ಸಾರಾಂಶ
ಹನೂರು ಪಟ್ಟಣದಲ್ಲಿ ನೂತನ ಗ್ರಾಮ ಘಟಕಗಳ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಸಭೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ನೇತೃತ್ವದಲ್ಲಿ ಜರುಗಿತು.
ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣದ ಕೇಂದ್ರ ಸ್ಥಾನದಲ್ಲಿ ರೈತ ಸಂಘದ ನೂತನ ಅಧ್ಯಕ್ಷ ಮಾದಪ್ಪ ನೇತೃತ್ವದಲ್ಲಿ ಹಸಿರು ಶಾಲು ದೀಕ್ಷೆ ಕಾರ್ಯಕ್ರಮ ನಡೆಯಿತುಹನೂರು ಪಟ್ಟಣದ ವಿವೇಕಾನಂದ ಶಾಲಾ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ನೂತನ ಘಟಕವನ್ನು ಉದ್ಘಾಟಿಸಿದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ 96 ಮಂದಿ ರೈತರಿಗೆ ಹಸಿರು ಶಾಲು ದೀಕ್ಷೆ ನೀಡುವ ಮೂಲಕ ಸಂಘಟನೆಗೆ ಆಹ್ವಾನಿಸಿದರು.
ಈ ವೇಳೆ ಮಾತನಾಡಿದ ಅವರು, ಹನೂರು ಸುತ್ತಮುತ್ತಲಿನ ಗ್ರಾಮಗಳಾದ ವೈಶಂಪಾಳ್ಯ, ಬೆಳ್ತೂರು, ಉದ್ದನೂರು ಮಹಾಲಿಂಗನಕಟ್ಟೆ ಸೇರಿ ನಾನಾ ಗ್ರಾಮಗಳ ರೈತರು ಒಗ್ಗೂಡಿ ರೈತ ಸಂಘವನ್ನು ಹನೂರು ಕೇಂದ್ರ ಸ್ಥಾನದಲ್ಲಿ ರಚನೆ ಮಾಡಿರುವುದು ಒಂದು ಉತ್ತಮ ಬೆಳವಣಿಗೆ. ಗ್ರಾಮದಲ್ಲಿನ ಮೂಲಭೂತ ಸೌಲಭ್ಯಗಳು ಹಾಗೂ ಸರ್ಕಾರದ ಯೋಜನೆಗಳನ್ನು ಪಡೆಯಲು ಸಂಘಟನೆಗೆ ಹೆಚ್ಚು ಬಲ ಬಂದಂತೆ ಆಗುತ್ತದೆ ಎಂದರು. ಹನೂರು ತಾಲೂಕು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ಗಡಿ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಹಾಗೂ ಗ್ರಾಮಸ್ಥರು ದಿನ ನಿತ್ಯ ಒಂದಲ್ಲ ಒಂದು ಸಮಸ್ಯೆಯಿಂದ ಪರಿತಪಿಸುತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸುವಂತೆ ಮಾಡಬೇಕು. ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳು ಆಹಾರ, ನೀರು ಅರಸಿ ಗ್ರಾಮದತ್ತ ಬರುತ್ತಿವೆ. ಇದಕ್ಕೆ ಪರಿಹಾರವಾಗಿ ಹೆಚ್ಚಿನ ಸಿಬ್ಬಂದಿ ನಿಯೋಜನೆಗೊಳಿಸುವಂತೆ ಒತ್ತಾಯಿಸಿ ಆ ಮೂಲಕ ಬೆಳೆ ಹಾಗೂ ಪ್ರಾಣ ಹಾನಿಯನ್ನು ತಡೆಯಬೇಕು ಎಂದು ಒತ್ತಾಯಿಸಿದರು.ನಂತರ ಚೆಸ್ಕಾಂ ಕಚೇರಿಗೆ ತೆರಳಿ ಅಧಿಕಾರಿಗಳ ಜೊತೆ ಮಾತನಾಡಿದ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್, ದಿನನಿತ್ಯ ರೈತರಿಗೆ ರಾತ್ರಿ 12 ರಿಂದ ಬೆಳಗಿನ ಜಾವ ಮೂರರವರೆಗೆ ವಿದ್ಯುತ್ ನಿಲುಗಡೆಗೊಳಿಸುತ್ತಿರುವುದರಿಂದ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ತತ್ತರಿಸುವಂತಾಗಿದೆ. ಕಗ್ಗತ್ತಲಿನಲ್ಲಿ ಗ್ರಾಮಗಳು ಮತ್ತು ತೋಟದ ಮನೆಯ ರೈತರು ಸಂಕಷ್ಟಕ್ಕೀಡಾಗಿದ್ದು ರಾತ್ರಿ ವೇಳೆ ವಿದ್ಯುತ್ ನಿಲುಗಡೆಗೊಳಿಸದೆ ಪೂರೈಸಬೇಕು ಇಲ್ಲದಿದ್ದರೆ ಕಚೇರಿ ಮುಂಭಾಗ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಚೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಅಂಬಳೆ ಶಿವುಕುಮಾರ್, ಗುಳ್ಯ ರಾಜು,ಶ್ರೀನಿವಾಸ್ ಸೇರಿದಂತೆ ಹಲವರು ಹಾಜರಿದ್ದರು.