ಬೇಡ ಜಂಗಮ ಎಂದು ದಾಖಲಿಸಿ ದಲಿತರಿಗೆ ಅನ್ಯಾಯ

| Published : Jun 30 2024, 12:56 AM IST

ಬೇಡ ಜಂಗಮ ಎಂದು ದಾಖಲಿಸಿ ದಲಿತರಿಗೆ ಅನ್ಯಾಯ
Share this Article
  • FB
  • TW
  • Linkdin
  • Email

ಸಾರಾಂಶ

ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಜಂಗಮರ ಪೈಕಿ ಕೆಲವರು ತಮ್ಮ ಮಕ್ಕಳ ಜಾತಿಯನ್ನು ಬೇಡ ಜಂಗಮ ಎಂಬುದಾಗಿ ಶಾಲೆಗಳಲ್ಲಿ ದಾಖಲಿಸುತ್ತಿದ್ದಾರೆ. ಈಗಾಗಲೇ 3 ಸಾವಿರಕ್ಕೂ ಅಧಿಕ ಪಾಲಕರು ಹೀಗೆ ಬರೆಸಿದ್ದಾರೆ. ಇದರಿಂದ ನಿಜವಾದ ದಲಿತರ ಮಕ್ಕಳಿಗೆ ಅನ್ಯಾಯ ಆಗುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿ ಮುಖಂಡ ಹೆಗ್ಗೆರೆ ರಂಗಪ್ಪ ಒತ್ತಾಯಿಸಿದ್ದಾರೆ.

- ಸೂಕ್ತ ಕ್ರಮಕ್ಕೆ ಹೆಗ್ಗೆರೆ ರಂಗಪ್ಪ ಒತ್ತಾಯ । 3 ಸಾವಿರಕ್ಕೂ ಅಧಿಕ ವೀರಶೈವ ಜಂಗಮರಿಂದ ಜಾತಿ ಕಾಲಂನಲ್ಲಿ ನಮೂದು: ಆರೋಪ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಜಂಗಮರ ಪೈಕಿ ಕೆಲವರು ತಮ್ಮ ಮಕ್ಕಳ ಜಾತಿಯನ್ನು ಬೇಡ ಜಂಗಮ ಎಂಬುದಾಗಿ ಶಾಲೆಗಳಲ್ಲಿ ದಾಖಲಿಸುತ್ತಿದ್ದಾರೆ. ಈಗಾಗಲೇ 3 ಸಾವಿರಕ್ಕೂ ಅಧಿಕ ಪಾಲಕರು ಹೀಗೆ ಬರೆಸಿದ್ದಾರೆ. ಇದರಿಂದ ನಿಜವಾದ ದಲಿತರ ಮಕ್ಕಳಿಗೆ ಅನ್ಯಾಯ ಆಗುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿ ಮುಖಂಡ ಹೆಗ್ಗೆರೆ ರಂಗಪ್ಪ ಒತ್ತಾಯಿಸಿದರು.

ನಗರದ ಎಸ್‌ಪಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್‌ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ-ಪಂಗಡಗಳ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿಯಮಗಳ ಅನುಸಾರ ಜಿಲ್ಲೆಯಲ್ಲಿ ಯಾರೂ ಬೇಡ ಜಂಗಮರು ಇಲ್ಲ. ಆದರೂ, ವೀರಶೈವ ಜಂಗಮರು ಸಮಾಜದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುತ್ತಿದ್ದಾರೆ. ಜಾತಿ ಕಾಲಂನಲ್ಲಿ ಬೇಡ ಜಂಗಮ ಎಂಬುದಾಗಿ ದಾಖಲಿಸೋದು ತಡೆಯಬೇಕು ಎಂದರು.

ಸುತ್ತೋಲೆಗೆ ಕ್ರಮ-ಎಸ್‌ಪಿ:

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮಾತನಾಡಿ, 1ನೇ ತರಗತಿ ಪ್ರವೇಶದ ವೇಳೆ ಬೇಡ ಜಂಗಮ ಎಂಬುದಾಗಿ ಜಾತಿಯನ್ನು ವೀರಶೈವ ಜಂಗಮ ಸಮಾಜದ ಕೆಲವರು ಬರೆಸುತ್ತಿರುವ ಬಗ್ಗೆ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಜಾತಿ ಪ್ರಮಾಣ ಪತ್ರಗಳ ನೈಜತೆ ಪರಿಶೀಲಿಸುವ ಬಗ್ಗೆ ಜಿಲ್ಲಾಧಿಕಾರಿ ಅವರಿಂದ ಡಿಡಿಪಿಐ ಮುಖಾಂತರ ಎಲ್ಲ ಶಾಲಾ ಮುಖ್ಯೋಪಾಧ್ಯಾಯರಿಗೆ ಸುತ್ತೋಲೆ ಹೊರಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಾರ್ಮಿಕ ಮುಖಂಡ ಆವರಗೆರೆ ವಾಸು ಮಾತನಾಡಿ, ಆವರಗೆರೆ ಗ್ರಾಮದ ರುದ್ರಭೂಮಿ ಅತಿಕ್ರಮಣಗೊಂಡಿದೆ ಶವ ಸಂಸ್ಕಾರಕ್ಕೆ ಹೋಗುವವರಿಗೆ ದಾರಿ ಸಹ ಇಲ್ಲ. ತಕ್ಷಣ ಈ ಬಗ್ಗೆ ಗಮನಹರಿಸಬೇಕು. ಮಟ್ಟಿಕಲ್ಲು ಕೊಳಚೆ ಪ್ರದೇಶದಲ್ಲಿ 5 ದಶಕದಿಂದ ವಾಸಿಸುತ್ತಿರುವ ದಲಿತ ಕುಟುಂಬಗಲಿಗೆ ಶೌಚಾಲಯ ಸಹ ಇಲ್ಲ. ಇಂದಿಗೂ ಬಯಲಿಗೆ ಶೌಚಾಲಯಕ್ಕೆ ಹೋಗುವ ದುಸ್ಥಿತಿ ಇದೆ. ಶೌಚಕ್ಕೆ ಹೋಗಲು ಕತ್ತಲಾಗುವವರೆಗೆ ಅಥವಾ ಸೂರ್ಯ ಉದಯಿಸುವುದರೊಳಗೆ ಹೋಗವ ಸ್ಥಿತಿ ಇದೆ. ವಾಸ್ತವ ಹೀಗಿದ್ದರೂ ಜಿಲ್ಲೆಯನ್ನು ಬಯಲುಶೌಚಮುಕ್ತ ಜಿಲ್ಲೆಯಾಗಿದ್ದು ಹೇಗೆ ಎಂದು ಪ್ರಶ್ನಿಸಿದರು. ಆಗ ಪ್ರತಿಕ್ರಿಯಿಸಿದ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ, ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ವಿಚಾರ ತರಲಾಗುವುದು ಎಂದರು.

ಹೊನ್ನಾಳಿಯ ಜಿ.ಎಸ್. ತಮ್ಮಣ್ಣ ಜಾತಿ ನಿಂದನೆ ಪ್ರಕರಣದಲ್ಲಿ ದೂರು ದಾಖಲಿಸಿದ್ದರೂ, ಆರೋಪಿಗಳನ್ನು ಖುಲಾಸೆಗೊಳಿಸಲಾಗುತ್ತಿದೆ ಎಂದು ದೂರಿದರು. ಅದಕ್ಕೆ ಎಸ್‌ಪಿ ಅವರು, ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಸಾಕ್ಷಿಗಳು ತಿರುಗಿ ಬೀಳುವ ಕಾರಣದಿಂದ ಶೇ,80-85 ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿಲ್ಲ. ನ್ಯಾಯಾಲಯದಲ್ಲಿ ಸಾಕ್ಷಿಗಳು ವಿಚಾರಣೆ ಪೂರ್ಣಗೊಳ್ಳುವವರೆಗೂ ಸ್ಥಿರವಾಗಿದ್ದರೆ ಮಾತ್ರ ಶಿಕ್ಷೆ ಕೊಡಿಸಲು ಸಾಧ್ಯ ಎಂದರು.

ಆರೋಪಿಗಳು ಯಾವುದೇ ಪ್ರಕರಣದಲ್ಲಿ ಖುಲಾಸೆಯಾದಾಗ ಅದರ ಬಗ್ಗೆ ನ್ಯಾಯಾಲಯದ ಉಸ್ತುವಾರಿ ಸಮಿತಿಯಿಂದ ಪರಿಶೀಲನೆ ನಡೆಯುತ್ತದೆ. ಖುಲಾಸೆಗೆ ಕಾರಣ ಏನೆಂಬುದನ್ನು ಪರಿಗಣಿಸಲಾಗುತ್ತದೆ. ಸಾಕ್ಷಿಗಳು ತಿರುಗಿ ಬೀಳುವುದೂ ಸಹ ಖುಲಾಸೆಗೆ ಪ್ರಮುಖ ಕಾರಣ ಆಗುತ್ತಿರುವುದು ಅನೇಕ ಪ್ರಕರಣಗಳಲ್ಲಿಯೂ ಕಂಡುಬಂದಿದೆ ಎಂದು ಹೊನ್ನಾಳಿಯ ಜಿ.ಎಸ್. ತಿಮ್ಮಣ್ಣ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು.

ಚನ್ನಗಿರಿಯ ಚಿರಂಜೀವಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರನ್ನು ಪೊಲೀಸರು ವಶಕ್ಕೆ ಪಡೆದ ಬೆನ್ನಲ್ಲೇ ಬಿಡುಗಡೆ ಮಾಡುತ್ತಿದ್ದಾರೆ ಎಂದು ದೂರಿದರು. ದಲಿತ ಮುಖಂಡ ಸೂರ್ಯಪ್ರಕಾಶ ಮಾತನಾಡಿ, ದಾವಣಗೆರೆ ಮಹಾನಗರದ ಪರಿಶಿಷ್ಟರ ಕಾಲನಿಗಳಲ್ಲಿ ದಾವಣಗೆರೆ ಒನ್ ಕೇಂದ್ರ ಸೌಲಭ್ಯವಿಲ್ಲ. ಅಂತಹ ಪ್ರದೇಶಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಉಪವಿಭಾಗಾಧಿಕಾರಿ ದುರ್ಗಾಶ್ರೀ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ.ಸಂತೋಷ, ಸಮಾಜ ಕಲ್ಯಾಣ ಉಪನಿರ್ದೇಶಕ ನಾಗರಾಜ, ಅಧಿಕಾರಿಗಳು, ವಿವಿಧ ಸಂಘಟನೆ, ಸಮುದಾಯಗಳ ಮುಖಂಡರು ಸಭೆಯಲ್ಲಿದ್ದರು.

- - - -29ಕೆಡಿವಿಜಿ3, 4:

ದಾವಣಗೆರೆ ಎಸ್‌ಪಿ ಕಚೇರಿಯಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳ ಕುಂದುಕೊರತೆಗಳ ಸಭೆ ಎಸ್‌ಪಿ ಉಮಾ ಪ್ರಶಾಂತ ಅಧ್ಯಕ್ಷತೆಯಲ್ಲಿ ನಡೆಯಿತು.