ಮೂಲಸೌಲಭ್ಯ ವಂಚಿತ ಹರಪನಹಳ್ಳಿ ತಾಲೂಕು ಕ್ರೀಡಾಂಗಣ

| Published : Apr 04 2024, 01:06 AM IST

ಸಾರಾಂಶ

ಖೋಖೋ, ಇತರೆ ಕ್ರೀಡೆಗಳಲ್ಲಿ ಇಲ್ಲಿಯ ಕ್ರೀಡಾಪಟುಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಲು ತರಬೇತಿ ಪಡೆದಿದ್ದ ತಾಲೂಕು ಕ್ರೀಡಾಂಗಣ ಈಚೆಗೆ ಮೂಲಸೌಕರ್ಯದಿಂದ ವಂಚಿತಗೊಂಡಿದೆ.

ಬಿ.ರಾಮಪ್ರಸಾದ್ ಗಾಂಧಿ

ಹರಪನಹಳ್ಳಿ: ಖೋಖೋ, ಇತರೆ ಕ್ರೀಡೆಗಳಲ್ಲಿ ಇಲ್ಲಿಯ ಕ್ರೀಡಾಪಟುಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಲು ತರಬೇತಿ ಪಡೆದಿದ್ದ ತಾಲೂಕು ಕ್ರೀಡಾಂಗಣ ಈಚೆಗೆ ಮೂಲಸೌಕರ್ಯದಿಂದ ವಂಚಿತಗೊಂಡಿದೆ.

ಪಟ್ಟಣದ ಅಯ್ಯನಕೆರೆಗೆ ಹೊಂದಿಕೊಂಡು ಸುಮಾರು 7 ಎಕರೆ ಪ್ರದೇಶದಲ್ಲಿರುವ ಈ ಕ್ರೀಡಾಂಗಣ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2002 ರಲ್ಲಿ ಆರಂಭವಾಗಿತ್ತು.

ದುರ್ವಾಸನೆಯಿಂದ ಮುಕ್ತಿಗೊಳಿಸಿ:

ಕ್ರೀಡಾಂಗಣಕ್ಕೆ ಹೊಂದಿಕೊಂಡ ಅಯ್ಯನಕೆರೆ ತುಂಬೆಲ್ಲ ಕಸ, ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ವಸ್ತುಗಳು ತುಂಬಿಕೊಂಡು ದುರ್ವಾಸನೆ ಬೀರುತ್ತಿರುವ ಪರಿಣಾಮ ನಿತ್ಯ ವಾಯುವಿಹಾರಕ್ಕಾಗಿ ಕ್ರೀಡಾಂಗಣಕ್ಕೆ ಬರುತ್ತಿದ್ದ ನೂರಾರು ಜನರು ಬೇಸತ್ತಿದ್ದು, ಬರುತ್ತಿಲ್ಲ. ಅಷ್ಟೇ ಅಲ್ಲ ಕ್ರೀಡಾಳುಗಳಿಗೂ ಇಲ್ಲಿ ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಅಳಲು ಕೇಳಿ ಬರುತ್ತಿದೆ.

ಕುಡಿಯಲು ನೀರಿಲ್ಲ:

ಕ್ರೀಡಾಂಗಣದಲ್ಲಿ ವಲಯ, ತಾಲೂಕು, ವಿವಿ, ಜಿಲ್ಲಾ ಮಟ್ಟದಂತಹ ಕ್ರೀಡೆಗಳು ನಡೆಯುತ್ತವೆ. ಆದರೆ ಇಲ್ಲಿಗೆ ಆಗಮಿಸುವ ಕ್ರೀಡಾಪಟುಗಳಿಗಾಗಲಿ, ವಾಯುವಿಹಾರಿಗಳಿಗೆ ದಾಹ ತೀರಿಸಲು ಕುಡಿಯಲು ನೀರಿಲ್ಲ. ಇದರಿಂದ ಅನೇಕರು ತಾವು ಬರುವಾಗ ನೀರಿನ ಬಾಟಲ್‌ಗಳನ್ನು ಕೈಯಲ್ಲಿ ಹಿಡಿದು ಬರಬೇಕಿದೆ. ದೊಡ್ಡ ಮಟ್ಟದ ಕ್ರೀಡೆಗಳು ನಡೆದಲ್ಲಿ ಮಾತ್ರ ಪುರಸಭೆ ಹಾಗೂ ಖಾಸಗಿ ನೀರಿನ ಸೌಲಭ್ಯ ಮಾಡಿಕೊಳ್ಳುತ್ತಾರೆ.

