ಬರ ಪರಿಹಾರ ವಿತರಣೆಯಲ್ಲಿ ಬಿಜೆಪಿಯಿಂದ ಅನ್ಯಾಯ

| Published : Apr 29 2024, 01:36 AM IST

ಸಾರಾಂಶ

ನಾವು ಕೇಂದ್ರ ಸರ್ಕಾರಕ್ಕೆ ಬರ ಪರಿಹಾರದ ಹಣ ಕೇಳುತ್ತಿದ್ದೇವೆ, ಹೊರತು ಭಿಕ್ಷೆ ಕೇಳುತ್ತಿಲ್ಲ.

ಗದಗ: ರಾಜಕೀಯ ದುರುದ್ದೇಶದಿಂದ ಬಿಜೆಪಿ ರಾಜ್ಯಕ್ಕೆ ಬರಬೇಕಿದ್ದ ಬರ ಪರಿಹಾರ ವಿತರಣೆಯಲ್ಲಿ ಅನ್ಯಾಯ ಮಾಡಿದೆ. ಚುನಾವಣಾ ಲಾಭಕ್ಕಾಗಿ ನಾಲ್ಕುವರೆ ಸಾವಿರ ಕೋಟಿ ಬರ ಪರಿಹಾರ ತನ್ನಲ್ಲಿಯೇ ಇಟ್ಟುಕೊಂಡು ಕೇವಲ ಭಾವನಾತ್ಮಕ ವಿಚಾರಗಳಡಿ ರಾಜಕಾರಣ ಮಾಡುತ್ತಿದೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.

ಅವರು ನಗರದ ಖಾನ್ ತೋಟ ಜನತಾ ಕಾಲನಿಯ ೨೦ನೇ ವಾರ್ಡ್‌ನಲ್ಲಿ ಮತಯಾಚಿಸಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಯಶಸ್ಸಿನಿಂದ ಕಂಗೆಟ್ಟ ಬಿಜೆಪಿ ವೃಥಾ ಆರೋಪಗಳಡಿ ರಾಜಕೀಯ ಮಾಡುತ್ತಿದೆ. ಸಂಕಷ್ಟಗಳ ಸಂದರ್ಭದಲ್ಲಿ ಸ್ಪಂದಿಸದ ಬಿಜೆಪಿಯನ್ನು ಸೋಲಿಸುವುದು ನಮ್ಮೆಲ್ಲರ ಸ್ವಾಭಿಮಾನದ ಪ್ರಶ್ನೆಯಾಗಿದೆ.ಅದಕ್ಕಾಗಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ನಾವು ಕೇಂದ್ರ ಸರ್ಕಾರಕ್ಕೆ ಬರ ಪರಿಹಾರದ ಹಣ ಕೇಳುತ್ತಿದ್ದೇವೆ, ಹೊರತು ಭಿಕ್ಷೆ ಕೇಳುತ್ತಿಲ್ಲ. ಆದರೆ ದೇಶದ ರಕ್ಷಕರಾಗಿರುವ ಮೋದಿ ಮತ್ತು ಅಮಿತ ಶಾ ಖಾಲಿ ಚೊಂಬು ತೆಗೆದುಕೊಳ್ಳುತ್ತಿದ್ದು, ಪ್ರಸಕ್ತ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಮಹದಾಯಿ ಯೋಜನೆಗೆ ಪರಿಸರ ಇಲಾಖೆ ಅನುಮತಿ ಕೊಡಿಸಿ ಎಂದು ಹಲವು ಬಾರಿ ಗೋಗರೆದರೂ ಚೊಂಬು ತೆಗೆದುಕೊಳ್ಳಿ ಎನ್ನುತ್ತಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಸತತ ಅನ್ಯಾಯ ಮಾಡುತ್ತ ಬಂದಿದ್ದು, ರಾಜ್ಯದ ಬಗ್ಗೆ ಅತೀವ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದರು.

ಇದು ಕನ್ನಡಿಗರನ್ನು ಕೆಣಕುವ ಪ್ರಯತ್ನ. ಹಾಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತಂದು ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರಳ ಮತ್ತು ಕ್ರಿಯಾಶೀಲ ವ್ಯಕ್ತಿತ್ವದ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಮತ ನೀಡಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ಶಹರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಅಸೂಟಿ, ನಗರಸಭೆ ಸದಸ್ಯೆ ಪರ್ವಿನ್ ಬಾನು ಮುಲ್ಲಾ, ಪ್ರಸನ್ನ ಶಾಬಾದಿಮಠ, ಹನುಮಂತಪ್ಪ ಮುಂಡರಗಿ, ಕೆ.ಆರ್. ಸುಣಗಾರ, ಎಂ.ಎ. ಮೌಲ್ವಿ, ಎಚ್.ಕೆ. ಮುಲ್ಲಾ, ಮೇಘರಾಜ ಕಲಬುರ್ಗಿ, ಮುಸ್ಕಾನ್ ಸಯ್ಯದ್ ಉಪಸ್ಥಿತರಿದ್ದರು.