ಸಾರಾಂಶ
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಬಜೆಟ್ ವಿರುದ್ಧ ಶನಿವಾರ ಜಿಲ್ಲಾ ಬಿಜೆಪಿ ಕಾರ್ಯಾಲಯದ ಬಳಿ ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲೆಯಲ್ಲಿ ಬಿಜೆಪಿಯ ಶಾಸಕರೇ ಗೆದ್ದಿರುವುದರಿಂದ ರಾಜ್ಯದ ಕಾಂಗ್ರೆಸ್ ಸರ್ಕಾರ ಈ ಭಾಗವನ್ನು ಕಡೆಗಣಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ದೇಶಪೂರ್ವಕವಾಗಿಯೇ ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಯಾವುದೇ ಯೋಜನೆಗಳನ್ನು ನೀಡಿಲ್ಲ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಬಜೆಟ್ ವಿರುದ್ಧ ಶನಿವಾರ ಜಿಲ್ಲಾ ಬಿಜೆಪಿ ಕಾರ್ಯಾಲಯದ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.2023ರಲ್ಲಿ ಕಾಂಗ್ರೆಸ್ ಕೇವಲ ಮತದಾರರ ಓಲೈಕೆಯ ಉದ್ದೇಶದಿಂದ ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿದೆ. ಈಗ ಮುಸ್ಲಿಮರ ಓಲೈಕೆಗಾಗಿ ಬಹುಸಂಖ್ಯಾತ ಹಿಂದುಗಳನ್ನು ನಿರ್ಲಕ್ಷ್ಯಿಸುವ ಬಜೆಟ್ಟನ್ನು ಸಿದ್ದರಾಮಯ್ಯ ಮಂಡಿಸಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಒಟ್ಟಾರೆ ಮನಸ್ಥಿತಿಯನ್ನು ಬಿಂಬಿಸುವ ಬಜೆಟ್ ಆಗಿದೆ ಎಂದವರು ಹೇಳಿದರು.ಉಪಮುಖ್ಯಮಂತ್ರಿಗಳು, ಮಂತ್ರಿಗಳು ಉಡುಪಿಗೆ ಬಂದಾಗಲೆಲ್ಲಾ ಇಲ್ಲಿ ಪ್ರವಾಸೋದ್ಯಮಕ್ಕೆ ಬಹಳ ಅವಕಾಶಗಳಿವೆ. ಅದನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳುತ್ತಾರೆ. ಆದರೆ ಬಜೆಟ್‌ನಲ್ಲಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಒಂದೇ ಒಂದು ಯೋಜನೆ ಇಲ್ಲ. ಕೇವಲ 16ನೇ ಬಾರಿ ಬಜೆಟ್ ಮಂಡಿಸಿದ ದಾಖಲೆಗಾಗಿ ಸಿದ್ದರಾಮಯ್ಯ ಈ ಬಜೆಟ್ ಮಂಡಿಸಿದ್ದಾರೆ ಎಂದವರು ಟೀಕಿಸಿದರು.ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಸಿದ್ದರಾಮಯ್ಯ ಬಜೆಟ್ಟಿನಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಾಕಿದ್ದಾರೆ. ಈ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣ ಗರಿಷ್ಟ ಮಟ್ಟಕ್ಕೇರಿದೆ. ಜನತೆ ಇದನ್ನು ಗಮನಿಸುತಿದ್ದಾರೆ. ಕಾಂಗ್ರೆಸ್ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ ಎಂದರು.ಪ್ರತಿಭಟನೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಪ್ರಮುಖರಾದ ದಿನಕರ ಶೆಟ್ಟಿ ಹೆರ್ಗ, ಪ್ರಭಾಕರ ಪೂಜಾರಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಮಲಾಕ್ಷ ಹೆಬ್ಬಾರ್, ಶ್ರೀಕಾಂತ್ ನಾಯಕ್, ನಯನಾ ಗಣೇಶ್, ಶಿಲ್ಪಾ ಸುವರ್ಣ, ವೀಣಾ ಎಸ್.ಶೆಟ್ಟಿ, ಸಂಧ್ಯಾ ರಮೇಶ್, ನಳಿನಿ ಪ್ರದೀಪ್, ಶಿವಕುಮಾರ್ ಅಂಬಲಪಾಡಿ, ಶ್ರೀನಿಧಿ ಹೆಗ್ಡೆ, ರಜನಿ ಹೆಬ್ಬಾರ್, ತಾರಾ ಉಮೇಶ್, ಶಶಾಂಕ್ ಶಿವತ್ತಾಯ, ರಶ್ಮಿಕ ಬಾಲಕೃಷ್ಣ, ಸತ್ಯಾನಂದ ನಾಯಕ್, ಶ್ರೀಕಾಂತ್ ಕಾಮತ್, ಕಿರಣ್ ಕುಮಾರ್ ಬೈಲೂರು ಮುಂತಾದವರು ಭಾಗವಹಿಸಿದ್ದರು.