ಕನ್ನಡಪ್ರಭ ವಾರ್ತೆ ಮೈಸೂರು

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನವನ್ನು ಹೆಚ್ಚಿಸುವುದಾಗಿ 6ನೇ ಗ್ಯಾರಂಟಿ ನೀಡಿದ್ದ ಸರ್ಕಾರ ಬಜೆಟ್‌ ನಲ್ಲಿ ಘೋಷಣೆ ಮಾಡದೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ ಅಂತರ್ಗತ) ಜಿಲ್ಲಾ ಸಮಿತಿಯವರು ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟಿಸಿದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಚುನಾವಣಾ ಪ್ರಣಾಳಿಕೆಯ ಭರವಸೆಯಂತೆ 6ನೇ ಗ್ಯಾರಂಟಿಯಾಗಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಗೌರವಧನ ಹೆಚ್ಚಿಸುವ ಪ್ರಸ್ತಾಪ ಮಾಡಲಾಗಿತ್ತು. ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ ಕಳೆದರೂ ಗೌರವಧನ ಹೆಚ್ಚಿಸುವ ಭರವಸೆ ಈಡೇರಿಸಿಲ್ಲ. ಈ ಬಾರಿಯ ಬಜೆಟ್ ನಿರಾಸೆಯುಂಟು ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸಕ್ತ ಬಜೆಟ್‌ ನಲ್ಲಿ ಗೌರವಧನ ಹೆಚ್ಚಿಸುವ ಹಾಗೂ 2011 ರಿಂದ ನಿವೃತ್ತರಾದ ವಯೋವೃದ್ಧರಿಗೆ ಗ್ರಾಚ್ಯುಯಿಟಿಯನ್ನು ಸರ್ಕಾರ ಘೋಷಿಸಲಿದೆ ಎಂಬ ನಮ್ಮ ನಿರೀಕ್ಷೆಯು ಹುಸಿಯಾಗಿದೆ. ಆದರೆ, ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವ ಗೌರವಧನವನ್ನು ಹೆಚ್ಚಳ ಮಾಡದೆ ಸೀರೆಯನ್ನು ನೀಡುವುದಾಗಿ ಘೋಷಿಸುವ ಮೂಲಕ ಮಹಿಳಾ ಕಾರ್ಮಿಕರಿಗೆ ಕನಿಷ್ಟ ವೇತನದ ನಿರಾಕರಣೆ ಮಾಡಿದಂತಾಗಿದೆ. ಬಜೆಟ್ ಅಂಗೀಕಾರಗೊಳ್ಳುವ ಮೊದಲು ತಿಳಿಸಿದಂತೆ ಸೀರೆ ನೀಡುವ ಬದಲು ಗೌರವಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ.ಮಹದೇವಮ್ಮ ನೇತೃತ್ವ ವಹಿಸಿದ್ದರು.ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ


ಕನ್ನಡಪ್ರಭ ವಾರ್ತೆ ಮೈಸೂರುಸಂಪೂರ್ಣ ಒಳಮೀಸಲಾತಿ ಜಾರಿಯೇ ಸಾಮಾಜಿಕ ನ್ಯಾಯದ ಪರಮ ಗುರಿ. ಸರ್ಕಾರ ಈಗ ನೇಮಕ ಮಾಡಲು ಹೊರಟಿರುವ 56432 ಹುದ್ದೆಗಳಲ್ಲಿ ಒಳ ಮೀಸಲಾತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಆಗ್ರಹಿಸಿ ಮಾದಿಗ ವಿದ್ಯಾರ್ಥಿಗಳ ಒಕ್ಕೂಟದವರು ಮಾನಸಗಂಗೋತ್ರಿಯ ಅಂಚೆ ಕಚೇರಿಯ ಮುಂಭಾಗದಲ್ಲಿ ಸೋಮವಾರ ಅಂಚೆ ಪತ್ರಗಳನ್ನು ಮುಖ್ಯಮಂತ್ರಿಗೆ ಕಳುಹಿಸುವ ಮೂಲಕ ಪ್ರತಿಭಟಿಸಿದರು.

ಒಳಮೀಸಲಾತಿಯನ್ನು ಅಳವಡಿಸದೆ ಹುದ್ದೆಗಳನ್ನು ನೇಮಕ ಮಾಡಿದರೆ ಮಾದಿಗರಿಗೆ ಮರಣ ಶಾಸನವಾಗಲಿದೆ. ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿಗಳಲ್ಲಿ ಬರುವ 101 ಉಪ ಜಾತಿಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಬೇಕು. ಇಲ್ಲವೆ ನಮಗೆ ದಯಾಮರಣ ಕಲ್ಪಿಸಿ ಕೊಡಿ ಎಂದು ಅವರು ಒತ್ತಾಯಿಸಿದರು.ಒಕ್ಕೂಟದ ಪದಾಧಿಕಾರಿಗಳು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಇದ್ದರು.