ಮೂಲಸೌಕರ್ಯ ವಂಚಿತ ಅಂಬಟಿ ಗ್ರಾಮ: ಮತದಾನ ಬಹಿಷ್ಕಾರ ಘೋಷಣೆ

| Published : Apr 19 2024, 01:03 AM IST

ಮೂಲಸೌಕರ್ಯ ವಂಚಿತ ಅಂಬಟಿ ಗ್ರಾಮ: ಮತದಾನ ಬಹಿಷ್ಕಾರ ಘೋಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಟ್ಟಂಗಾಲ ಗ್ರಾ.ಪಂ. ವ್ಯಾಪ್ತಿಯ ಅಂಬಟ್ಟಿ ಗ್ರಾಮಸ್ಥರು ಮತ ಬಹಿಷ್ಕಾರ ಕುರಿತ ಬ್ಯಾನರ್ ಗಳನ್ನು ಇದೀಗ ಮುಖ್ಯ ರಸ್ತೆಯಲ್ಲಿ ಅಳವಡಿಸಿದ್ದು, ‘ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ, ಚರಂಡಿ, ಶುದ್ಧ ಕುಡಿಯುವ ನೀರು, ದಾರಿದೀಪ ಮೊದಲಾದ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಗ್ರಾಮಕ್ಕೆ ಕಲ್ಪಿಸುವವರೆಗೂ ಯಾವುದೇ ಪಕ್ಷಗಳು ಮತ್ತು ಮುಖಂಡರು ಮತಯಾಚನೆಗಾಗಿ ನಮ್ಮ ಗ್ರಾಮವನ್ನು ಪ್ರವೇಶಿಸಬೇಡಿ’ ಎಂದು ಘೋಷಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಕಳೆದ 30 ವರ್ಷಗಳಿಂದ ಗ್ರಾಮಕ್ಕೆ ತೀರಾ ಅಗತ್ಯವಿರುವ ಸರ್ಕಾರದ ಮತ್ತು ಜನಪ್ರತಿನಿಧಿಗಳ ಮೂಲಭೂತ ಸೌಲಭ್ಯಗಳ ತಾರತಮ್ಯ ವಿರೋಧಿಸಿ ಬಿಟ್ಟಂಗಾಲ ಗ್ರಾ.ಪಂ. ವ್ಯಾಪ್ತಿಯ ಅಂಬಟ್ಟಿ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಮತ ಬಹಿಷ್ಕಾರ ಕುರಿತ ಬ್ಯಾನರ್ ಗಳನ್ನು ಇದೀಗ ಮುಖ್ಯ ರಸ್ತೆಯಲ್ಲಿ ಗ್ರಾಮಸ್ಥರು ಅಳವಡಿಸಿದ್ದು, ‘ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ, ಚರಂಡಿ, ಶುದ್ಧ ಕುಡಿಯುವ ನೀರು, ದಾರಿದೀಪ ಮೊದಲಾದ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಗ್ರಾಮಕ್ಕೆ ಕಲ್ಪಿಸುವವರೆಗೂ ಯಾವುದೇ ಪಕ್ಷಗಳು ಮತ್ತು ಮುಖಂಡರು ಮತಯಾಚನೆಗಾಗಿ ನಮ್ಮ ಗ್ರಾಮವನ್ನು ಪ್ರವೇಶಿಸಬೇಡಿ’ ಎಂದು ಬ್ಯಾನರ್‌ನಲ್ಲಿ ಬರೆದು ಪ್ರದರ್ಶಿಸಲಾಗಿದೆ.

ಗ್ರಾಮಕ್ಕೆ ಕನಿಷ್ಠ ಮೂಲಸೌಕರ್ಯ ಒದಗಿಸಲು ಇದುವರೆಗೂ ಸಾಧ್ಯವಾಗದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅತಿ ದೊಡ್ಡ ದುರಂತ. ಬಹುತೇಕ ಬಡತನ ರೇಖೆಗಿಂತ ಕೆಳಗಿನ ಜನರು ಹೆಚ್ಚಾಗಿ ನೆಲೆಸಿರುವ ಈ ಗ್ರಾಮದಲ್ಲಿ ಸರ್ಕಾರದ ಕನಿಷ್ಠ ಸೌಲಭ್ಯ ಒದಗಿಸಿ ಎಂದು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಮನವಿ ನೀಡುತ್ತಾ ಬಂದಿದ್ದರೂ ಅಂಬಟ್ಟಿ ಗ್ರಾಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಈ ಕಾರಣದಿಂದ ಇದೀಗ ಗ್ರಾಮವಾಸಿಗಳಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ ಬಹಿಷ್ಕರಿಸುವುದು ಅನಿವಾರ್ಯವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶ ಸೇವೆಯ ಭಾಗವಾಗಿ ಸೇನೆಯಲ್ಲಿ ಕರ್ತವ್ಯದಲ್ಲಿದ್ದಾಗ ಭಾರತದ ಹಲವಾರು ರಾಜ್ಯಗಳ ಕುಗ್ರಾಮಗಳನ್ನು ಖುದ್ದಾಗಿ ಕಂಡಿದ್ದೇನೆ. ಆದರೆ ಅಂಬಟ್ಟಿ ಗ್ರಾಮದಂತಹ ನಿರ್ಲಕ್ಷಿತ ಪ್ರದೇಶವನ್ನು ನೋಡಿರಲಿಲ್ಲ. ಆಳುವ ವರ್ಗ ಕುಗ್ರಾಮವೊಂದನ್ನು ಈ ರೀತಿಯಾಗಿ ನಿರ್ಲಕ್ಷಿಸಬಾರದಿತ್ತು. ಚುನಾವಣೆ ಸಂದರ್ಭದಲ್ಲಿ ಮತಯಾಚನೆಗೆ ಮಾತ್ರ ಬರುವ ರಾಜಕೀಯ ಪಕ್ಷದ ಪ್ರಮುಖರು, ಗ್ರಾಮದ ಸ್ಥಿತಿಯನ್ನು ಕಂಡು ಕೂಡಲೇ ಪರಿಹಾರ ಒದಗಿಸುವುದಾಗಿ ಸುಳ್ಳು ಭರವಸೆಯನ್ನು ನೀಡಿ ಹೋದರೆ ಮತ್ತೆ ಅಂಬಟ್ಟಿ ಗ್ರಾಮವನ್ನು ಸಂಪೂರ್ಣವಾಗಿ ಮರೆತು ಬಿಡುತ್ತಾರೆ ಎಂದು ಇಲ್ಲಿನ ನಿವಾಸಿ ಮಾಜಿ ಸೈನಿಕ ಮುಸ್ತಫಾ ಆರೋಪಿಸಿದ್ದಾರೆ.ಕಳೆದ ಹಲವು ವರ್ಷಗಳಿಂದ ಎಲ್ಲ ರಾಜಕೀಯ ಪಕ್ಷಗಳೂ ಇದನ್ನೇ ಮಾಡಿಕೊಂಡು ಬಂದಿವೆ. ಆದ್ದರಿಂದ ನಮಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣಿಗಳು ನೀಡುವ ಭರವಸೆಗಳ ಬಗ್ಗೆ ಯಾವುದೇ ನಂಬಿಕೆ ಉಳಿದಿಲ್ಲ. ಈ ಕಾರಣದಿಂದ ಈ ಚುನಾವಣೆಯಲ್ಲಿ ಮತ ಬಹಿಷ್ಕಾರದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಸ್ತಫಾ ತಿಳಿಸಿದ್ದಾರೆ.