ಒಳಕ್ರೀಡಾಂಗಣ ಇಲ್ಲ:

ತಾಲೂಕಿನ ಕ್ರೀಡಾಂಗಣದ ಒಳಾಂಗಣದಲ್ಲಿ ಚದುರಂಗ, ಶಟಲ್, ಬಾಲ್‌ಬ್ಯಾಡ್ಮಿಂಟನ್‌, ಬಾಸ್ಕೆಟ್ ಬಾಲ್, ವಾಲಿಬಾಲ್, ಕಬಡ್ಡಿ, ವೇಟ್‌ಲಿಫ್ಟಿಂಗ್‌, ಕೇರಂ ಕ್ರೀಡೆಗಳು ನಡೆಯುತ್ತವೆ. ಆದರೆ ಸೌಲಭ್ಯಗಳಿಲ್ಲ.

ಕ್ರೀಡಾಂಗಣಕ್ಕೆ ಸೌಲಭ್ಯ ನೀಡಲು ಒತ್ತಾಯಿಸಿ ತಾಲೂಕು ದೈಹಿಕ ಶಿಕ್ಷಕ್ಷರ ಸಂಘ, ಸಾರ್ವಜನಿಕರು, ಕ್ರೀಡಾಪಟುಗಳು ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ.

ಕ್ರೀಡಾ ಸಾಮಗ್ರಿ ಕೊರತೆ:

ಬಾಲ್‌ನೆಟ್, ಹೈಜಂಪ್ ಸ್ಟಾಂಡ್ ವಿತ್ ಬಾರ್, ಶಾಟ್‌ಪುಟ್, ಡಿಸ್ಕ್, ಜಾವೆಲಿನ್‌ ಥ್ರೋ ಸ್ಟೀಕ್, ಹ್ಯಾಮರ್ ಥ್ರೋ, ಹ್ಯಾಡಲ್ಸ್, ಖೋಖೋ ಪೋಲ್ ಬೇಕಾಗಿದೆ. ಜತೆಗೆ ಜಿಮ್ ಸಾಮಗ್ರಿಗಳು ದುರಸ್ತಿಯಲ್ಲಿವೆ.

ಸಿಬ್ಬಂದಿ ಕೊರತೆ:

ತಾಲೂಕು ಕ್ರೀಡಾಂಗಣಕ್ಕೆ ಕನಿಷ್ಠ 3 ಸಿಬ್ಬಂದಿ ಬೇಕು. ತಾಲೂಕಿನಲ್ಲಿ ಹೊರಗುತ್ತಿಗೆ ಆದಾರದಲ್ಲಿ ಗುರುತುಗಾರ, ಕಾವಲುಗಾರ ಸೇರಿ ಇಬ್ಬರು ಸಿಬ್ಬಂದಿ ಇದ್ದಾರೆ. ಅವರಿಗೆ ಸರಿಯಾದ ವೇತನ ಸಿಗುತಿಲ್ಲ. ಸಮಾನ ವೇತನ ಅಗತ್ಯವಿದೆ.

ಕಾಂಪೌಂಡ್ ಶಿಥಿಲ:

ಕ್ರೀಡಾಂಗಣದ ಸುತ್ತಲಿನ ಕಾಂಪೌಂಡ್ ಹಳೆಯದಾಗಿದ್ದು, ಶಿಥಿಲಗೊಂಡಿದೆ. ಈಗಾಗಲೇ ಶೌಚಾಲಯದ ಹಿಂಭಾಗ ಬಿದ್ದಿದೆ.

ಶಾಸಕರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಒಳಾಂಗಣ ನಿರ್ಮಾಣ, ಕ್ರೀಡಾಪಟುಗಳ ತರಬೇತಿಗೆ ಸಮರ್ಪಕ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕು ಎನ್ನುವುದು ಕ್ರೀಡಾಪಟುಗಳ ಆಗ್ರಹ.

ತಾಲೂಕು ಕ್ರೀಡಾಂಗಣಕ್ಕೆ ಮೂಲಸೌಕರ್ಯ, ಕ್ರೀಡಾ ಸಾಮಗ್ರಿ, ತರಬೇತುದಾರರ ಅಗತ್ಯವಿದೆ. ಅಂಕಣಗಳ ದುರಸ್ತಿಯಾಗಬೇಕು. ಇದರಿಂದ ಉತ್ತಮ ಕ್ರೀಡಾಂಗಣವಾಗಲಿದೆ ಎನ್ನುತ್ತಾರೆ ಗುರುತುಗಾರ ಮಂಜುನಾಥ.