ಗದಗ, ರೋಣ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ನರಗುಂದ ತಾಲೂಕುಗಳನ್ನು ಪಟ್ಟಿಯಿಂದ ಹೊರಗಿಟ್ಟಿದೆ. ರಾಜ್ಯಾದ್ಯಂತ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಸರ್ಕಾರದ ಪಟ್ಟಿಯಲ್ಲಿ ಜಿಲ್ಲೆಯ ಒಂದೇ ಒಂದು ತಾಲೂಕು ಸ್ಥಾನ ಪಡೆದಿದ್ದು, ಇದು ಈಗ ಜಿಲ್ಲೆಯ ಇನ್ನುಳಿದ ತಾಲೂಕಿನ ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿವೆ.
ಶಿವಕುಮಾರ ಕುಷ್ಟಗಿ
ಗದಗ: ಮುಂಗಾರು ಮಳೆ ಕೈಕೊಟ್ಟು ಜಿಲ್ಲೆಯ ಕೃಷಿ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ನಡುವೆಯೇ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಜಿಲ್ಲೆಗೆ ಭಾರೀ ನಿರಾಸೆ ಎದುರಾಗಿದೆ. ಜಿಲ್ಲೆಯ 7 ತಾಲೂಕುಗಳ ಪೈಕಿ ಗಜೇಂದ್ರಗಡವನ್ನು ಮಾತ್ರ ಬರಪೀಡಿತ ತಾಲೂಕು ಎಂದು ಘೋಷಿಸಲಾಗಿದೆ.ಗದಗ, ರೋಣ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ನರಗುಂದ ತಾಲೂಕುಗಳನ್ನು ಪಟ್ಟಿಯಿಂದ ಹೊರಗಿಟ್ಟಿದೆ. ರಾಜ್ಯಾದ್ಯಂತ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಸರ್ಕಾರದ ಪಟ್ಟಿಯಲ್ಲಿ ಜಿಲ್ಲೆಯ ಒಂದೇ ಒಂದು ತಾಲೂಕು ಸ್ಥಾನ ಪಡೆದಿದ್ದು, ಇದು ಈಗ ಜಿಲ್ಲೆಯ ಇನ್ನುಳಿದ ತಾಲೂಕಿನ ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿವೆ.
₹218 ಕೋಟಿಗೂ ಮೀರಿ ಬೆಳೆಹಾನಿ: ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರ ನೇತೃತ್ವದಲ್ಲಿ ಆ. 7ರಂದು ನಡೆದ ಸಭೆಯಲ್ಲಿ ಚರ್ಚಿಸಿ, ರೈತರ ಜಮೀನುಗಳಿಗೆ ನೇರವಾಗಿ ಸಚಿವರೇ ಭೇಟಿ ನೀಡಿ, ಮಳೆ ಕೊರತೆಯಿಂದಾಗಿ ಎಲ್ಲ ಬೆಳೆಗಳು ಒಣಗಿವೆ, (ಆ. 13ರಂದು) ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಜಿಲ್ಲೆಯಲ್ಲಿ ಶೇ. 32ರಷ್ಟು ಮಳೆ ಕೊರತೆಯಾಗಿದೆ. ಇದರಿಂದಾಗಿ ಜಂಟಿ ಸಮೀಕ್ಷೆಯ ಪ್ರಕಾರ ₹218 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ತಿಳಿಸಿದ್ದಾರೆ.ಇದು ಸಣ್ಣ ಹಾನಿಯಲ್ಲ: ಜಿಲ್ಲೆಯ ಪ್ರಮುಖ ಮಳೆ ಆಧಾರಿತ ಬೆಳೆಗಳಾದ ಹೆಸರು, ಶೇಂಗಾ, ಮೆಕ್ಕೆಜೋಳ, ಜೋಳ, ಹತ್ತಿ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳು ತೀವ್ರವಾಗಿ ಹಾನಿಗೀಡಾಗಿವೆ. ಗದಗ, ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ, ರೋಣ, ನರಗುಂದ ಹಾಗೂ ಗಜೇಂದ್ರಗಡ ತಾಲೂಕಿನ ಬಹುತೇಕ ಭಾಗಗಳಲ್ಲಿ ಹೆಸರು ಮತ್ತು ಶೇಂಗಾ ಬೆಳೆಗಳು ಸಂಪೂರ್ಣ ನಾಶವಾಗಿರುವ ಕುರಿತು ವರದಿ ದಾಖಲಾಗಿದೆ. ಆದರೆ ಆ. 27ರಂದು ಸರ್ಕಾರ ಹೊರಡಿಸಿದ ಅಂತಿಮ 101 ತಾಲೂಕುಗಳ ಪಟ್ಟಿಯಲ್ಲಿ ಜಿಲ್ಲೆಯ ಗಜೇಂದ್ರಗಡ ಮಾತ್ರ ಸೇರಿದ್ದು ಜಿಲ್ಲೆಯಲ್ಲಿ ಸಂಭವಿಸಿರುವುದು ಸಣ್ಣ ಬೆಳೆಹಾನಿಯಲ್ಲ ಎನ್ನುವುದನ್ನು ಸರ್ಕಾರ ಗಮನಿಸಬೇಕು.
ಎಡವಿತೇ ಜಿಲ್ಲಾಡಳಿತ?: ಜಿಲ್ಲಾಡಳಿತದ ತಾಲೂಕುವಾರು ಸಮೀಕ್ಷೆ, ಬೆಳೆಹಾನಿ, ಮಳೆ ಕೊರತೆ ಹಾಗೂ ಗ್ರೌಂಡ್ ಟ್ರೂಥಿಂಗ್ ವರದಿಯಲ್ಲಿ ಎಲ್ಲ ತಾಲೂಕುಗಳ ವಾಸ್ತವ ಪರಿಸ್ಥಿತಿ ಸರ್ಕಾರದ ಮುಂದೆ ಸಮರ್ಪಕವಾಗಿ ಪ್ರತಿಬಿಂಬಿತವಾಗಿಲ್ಲ. ಇಲ್ಲವೇ ಜಿಲ್ಲಾಡಳಿತದಿಂದ ಸಮರ್ಪಕ ವರದಿ ಹೋಗಿದ್ದರೂ ಕೇಂದ್ರದ ಬರ ಕೈಪಿಡಿ 2020ರ ಮಾನದಂಡದ ಆಧಾರದಲ್ಲಿ ಸರ್ಕಾರ ಅಂತಿಮವಾಗಿ ಗಜೇಂದ್ರಗಡವನ್ನಷ್ಟೇ ಅರ್ಹವೆಂದು ಪರಿಗಣಿಸಿದೆ ಎನ್ನುವ ಚರ್ಚೆಗಳು ನಡೆಯುತ್ತಿವೆ. ಆದರೆ ಲಭ್ಯವಿರುವ ಮಾಹಿತಿಯಲ್ಲಿ ಈ ಎರಡರಲ್ಲಿ ಯಾವುದು ನಿಜ ಎಂಬುದಕ್ಕೆ ಸ್ಪಷ್ಟ ಅಧಿಕೃತ ವಿವರಣೆ ಇನ್ನೂ ಹೊರಬರಬೇಕಿದೆ.ಮಳೆ ಕೊರತೆ ವಿವರ: ಗಜೇಂದ್ರಗಡ ಶೇ. 47, ಬರಪೀಡಿತ ಘೋಷಣೆ, ಗದಗ ಶೇ. 43, ಮುಂಡರಗಿ ಶೇ. 33, ಶಿರಹಟ್ಟಿ ಶೇ. 27, ರೋಣ ಶೇ. 25, ಲಕ್ಷ್ಮೇಶ್ವರ ಶೇ. 18, ನರಗುಂದ ಶೇ. 12ರಷ್ಟು ಕೊರತೆ ಉಂಟಾಗಿದ್ದು, ಎಲ್ಲ ತಾಲೂಕುಗಳು ಬರ ಘೋಷಣೆಗೆ ಪೂರಕ ಸ್ಥಿತಿಯನ್ನು ಹೊಂದಿವೆ.
ಗಜೇಂದ್ರಗಡ ಮಾತ್ರ ಏಕೆ ಅರ್ಹವಾಯಿತು?ಗದಗ ಜಿಲ್ಲಾಧಿಕಾರಿಗಳು ರೈತರೊಂದಿಗೆ ಅದೇಗೆ ವರ್ತಿಸಿದ್ದರು ಎನ್ನುವುದಕ್ಕೆ ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಬಲು ಜೋರಾಗಿಯೇ ಹರಿದಾಡುತ್ತಿವೆ. ಇದರ ಮಧ್ಯೆ ಜಿಲ್ಲೆಯ ರೈತರಿಗೆ ಮತ್ತೊಮ್ಮೆ ಅನ್ಯಾಯವಾಗಿರುವುದು ಸ್ಪಷ್ಟವಾಗುತ್ತಿದೆ. ಯಾವ ತಾಲೂಕಿಗೆ ಯಾವ ಮಾನದಂಡದಲ್ಲಿ ಅರ್ಹತೆ ಸಿಗಲಿಲ್ಲ?, ಜಿಲ್ಲಾಡಳಿತ ಸಲ್ಲಿಸಿದ ಬೆಳೆಹಾನಿ ವರದಿಯಲ್ಲಿ ಎಷ್ಟು ಹೆಕ್ಟೇರ್ ಹಾನಿ ತೋರಿಸಲಾಗಿದೆ?, ಯಾವ ತಾಲೂಕಿನಲ್ಲಿ ಎಷ್ಟು ಪ್ರಮಾಣದ ಬೆಳೆ ಒಣಗಿದೆ ಎಂದು ದಾಖಲಿಸಲಾಗಿದೆ?, ಜಿಲ್ಲಾಡಳಿತದ ₹218 ಕೋಟಿಗೂ ಅಧಿಕ ಬೆಳೆಹಾನಿ ಅಂದಾಜಿನಲ್ಲಿ ಯಾವ ತಾಲೂಕುಗಳ ಪಾಲು ಎಷ್ಟು? ಗಜೇಂದ್ರಗಡ ಮಾತ್ರ ಏಕೆ ಅರ್ಹವಾಯಿತು? ಎಂದು ರೈತ ಮುಖಂಡರಾದ ಶಂಕರಗೌಡ ಜಾಯನಗೌಡ್ರ, ಬಸವರಾಜ ಸಾಬಳೆ, ಉಮೇಶ ಮರಿಚೆಪ್ಪನವರ, ಬಸವರಾಜ ತಳವಾರ ಮುಂತಾದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಕ್ರಿಯೆ ನೀಡದ ಡಿಸಿ
ಬರಪೀಡಿತ ತಾಲೂಕುಗಳ ಘೋಷಣೆ ಕುರಿತು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಪ್ರತಿಕ್ರಿಯೆ ನೀಡುತ್ತಿಲ್ಲ. ಅವರ ಆಪ್ತ ಸಹಾಯಕರ ಮೂಲಕ ಮನವಿ ಮಾಡಿದರೂ ಅವರು ಪ್ರತಿಕ್ರಿಯೆ ಕೊಡುತ್ತಿಲ್ಲ.