ಕುಮಟಾ: ತಾಲೂಕು ಆಡಳಿತ ಸೌಧದ ಸಹಾಯಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರಿಂದ ಸಾರ್ವಜನಿಕರಿಂದ ಕುಂದು-ಕೊರತೆಗಳ ಅಹವಾಲು ಸ್ವೀಕೃತಿ ಸಭೆ ನಡೆಯಿತು. ಗೋಕರ್ಣ ಬೇಲೆಹಿತ್ತಲ, ದುಬ್ಬನಸಸಿ, ಗಂಗಾವಳಿ ಗಂಗೆ ಕೊಳ್ಳಭಾಗದ ಮೀನುಗಾರ ಸಮಾಜದವರು ಗೋಕರ್ಣ ಸುತ್ತಮುತ್ತಲ ಕಡಲ ತೀರಗಳಲ್ಲಿ ಜಲಸಾಹಸ ಕ್ರೀಡೆ ನಡೆಸಲು ನೀಡಿದ ಟೆಂಡರಿನಲ್ಲಿ ಜಲ ಕ್ರೀಡೆಗಳ ಸುರಕ್ಷತೆ ಮತ್ತು ಪ್ರವಾಸಿಗರ ಹಿತದೃಷ್ಟಿಯಿಂದ ಟೆಂಡರ್ ಪ್ರದೇಶದ ಸುತ್ತಮುತ್ತ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮೀನುಗಾರಿಕೆ ಚಟುವಟಿಕೆ ಕೈಗೊಳ್ಳುವಂತಿಲ್ಲ ಎಂದು ಆದೇಶ ಮಾಡಿದ್ದಾರೆ. ಈ ರೀತಿ ಎರಡು ಕಿಲೋಮೀಟರ್ ಸಮುದ್ರದ ವರೆಗೆ ಮೀನುಗಾರಿಕೆ ನಿಷೇಧ ಮಾಡುವುದರಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ತೀವ್ರ ಧಕ್ಕೆಯಾಗಲಿದೆ. ಟೆಂಡರ್ ಅನ್ನು ಪುನಃ ಪರಿಶೀಲಿಸಿ ಮೀನುಗಾರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಕುಮಟಾ ಪಟ್ಟಣದಲ್ಲಿ ವಾಹನ ದಟ್ಟಣೆ ತೀರಾ ಆಗುತ್ತಿದ್ದು, ಪಾದಚಾರಿಗಳು ಓಡಾಟ ನಡೆಸಲು ತೀರಾ ತೊಂದರೆ ಉಂಟಾಗುತ್ತಿದೆ. ಪಟ್ಟಣ ವ್ಯಾಪ್ತಿಯ ರಸ್ತೆಗಳು ತೀರಾ ಇಕ್ಕಟ್ಟಾಗಿದ್ದು, ಇಲ್ಲಿ ವಾಹನ ಸಂಚಾರ ಮಾಡಲು ಕಷ್ಟವಾಗುತ್ತಿದೆ ಎಂಬ ವಿಚಾರ ಪ್ರಸ್ತಾಪವಾಯಿತು. ಕೂಡಲೇ ಜಿಲ್ಲಾಧಿಕಾರಿ ಅವರು ಸಿಪಿಐ ಯೋಗೇಶ ಕೆ.ಎಂ. ಅವರಿಗೆ ಮಾರ್ಗದರ್ಶನ ನೀಡಿ, ವಾಹನ ದಟ್ಟಣೆ ಉಂಟಾಗುತ್ತಿರುವ ಸ್ಥಳದಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸೂಚನೆ ನೀಡಿದರು.

ಮಣಕಿ ಮೈದಾನದ ಪ್ರವೇಶ ದ್ವಾರಕ್ಕೆ ಅಳವಡಿಸಲಾಗಿರುವ ಬೀಗವನ್ನು ತೆರವುಗೊಳಿಸಬೇಕು ಎಂದು ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಮಂಜು ಜೈನ್ ಜಿಲ್ಲಾಧಿಕಾರಿಗೆ ವಿನಂತಿಸಿದರು. ದಲಿತ ಮುಖಂಡರು ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ತಮ್ಮ ಅಹವಾಲನ್ನು ನೀಡಿದರು.

ಸಭೆಯ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಇಂದು ಕುಮಟಾದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕೃತಿ ಸಭೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ಸುಮಾರು ೯೦ಕ್ಕೂ ಅಧಿಕ ಅಹವಾಲುಗಳನ್ನು ಸ್ವೀಕರಿಸಿ ಕೆಲವೊಂದಕ್ಕೆ ಸ್ಥಳದಲ್ಲೇ ಪರಿಹಾರ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇಲ್ಲಿರುವ ವಿವಿಧ ಸಮಸ್ಯೆಗಳಾದ ಸಂಪರ್ಕ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಮಸ್ಯೆ, ಜಾಗದ ಸಮಸ್ಯೆಗಳ ಅಹವಾಲನ್ನು ಸ್ವೀಕರಿಸಲಾಗಿದೆ. ಮಳೆಗಾಲ ಆರಂಭವಾಗುದಕ್ಕೂ ಮೊದಲು ಇಲ್ಲಿರುವ ಪ್ರವಾಹಪೀಡಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ವಹಿಸಲು ಸೂಚಿಸಲಾಗಿದೆ. ತಾಲೂಕಿನಲ್ಲಿರುವ ಸಂಚಾರದಟ್ಟಣೆ ಸಮಸ್ಯೆಗೆ ಪರಿಹಾರ ನೀಡಲು ಅಗತ್ಯ ಮಾರ್ಗದರ್ಶನ ನೀಡುವ ಉದ್ದೇಶದಿಂದ ಜಿಲ್ಲಾಡಳಿತದಿಂದ ಸಭೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಪೂರ್ಣ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮಾಡಿದ ಸಂತೆಗುಳಿಯ ಪಂಚಾಯಿತದ ಕಾರ್ಯದರ್ಶಿ ಶಂಭು ಎಂ. ನಾಯಕ್ ಹಾಗೂ ಪಿಡಿಒ ವಿನಯಕುಮಾರ ಅವರನ್ನು ಸನ್ಮಾನಿಸಲಾಯಿತು. ಶಾಸಕ ದಿನಕರ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿಲೀಷ ಶಶಿ, ಉಪವಿಭಾಗಾಧಿಕಾರಿ ಪಿ. ಶ್ರವಣ ಕುಮಾರ್, ತಹಸೀಲ್ದಾರ್‌ ಶ್ರೀಕೃಷ್ಣ ಕಾಮ್ಕರ್, ತಾಪಂ ಇಒ ಆರ್.ಎಲ್. ಭಟ್, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.