಣೆಗೆ ಸರ್ಕಾರ ಹಲವಾರು ಕಾನೂನು ಹಾಗೂ ಯೋಜನೆಗಳನ್ನು ರೂಪಿಸಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಕೆ. ಮುಗಳಿ ಹೇಳಿದರು.

ಪಟ್ಟಣದ ಪುರಸಭೆಯ ಕಾರ್ಯಾಲಯದಲ್ಲಿ ಜಿಲ್ಲಾಡಳಿತ, ಕೌಶಲ್ಯ ಅಭಿವೃದ್ಧಿ, ಉದ್ದಿಮೆಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಭಾರತ ಸರ್ಕಾರದ ಡೇ ನಲ್ಮ್ ಯೋಜನೆಯಲ್ಲಿ ಬರುವ ಬೀದಿಬದಿ ವ್ಯಾಪಾರ ಮಾಡುವವರಿಗೆ, ಸಾಲ ಸೌಲಭ್ಯ ನೀಡುವ ಬಗ್ಗೆ ಹಾಗೂ ಭಾರತ ಸರ್ಕಾರದ ಸಾಮಾಜಿಕ ಸುರಕ್ಷಾ ಯೋಜನೆಯ ಕುರಿತು ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೀದಿ ಬದಿ ವ್ಯಾಪಾರಸ್ಥರಿಗೆ ಆರೋಗ್ಯ, ಶುಚಿತ್ವ ಹಾಗೂ ಸಂಚಾರಿ ನಿಯಮಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಬೀದಿ ಬದಿ ವ್ಯಾಪಾರಿಗಳ ಸಂರಕ್ಷಣೆ ಮತ್ತು ಕಾಯ್ದೆ ಹಾಗೂ ಕಾನೂನಿನಡಿ ಪಟ್ಟಣದ ಬೀದಿ ವ್ಯಾಪಾರಿಗಳು ವ್ಯಾಪಾರ ಸಮಿತಿಯನ್ನು ಹೊಸದಾಗಿ ರಚಿಸುವುದು ಅವಶ್ಯವಾಗಿದೆ ಎಂದರು.

ಯೋಜನೆಯ ಸಂಪನ್ಮೂಲ ವ್ಯಕ್ತಿ ರಾಜು ಕೆಂಭಾವಿ ಮಾತನಾಡಿ, ಎಲ್ಲ ಬೀದಿ ಬದಿ ವ್ಯಾಪಾರಿಗಳು ಗುರುತಿನ ಚೀಟಿ ಹಾಗೂ ವ್ಯಾಪಾರ ಮಾರಾಟ ಪತ್ರವನ್ನು ಪಡೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಎಲ್ಲ ದಾಖಲಾತಿಗಳನ್ನು ಪುರಸಭೆಗೆ ನೀಡಿ ಸರ್ಕಾರಿ ಸವಲತ್ತುಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಬೇಕೆಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಮುದಾಯ ಸಂಘಟಕರಾದ ಎಸ್.ಎಚ್. ಪಾಟೀಲ್, ವಿವಿಧ ಬ್ಯಾಂಕ್ ವ್ಯವಸ್ಥಾಪಕರು, ಬೀದಿ ಬದಿಯ ವ್ಯಾಪಾರಸ್ಥರು, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು.