ವಕ್ಫ್ ಮಂಡಳಿಯಿಂದ ರೈತರಿಗೆ ಅನ್ಯಾಯ

| Published : Nov 06 2024, 11:48 PM IST

ಸಾರಾಂಶ

ವಕ್ಫ್ ಮಂಡಳಿಯ ಗೊಂದಲದಿಂದ ರೈತರಿಗೆ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಕಚೇರಿಯ ಶಿರೆಸ್ತೇದಾರ್ ನಾಗೇಂದ್ರ ಅವರಿಗೆ ಮನವಿ ‌ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹನೂರುವಕ್ಫ್ ಮಂಡಳಿಯ ಗೊಂದಲದಿಂದ ರೈತರಿಗೆ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಕಚೇರಿಯ ಶಿರೆಸ್ತೇದಾರ್ ನಾಗೇಂದ್ರ ಅವರಿಗೆ ಮನವಿ ‌ಸಲ್ಲಿಸಿದರು.ಹನೂರು ಪಟ್ಟಣದ ತಹಸೀಲ್ದಾರ್ ಕಚೇರಿಯ ಬಳಿ ಮನವಿ ಸಲ್ಲಿಸಿ ಬಳಿಕ ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ, ವಕ್ಫ್ ಮಂಡಳಿ ಎಂಬ ಗುಮ್ಮಾ ಸ್ವಾತಂತ್ರ್ಯ ಪೂರ್ವದಲ್ಲಿ ಸೃಷ್ಟಿಯಾಗಿದ್ದು ಸ್ವಾತಂತ್ರ್ಯನಂತರ ಹಲವು ಸಂದರ್ಭಗಳಲ್ಲಿ ಇದಕ್ಕೆ ತಿದ್ದುಪಡಿಗಳನ್ನು ತರಲಾಗಿದೆ ಎಂಬ ಮಾಹಿತಿ ಇತ್ತೀಚಿಗೆ ಜನ ಸಾಮಾನ್ಯರಲ್ಲಿ ಹರಿದಾಡುತ್ತಿದ್ದು, ಈಗ ರಾಜ್ಯದ ಹಲವಾರು ಜಿಲ್ಲೆಯ ಭಾಗಗಳಲ್ಲಿ ರೈತರ ಪಿತ್ರಾರ್ಜಿತ ಅಸ್ತಿಯನ್ನು ಹೊಂದಿರುವ ಹಾಗೂ ಸರ್ಕಾರ ಗ್ರಾಂಟ್ ನೀಡಿರುವ ಭೂಮಿಯ ರೈತರಿಗೆ ನೋಟಿಸ್‌ಗಳನ್ನು ನೀಡಲಾಗಿದ್ದು, ವಕ್ಫ್ ಕಾಯ್ದೆ ರೈತರಿಗೆ ಮರಣಶಾಸನವಾಗಿದ್ದು ರೈತರು ಭೂಮಿಯನ್ನು ಕಳೆದುಕೊಳ್ಳುವ ಆತಂಕ ಸೃಷ್ಟಿಯಾಗಿದೆ.

ತಲತಲಾಂತರದಿಂದ ಕೃಷಿ ನಂಬಿ ಜೀವನ ನಡೆಸುತ್ತಿರುವ ರೈತ ಕುಟುಂಬಗಳಿಗೆ ಯಾವುದೇ ತೊಂದರೆ ಆಗದಂತೆ ರೈತ ಕುಟುಂಬಗಳಿಗೆ ಭದ್ರತೆ ನೀಡಬೇಕೆಂದು ಹಾಗೂ ಈಗಾಗಲೇ ಪಹಣಿಯಲ್ಲಿ 11ನೇ ಕಾಲಂನಲ್ಲಿ ನೋಂದಾಯಿಸಿರುವ ವಕ್ಫ್ ಹೆಸರನ್ನು ತೆಗೆಯಬೇಕು. ಇನ್ನು ಮುಂದೆ ಯಾವುದೇ ರೈತರಿಗೆ ನೋಟಿಸ್ ನೀಡದಂತೆ ಸರಕಾರವು ವಕ್ಫ್ ಮಂಡಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕೂಡ್ಲೂರು ವೆಂಕಟೇಶ್ ಆರ್ಫದ್ ರಾಜ್ ಸೇರಿದಂತೆ ನಾಗರಾಜು ರಾಜೆಂದ್ರ ಹಾಜರಿದ್ದರು.